ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಸನ್ಮಾನ ಕಾರ್ಯಕ್ರಮ ರದ್ದುಪಡಿಸಿದ ಹರ್ಯಾಣ ಸರಕಾರ

Update: 2018-04-26 18:43 GMT

ಚಂಡಿಗಡ, ಎ.26: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಾಗಿರುವ ರಾಜ್ಯದ ಅಥ್ಲೀಟ್‌ಗಳಿಗೆ ಗುರುವಾರ ಪಂಚಕುಲದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮವನ್ನು ಹರ್ಯಾಣ ಸರಕಾರ ರದ್ದುಪಡಿಸಿದೆ.

 ರಾಜ್ಯ ಸರಕಾರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಘೋಷಿಸಿರುವ ಬಹುಮಾನ ಮೊತ್ತದಲ್ಲಿ ಕಡಿತಗೊಳಿಸುವುದನ್ನು ಖಂಡಿಸಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿರುವ ವಿನೇಶ್ ಪೋಗಟ್ ನೇತೃತ್ವದ ಅಥ್ಲೀಟ್‌ಗಳು ಸರಕಾರದ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ತಿಂಗಳಾರಂಭದಲ್ಲಿ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ಪದಕ ವಿಜೇತರಾಗಿರುವ ಸುಮಾರು 22 ಆಟಗಾರರನ್ನು ಗೌರವಿಸಲು ಹರ್ಯಾಣ ಸರಕಾರ ನಿರ್ಧರಿಸಿತ್ತು.

ಕೆಲವು ಆಟಗಾರರು ರಾಜ್ಯದ ಕ್ರೀಡಾ ನೀತಿಯನ್ನು ವಿರೋಧಿಸಿದ್ದಾರೆ. ಆಟಗಾರರ ಪ್ರತಿಭಟನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರೀಡಾ ನೀತಿಯನ್ನು ಬದಲಿಸಲಾಗುವುದು. ಆಟಗಾರರ ಹಿತಾಸಕ್ತಿಗೆ ಪೂರಕವಾಗಿ ನಿರ್ಧಾರ ಕೈಗೊಳ್ಳಲಿದ್ದು, ಎಲ್ಲರಿಗೂ ಸಮಾನ ಗೌರವ ನೀಡಲಾಗುವುದು ಎಂದು ಹರ್ಯಾಣದ ಕ್ರೀಡಾ ಹಾಗೂ ಯುವಜನ ವ್ಯವಹಾರ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News