"ಕೇರಳದಲ್ಲಿ ಹಿಂದೂ ಮಹಿಳೆಗೆ ಹಲ್ಲೆಗೈದು, ದೇವರ ಮೂರ್ತಿ ಧ್ವಂಸ"

Update: 2018-04-26 17:32 GMT

"ಆಘಾತಕಾರಿ: ಹಿರಿಯ ಹಿಂದೂ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ; ಜಾತ್ಯತೀತ ಕೇರಳದಲ್ಲಿ ದೇವರ ಮೂರ್ತಿ ಮತ್ತು ದೇವಸ್ಥಾನವನ್ನು ಮುಸ್ಲಿಮರು ಧ್ವಂಸಗೊಳಿಸಿದ್ದಾರೆ. ಈ ಬಾಲಿವುಡ್ ಏಕೆ ಮೌನವಾಗಿದೆ?". 

ಇದು ಸುಳ್ಳು ಸುದ್ದಿಗಳನ್ನು ಹರಡುವ, ಕೋಮುದ್ವೇಷ ಸೃಷ್ಟಿಸಲು ಸತತವಾಗಿ ಪ್ರಯತ್ನಿಸುತ್ತಿರುವ, ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಸುದ್ದಿಗಳನ್ನು ಹರಡುತ್ತಿರುವ 'ಶಂಖನಾದ' ಮಾಡಿರುವ ಟ್ವೀಟ್.

ಎರಡನೇ ಟ್ವೀಟ್‍ನಲ್ಲಿ "ಹಿಂದೂಗಳ ಮೇಲೆ ಜಿಹಾದಿ ದಾಳಿ ನಡೆದಿದೆ. ಕಥುವಾ ಘಟನೆಗಾಗಿ ಪ್ರತಿಭಟನೆ ನಡೆಸುವ ವೇಳೆ, ದೇವಾಲಯ ಧ್ವಂಸ ಮುಂದುವರಿದಿದೆ. ಹಿಂದೂಗಳು ಇದನ್ನು ನಿರ್ಲಕ್ಷಿಸಿದರೆ ಮತ್ತು ಏಕಮುಖಿ ಜಾತ್ಯತೀತವಾದ ಮುಂದುವರಿದರೆ ಹಿಂದೂಗಳಿಗೆ ಕರಾಳ ಭವಿಷ್ಯ ಕಾದಿದೆ" ಎಂದು ಬಣ್ಣಿಸಲಾಗಿದೆ. ಸಾಮಾಜಿಕ ಜಾಲತಾಣದಾದ್ಯಂತ ಈ ಸುದ್ದಿ ವೈರಲ್ ಆಗಿದ್ದು, ಹಲವರು ಈ ಸುದ್ದಿಯನ್ನು ನಂಬಿ ಶೇರ್ ಮಾಡಿದ್ದಾರೆ. ಆದರೆ ಈ ಸುದ್ದಿಯ ಹಿಂದಿನ ವಾಸ್ತವಾಂಶವನ್ನು www.altnews.in ಬಹಿರಂಗಪಡಿಸಿದೆ. 

ಈ ಸುಳ್ಳುಸುದ್ದಿಯನ್ನು @ಭಯ್ಯಾಬಾಬು ಹ್ಯಾಂಡಲ್ ಕೂಡಾ ಶೇರ್ ಮಾಡಿದೆ. ಇದು ಬಿಜೆಪಿ ಸಂಸದ ಪರೇಶ್ ರಾವಲ್ ಅವರ ಭಾವಚಿತ್ರವನ್ನು ಹೊಂದಿದೆ. ಇಂಥದ್ದೇ ಹಿಂದಿ ಬರಹದೊಂದಿಗೆ ಈ ಖಾತೆಯಿಂದ ಸುಳ್ಳು ಸುದ್ದಿಯನ್ನು ಶೇರ್ ಮಾಡಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ 'ಶಂಖನಾದ' ಸೇರಿದಂತೆ ಹಲವು ಸಮಾಜಘಾತುಕ ಪೇಜ್ ಗಳು ಹರಡಿರುವ ಈ ಫೋಟೊ ಆರು ತಿಂಗಳು ಹಳೆಯದು ಮತ್ತು ಇದನ್ನು ಸುಪ್ತೋದಿಶ ಎಂಬ ಬಾಂಗ್ಲಾದೇಶಿ ಫೇಸ್‍ಬುಕ್ ಪೇಜ್ 2017ರ ಅಕ್ಟೋಬರ್ ನಲ್ಲಿ ಶೇರ್ ಮಾಡಿದೆ. ಈ ಕೆಳಗಿನ ಫೇಸ್‍ಬುಕ್ ಪೋಸ್ಟ್ ಅನ್ವಯ, ಈ ಘಟನೆ ನಡೆದದ್ದು ಬಾಂಗ್ಲಾದೇಶದ ಚಿತ್ತಗಾಂಗ್ ಜಿಲ್ಲೆಯಲ್ಲಿ.

ಸುಪ್ತೋದಿಶ ಇದರ ಜತೆಗಿರುವ ಬೆಂಗಾಲಿ ಬರಹವನ್ನು ಭಾಷಾಂತರ ಹೀಗಿದೆ: 

"ಈ ಮಹಿಳೆ ಪಂಚಬಾಲಾ ಕರ್ಮಾಕರ್. ಚಿತ್ತಗಾಂಗ್ ಜಿಲ್ಲೆಯ ಬನ್ಸ್‍ಖಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಲ್ಧಿ ಗ್ರಾಮದ ನಿವಾಸಿ. ಈ ಬಡ ಹಾಗೂ ಅಸಹಾಯಕ ಮಹಿಳೆಯ ಮೇಲೆ, ಪ್ರಭಾವಿ ನೆರೆಯವನಾದ ಪ್ರದೀಪ್ ಘೋಷ್ ಮತ್ತು ಆತನ ಮಗ ವಿಶ್ವಜೀತ್ ಪೂರ್ವಯೋಜಿತ ದಾಳಿ ಮಾಡಿ ಬೇಕಾಬಿಟ್ಟಿ ಥಳಿಸಿದ್ದಾರೆ. ಈಕೆಯ ಸ್ಥಿತಿ ಈಗ ಚಿಂತಾಜನಕವಾಗಿದೆ. ಆಕೆಯ ಆರೈಕೆಗೆ ಅಥವಾ ಚಿಕಿತ್ಸೆಗೆ ಯಾರೂ ಇಲ್ಲ. ದಯವಿಟ್ಟು ಇದನ್ನು ಶೇರ್ ಮಾಡಿ"

ಈ ಚಿತ್ರದಲ್ಲಿರುವ ಒಬ್ಬ ವ್ಯಕ್ತಿ, ಬೆಂಗಾಲಿ ಬರಹವಿರುವ ಟಿ-ಷರ್ಟ್ ಧರಿಸಿದ್ದಾನೆ. ಈ ವಿಷಯದ ಬಗ್ಗೆ ಸ್ಪಷ್ಟನೆ ಕೋರಿ www.altnews.in ಕೇರಳ ಪೊಲೀಸರನ್ನು ಸಂಪರ್ಕಿಸಿದೆ. ಈ ಚಿತ್ರ ಎಲ್ಲಿನ ಮೂಲದ್ದು ಎನ್ನುವುದನ್ನು ಇನ್ನಷ್ಟೇ ದೃಢಪಡಿಸಬೇಕಿದೆ. ಆದರೆ ಈ ಚಿತ್ರ ಇತ್ತೀಚಿನ ಘಟನೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು. ಇದಲ್ಲದೇ ಟಿ-ಶರ್ಟ್ ಮೇಲೆ ಬೆಂಗಾಲಿ ಬರಹ ಇದ್ದು, ಈ ಘಟನೆ ಕೇರಳದ್ದಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಸುಳ್ಳು ಸುದ್ದಿ ಹರಡಿರುವವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ  ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಮಾಜಘಾತುಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇದನ್ನು ಕೇರಳ ಪೊಲೀಸರಿಗೆ ಟ್ವಿಟರಿಗರು ಟ್ಯಾಗ್ ಮಾಡಿದ್ದಾರೆ. ಇದಾದ ಬಳಿಕ ಶಂಖನಾದ ಮತ್ತು ಭಯ್ಯಾಬಾಬು ಖಾತೆ ಈ ಟ್ವೀಟನ್ನು ಅಳಿಸಿದೆ. ಆದರೆ ಈಗಾಗಲೇ ಈ ಸುಳ್ಳು ಸುದ್ದಿಯನ್ನು ಹಲವರು ಶೇರ್ ಮಾಡಿದ್ದು, ಫೇಸ್‍ಬುಕ್ ಮತ್ತು ವಾಟ್ಸ್ಆ್ಯಪ್ ನಲ್ಲಿ ಹರಿದಾಡುತ್ತಿದೆ. "ವಿ ಸಪೋರ್ಟ್ ನರೇಂದ್ರ ಮೋದಿ" ಎಂಬ ಒಂದು ಗುಂಪು ಕೂಡಾ ಇದನ್ನು ಶೇರ್ ಮಾಡಿದೆ. ಈ ಗುಂಪು 26 ಲಕ್ಷ ಸದಸ್ಯರನ್ನು ಹೊಂದಿದ್ದು, 2,500 ಬಾರಿ ಪೋಸ್ಟ್ ಶೇರ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News