×
Ad

ಅಮಿತ್ ಶಾ ಸೂಚನೆ ಮೇರೆಗೆ 100ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ: ರಾಮಲಿಂಗಾ ರೆಡ್ಡಿ ಗಂಭೀರ ಆರೋಪ

Update: 2018-04-27 18:19 IST

ಬೆಂಗಳೂರು, ಎ. 27: ಹದಿನೈದು ದಿನಗಳಿಂದ ಕಾಂಗ್ರೆಸ್ ಮುಖಂಡರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ನಮ್ಮ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಕದಿಯುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಿಲ್ಲಿ, ಗುಜರಾತ್, ಜೈಪುರ ತಂಡದಿಂದ ನಮ್ಮ ಮುಖಂಡರ ಫೋನ್ ಕದ್ದಾಲಿಕೆ ನಡೆಯುತ್ತಿದ್ದು, ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡಲು ಕದ್ದಾಲಿಕೆ ನಡೆಯುತ್ತಿದೆ ಎಂದು ದೂರಿದರು.

ಮುಖಂಡರ ಫೋನ್ ಕದ್ದಾಲಿಕೆಯ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ. ಅಮಿತ್ ಶಾ ಸೂಚನೆ ಮೇರೆಗೆ ಫೋನ್ ಕದ್ದಾಲಿಕೆ ನಡೆಯುತ್ತಿದೆ. 100 ಕ್ಕೂ ಹೆಚ್ಚು ನಾಯಕರ ಫೋನ್ ಕದ್ದಾಲಿಕೆ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ ಎಂದರು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರಗಳನ್ನು ಕದಿಯುತ್ತಿದ್ದಾರೆ. ಕನ್ನಡದಲ್ಲಿ ಮಾತನಾಡಿದ್ದನ್ನು ಹಿಂದಿ, ಇಂಗ್ಲಿಷ್‌ನಲ್ಲಿ ಭಾಷಾಂತರ ಮಾಡಲಾಗುತ್ತಿದೆ. ಆರು ತಿಂಗಳ ಹಿಂದೆಯೂ ನಾನು ಈ ಬಗ್ಗೆ ಆರೋಪ ಮಾಡಿದ್ದೆ ಎಂದು ಅವರು ತಿಳಿಸಿದರು. ಮಾಧ್ಯಮಗಳಲ್ಲಿ ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಬಿಜೆಪಿಯವರು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನು ಜಾಹೀರಾತು ನೀಡಲಿ. ಬಿಜೆಪಿ ಸರಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಯಾಗಿದ್ದ ಬಗ್ಗೆ, ಸದನದ ಒಳಗಡೆ ಬ್ಲೂ ಫಿಲ್ಮ್ ನೋಡಿದ್ದ ಬಗ್ಗೆ, ಪೆಟ್ರೋಲ್, ಡೀಸೆಲ್, ಬೆಲೆ ಏರಿಕೆ ಬಗ್ಗೆ ಜಾಹೀರಾತು ನೀಡಲಿ. ಕೇಂದ್ರ ಸರಕಾರ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಹಾಕಿಲ್ಲ ಎಂದು ಜಾಹೀರಾತು ಕೊಡಲಿ ಎಂದು ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು.

ಸೋಲಿನ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯನ್ನಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ದಾಳಿ ನಡೆಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಜತೆ ಸಂಬಂಧ ಇರುವ ಉದ್ಯಮಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಉದ್ಯಾನನಗರಿ ಬೆಂಗಳೂರು ನಗರವನ್ನು ಗಾರ್ಬೆಜ್ ಸಿಟಿಯನ್ನಾಗಿ ಮಾಡಿದ ಖ್ಯಾತಿ ಬಿಜೆಪಿಗೆ ಸಲ್ಲಬೇಕು. ಈ ಬಗ್ಗೆಯೂ ಅವರು ಜಾಹೀರಾತು ನೀಡಲಿ ಎಂದ ಲೇವಡಿ ಮಾಡಿದ ಅವರು, ಸುಳ್ಳು ಜಾಹೀರಾತು ಪ್ರಕಟಿಸುತ್ತಿರುವ ಬಿಜೆಪಿ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News