ಏಳು ಬಂಡಾಯ ಶಾಸಕರ ನಾಮಪತ್ರ ಅನರ್ಹಕ್ಕೆ ಜೆಡಿಎಸ್ ಮನವಿ
ಬೆಂಗಳೂರು, ಎ. 25: ಜೆಡಿಎಸ್‌ನ ಏಳು ಮಂದಿ ಬಂಡಾಯ ಶಾಸಕರ ನಾಮಪತ್ರಗಳನ್ನು ಅನರ್ಹಗೊಳಿಸಬೇಕೆಂದು ಜೆಡಿಎಸ್ ಅಭ್ಯರ್ಥಿಗಳು ರಾಜ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಜೆಡಿಎಸ್‌ನ ಏಳು ಮಂದಿ ಬಂಡಾಯ ಶಾಸಕರ ಸದಸ್ಯತ್ವ ವಿವಾದದಲ್ಲಿರುವ ಸಂದರ್ಭದಲ್ಲೆ ಅವರು ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದು, ಸರಿಯಲ್ಲ. ಹೀಗಾಗಿ ಅವರ ನಾಮಪತ್ರಗಳನ್ನು ಅನರ್ಹಗೊಳಿಸಬೇಕೆಂದು ತಕರಾರು ಅರ್ಜಿಯನ್ನು ಜೆಡಿಎಸ್ ಆಯೋಗಕ್ಕೆ ಸಲ್ಲಿಸಿದೆ.
ಶಾಸಕರಾದ ಝಮೀರ್ ಅಹ್ಮದ್ ಖಾನ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿ ಸಿದ್ದೇಗೌಡ ಹಾಗೂ ಭೀಮಾ ನಾಯ್ಕಾ ಜೆಡಿಎಸ್ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ.
ಈ ಸಂಬಂಧ ಜೆಡಿಎಸ್ ಈಗಾಗಲೇ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ದೂರು ನೀಡಿದ್ದು, ಇದೇ ಪ್ರಕರಣ ಹೈಕೋರ್ಟ್‌ನಲ್ಲಿದ್ದು, ಮೇ 7ರೊಳಗೆ ತೀರ್ಪು ಪ್ರಕಟಿಸುವಂತೆ ವಿಧಾನಸಭಾ ಸ್ಪೀಕರ್ ಕೋಳಿವಾಡ ಅವರಿಗೆ ಹೈಕೋರ್ಟ್ ಸೂಚಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.