ಸರಕಾರಿ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಆಂದೋಲನ
ಬೆಂಗಳೂರು, ಎ.25: ಒಂದನೆ ತರಗತಿಯಿಂದ ಪದವಿಯವರೆಗೆ ಸರಕಾರಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಂದೋಲನ ಆರಂಭಿಸಿದೆ.
ರಾಜ್ಯದಲ್ಲಿ 43,712 ಸರಕಾರಿ ಪ್ರಾಥಮಿಕ ಶಾಲೆ, 4618 ಪ್ರೌಢಶಾಲೆ ಹಾಗೂ 1210 ಪಿಯು ಕಾಲೇಜುಗಳಿವೆ. 2017-18ನೆ ಸಾಲಿನಲ್ಲಿ ಪ್ರಾಥಮಿಕ ಶಾಲೆಗೆ 38,60,203, ಪ್ರೌಢಶಾಲೆಗೆ 597332ಸೇರಿ 1ರಿಂದ 10ನೆ ತರಗತಿಗೆ 4457353 ವಿದ್ಯಾರ್ಥಿಗಳು ದಾಖಲಾಗಿದ್ದರು. ಮುಂಬರುವ ಶೈಕ್ಷಣಿಕ ಸಾಲಿನಲ್ಲಿ 50 ಸಾವಿರ ವಿದ್ಯಾರ್ಥಿಗಳನ್ನು ದಾಖಲಿಸಲು ಕಾರ್ಯತಂತ್ರ ರೂಪಿಸಲಾಗಿದೆ.
ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಕ್ರಿಯೆ ಆರಂಭಿಸಿದ್ದು, ತಮ್ಮ ಶಾಲಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿದ್ದ ಮಕ್ಕಳ ಸಂಖ್ಯೆ ಸಂಗ್ರಹಿಸಿ, ಸರಕಾರಿ ಶಾಲೆಗಳಲ್ಲಿ ನೀಡುತ್ತಿರುವ ಸೌಲಭ್ಯಗಳನ್ನು ಪಾಲಕ-ಪೋಷಕರಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಾಂಶುಪಾಲರಿಗೆ ಜವಾಬ್ದಾರಿ: ಸರಕಾರಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಜವಾಬ್ದಾರಿಯನ್ನು ಪ್ರಾಂಶುಪಾಲರಿಗೆ ವಹಿಸಲಾಗಿದೆ. ಸಮೀಪದ ಪ್ರೌಢಶಾಲೆಗಳಲ್ಲಿರುವ ಎಸೆಸೆಲ್ಸಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ, ಎಸೆಸೆಲ್ಸಿ ಫಲಿತಾಂಶ ಹೊರ ಬರುತ್ತಿದ್ದಂತೆ ಶಾಲೆಗಳಿಗೆ ವರ್ಗಾವಣೆ ಪತ್ರ ಪಡೆಯಲು ಬರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಮೀಪದ ಸರಕಾರಿ ಪಿಯು ಕಾಲೇಜಿಗೆ ಸೇರಿಕೊಳ್ಳುವಂತೆ ಉತ್ತೇಜಿಸಲು ನಿರ್ಧರಿಸಲಾಗಿದೆ.
ಸರಕಾರಿ ಪದವಿ ಕಾಲೇಜಿನಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಅಧಿಕಾರಿಗಳು ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ 400ಕ್ಕೂ ಅಧಿಕ ಕಾಲೇಜುಗಳಿದ್ದು, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಆಂದೋಲನ ನಡೆಸಲು ಮುಂದಾಗಿದ್ದಾರೆ.
ಒಟ್ಟಾರೆ 2018-19ನೆ ಸಾಲಿನ ಶೈಕ್ಷಣಿಕ ವರ್ಷದಲ್ಲಿ 45ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸರಕಾರಿ ಶಾಲಾ-ಕಾಲೇಜುಗಳತ್ತ ಆಕರ್ಷಿಸುವುದು ಆಂದೋಲನದ ಗುರಿಯಾಗಿದೆ. ಪ್ರಸ್ತುತ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಉಚಿತ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಪೌಷ್ಠಿಕಾಂಶಯುಕ್ತ ಮಾತ್ರೆ, ವಿದ್ಯಾರ್ಥಿನಿಯರಿಗೆ ಶುಲ್ಕ ರಹಿತ ಶಿಕ್ಷಣ, ಉಚಿತ ಲ್ಯಾಪ್‌ಟಾಪ್ ಹೀಗೆ ಹತ್ತಾರು ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡುವ ಮೂಲಕ ದಾಖಲಾತಿಯನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.