×
Ad

ಮೋದಿ ಕನಸಿಗೆ ರಾಜ್ಯದ ಮತದಾರರ ಸಕಾರಾತ್ಮಕ ಸ್ಪಂದನೆ: ಸದಾನಂದ ಗೌಡ

Update: 2018-04-27 18:50 IST

ಬೆಂಗಳೂರು, ಎ. 27: ಪ್ರಧಾನಿ ಮೋದಿಯವರ ನವ ಭಾರತ ನಿರ್ಮಾಣದ ಕನಸಿಗೆ ಕರ್ನಾಟಕ ರಾಜ್ಯದ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಜತೆ ಭೂಪಸಂದ್ರ ವಾರ್ಡ್‌ನ ಸೆಂಟ್ರಲ್ ಎಕ್ಸೈಸ್ ಬಡಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ರಾಜ್ಯದ ಮತದಾರರು ಮೋದಿ ನೇತೃತ್ವದ ಅಭಿವೃದ್ದಿ ಪರ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.

‘ನವ ಬೆಂಗಳೂರು-ನವ ಭಾರತ’ ಘೋಷಣೆಯ ಅಡಿಯಲ್ಲಿ ಪ್ರಧಾನಿ ಮೋದಿಯವರ ಕನಸನ್ನ ನನಸಾಗಿಸುವುದು ನಮ್ಮ ಕೈಯಲ್ಲಿದೆ. ರಾಜ್ಯದ ಮತದಾರರು ಈ ನಿಟ್ಟಿನಲ್ಲಿ ಈಗಾಗಲೇ ನಿರ್ಧಾರವನ್ನು ಕಂಡುಕೊಂಡಿರುವ ಶುಭ ಸೂಚನೆಗಳು ಕಂಡಬರುತ್ತಿವೆ. ರಾಜ್ಯದ ಉದ್ದಗಲದಲ್ಲೂ ಪ್ರಧಾನಿ ಮೋದಿ ಸಂಚರಿಸಲಿದ್ದು ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನರ ಮುಂದಿಡಲಿದ್ದಾರೆಂದು ತಿಳಿಸಿದರು.

ಬೆಂಗಳೂರು ನಗರ ಇನ್ನಷ್ಟು ಸುಂದರಗೊಳಿಸಲು ಬಿಜೆಪಿ ಸರಕಾರ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಅಲ್ಲದೆ, ಕೇವಲ ಎರಡೇ ವರ್ಷಗಳಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿರುವ ಶಾಸಕ ನಾರಾಯಣಸ್ವಾಮಿಯ ಗೆಲವು ನಮ್ಮ ಪ್ರಧಾನಿ ಕನಸು ನನಸಾಗಲು ಮಹತ್ವದ ಕೊಡುಗೆಯನ್ನು ನೀಡುವುದರಲ್ಲಿ ಯಾವುದೇ ಸಂಶಯಲ್ಲ ಎಂದರು.

ಚುನಾವಣೆಯ ಸಂದರ್ಭದಲ್ಲಿ ಹಣವನ್ನು ನೀರಿನಂತೆ ಚೆಲ್ಲುವ ಅಭ್ಯರ್ಥಿಗಳು ಅಧಿಕಾರದ ಗದ್ದುಗೆ ಏರಿದ ಕೂಡಲೇ ಭ್ರಷ್ಟಾಚಾರವನ್ನು ಪ್ರಾರಂಭಿಸುತ್ತಾರೆ. ಸುಶಿಕ್ಷಿತ ಹಾಗೂ ಸುಸಂಸ್ಕೃತರಾದ ನಾರಾಯಣಸ್ವಾಮಿ ಅವರಿಗೆ ಮತ ನೀಡುವ ಮೂಲಕ ಅಭಿವೃದ್ದಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಹೆಬ್ಬಾಳ ಬಿಜೆಪಿ ಅಭ್ಯರ್ಥಿ ಡಾ ವೈ ಎ ನಾರಾಯಣಸ್ವಾಮಿ ಮಾತನಾಡಿ, ಹಣ ಮತ್ತು ತೋಳ್ಬಲದ ನಡುವೆ ಅಭಿವೃದ್ದಿಗೆ ಹೆಬ್ಬಾಳ ಜನರು ಮತನೀಡಲಿದ್ದಾರೆ. ಇಲ್ಲಿನ ಪ್ರತಿಸ್ಪರ್ಧಿಯ ಹಣದ ಆಟ ನಡೆಯುವುದಿಲ್ಲ ಎಂದರು. ಇನ್ನು ಕೆಲವೇ ದಿನಗಳಲ್ಲಿ ಹೆಬ್ಬಾಳ ಕ್ಷೇತ್ರದ ಪ್ರಣಾಳಿಕೆಯನ್ನು ಪ್ರಕಟಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News