ಬಡವರ ಹಸಿವು ನೀಗಿಸಿದ ಅನ್ನಭಾಗ್ಯ ಯೋಜನೆಯನ್ನು ಜಾಹೀರಾತಿನಲ್ಲಿ ಕನ್ನಭಾಗ್ಯ ಎಂದಿದ್ದ ಬಿಜೆಪಿ: ಡಿ.ಕೆ.ಶಿವಕುಮಾರ್

Update: 2018-04-27 14:55 GMT

ಬೆಂಗಳೂರು, ಎ.27: ಬಿಜೆಪಿಯವರು ಸತ್ಯಕ್ಕೆ ದೂರವಾದ ಜಾಹೀರಾತುಗಳನ್ನು ನೀಡಿದ್ದರು. ರಾಜ್ಯ ಚುನಾವಣಾ ಆಯೋಗವು ನಮ್ಮ ಮನವಿಯನ್ನು ಸ್ವೀಕರಿಸಿ, ಆ ಸುಳ್ಳು ಜಾಹೀರಾತುಗಳ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಚುನಾವಣೆಗಾಗಿ, ತಮ್ಮ ಪಕ್ಷಕ್ಕೆ ಮತಗಳನ್ನು ಸೆಳೆಯಲು ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ ಎಂದರು.

ಬಿಜೆಪಿ ವಾಮರ್ಮಾಗದಲ್ಲಿ, ಜನರಿಗೆ ತಪ್ಪುಮಾಹಿತಿ ನೀಡುತ್ತಿದೆ. ಬಿಜೆಪಿಯವರು ನೀಡಿದ್ದ ಸುಳ್ಳು ಜಾಹೀರಾತುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು. ಅದನ್ನು ಪರಿಗಣಿಸಿ, ವಾದ, ಪ್ರತಿವಾದ ಆಲಿಸಿ ಬಿಜೆಪಿಯ ಸುಳ್ಳು ಜಾಹೀರಾತುಗಳಿಗೆ ಚುನಾವಣಾ ಆಯೋಗವು ತಡೆಯಾಜ್ಞೆ ನೀಡಿದೆ ಎಂದು ಅವರು ತಿಳಿಸಿದರು.

ಬಡವರ ಹಸಿವು ನೀಗಿಸಲು ನಮ್ಮ ಸರಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯನ್ನು ಕನ್ನಭಾಗ್ಯ ಎಂದು ಜಾಹೀರಾತು ನೀಡಿದ್ದಾರೆ. ಕಲ್ಲಿದ್ದಲು ಹಗರಣ ಸಂಬಂಧ ಜಾಹೀರಾತು ನೀಡಿದ್ದಾರೆ. ನಮ್ಮ ಅವಧಿಯಲ್ಲಿ ಕಲ್ಲಿದ್ದಲು ಹಗರಣ ನಡೆದಿದ್ದರೆ ಈ ಸಂಬಂಧ ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದೇನೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಾಗಿದ್ದವರೂ ನನ್ನ ಜೊತೆ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ, ಇದೊಂದು ಗೂಂಡಾರಾಜ್ಯ. ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ ಎಂಬ ರೀತಿಯಲ್ಲಿ ಬಿಜೆಪಿಯವರು ಜಾಹೀರಾತುಗಳನ್ನು ನೀಡಿದ್ದರು. ಆದರೆ, ಎನ್‌ಸಿಆರ್‌ಬಿಯ ಅಂಕಿ ಅಂಶಗಳನ್ನು ನೋಡಿದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೆ ಅಪರಾಧ ಪ್ರಮಾಣ ಹೆಚ್ಚಿದೆ. ಬಿಜೆಪಿಯವರು ನಮ್ಮ ವಿರುದ್ಧ ಆರೋಪ ಮಾಡುವ ಬದಲು ಒಮ್ಮೆ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡರೆ ಉತ್ತಮ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಇಡೀ ವಿಶ್ವದಲ್ಲೆ ಕರ್ನಾಟಕ ಹಾಗೂ ಬೆಂಗಳೂರಿಗೆ ವಿಶೇಷ ಸ್ಥಾನವಿದೆ. ನಮ್ಮ ಸರಕಾರವನ್ನು ಶೇ.10ರಷ್ಟು ಕಮಿಷನ್ ಸರಕಾರ ಎಂದು ಆರೋಪಿಸಿದ್ದ ಪ್ರಧಾನಿ ನರೇಂದ್ರಮೋದಿ, ತಮ್ಮ ಸಂಪುಟದ 20ಕ್ಕೂ ಹೆಚ್ಚು ಮಂದಿ ಸಚಿವರನ್ನು ಬೆಂಗಳೂರಿಗೆ ಕರೆಸಿಕೊಂಡು ಪ್ರವಾಸಿ ಭಾರತ್ ದಿನವನ್ನು ಇಲ್ಲಿ ಆಚರಿಸಿದ್ದು ಏಕೆ? ವಿಶ್ವದ ಪ್ರಮುಖ ನಾಯಕರಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಲು ಕರೆ ಕೊಟ್ಟಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.

ನಮ್ಮದು ಪಾರದರ್ಶಕ ಸರಕಾರ. ನಮ್ಮ ಸರಕಾರದ ಕಾರ್ಯವೈಖರಿಯನ್ನು ಮೆಚ್ಚಿ ಕೆಎಸ್ಸಾರ್ಟಿಸಿ, ಬಿಎಂಟಿಸಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಕೇಂದ್ರ ಸರಕಾರವು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ. ಆದರೆ, ಚುನಾವಣೆಗಾಗಿ ನಮ್ಮನ್ನು ಟೀಕಿಸುತ್ತಿದ್ದಾರೆ. ನಮ್ಮ ವಿರುದ್ಧ ಬಿಜೆಪಿ ಮಾಡುತ್ತಿರುವ ಎಲ್ಲ ಆರೋಪಗಳಿಗೂ ನಾವು ಧಿಕ್ಕಾರ ಹೇಳುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಪಾವಗಡದಲ್ಲಿ ನಿರ್ಮಾಣ ಮಾಡಿರುವ ಸೋಲಾರ್ ಪಾರ್ಕ್‌ಗೆ ಸಂಬಂಧಿಸಿದಂತೆ ಆರೋಪ ಮಾಡಿದ್ದಾರೆ. ಕೇಂದ್ರ ಸರಕಾರದ ಬಳಿ ಸಿಬಿಐ ಸಂಸ್ಥೆಯಿದೆ. ಆ ಸಂಸ್ಥೆಯ ಮೂಲಕವೆ ತನಿಖೆ ಮಾಡಲಿ. ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ನಾವು ಸಾಗಿಸುತ್ತಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಮತ್ತೊಮ್ಮೆ ಆಶೀರ್ವಾದ ಕೇಳುತ್ತಿದ್ದೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಹಾಗೂ ಐಟಿ ದಾಳಿಗೆ ಸಂಬಂಧಿಸಿದಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ಸಚಿವರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರಿಗೆ ಮಾಹಿತಿ ಇರುವುದರಿಂದ ಅವರು ತಿಳಿಸಿದ್ದಾರೆ. ಏನೆಲ್ಲ ಬೆಳವಣಿಗೆ ನಡೆಯುತ್ತಿದೆ ಎಂಬುದು ಮಾಧ್ಯಮದವರಿಗೂ ಗೊತ್ತಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯ ಇಲ್ಲ ಎಂದರು.

ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ಸುಳ್ಳು ಜಾಹೀರಾತುಗಳನ್ನು ನೀಡಿ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ, ದೇಶ ಹಾಗೂ ರಾಜ್ಯದ ಜನರ ಕ್ಷಮೆ ಕೋರಬೇಕು. ಸುಳ್ಳಿನ ಕಂತೆಗಳನ್ನು ಬಿಜೆಪಿ ಚುನಾವಣಾ ಜಾಹೀರಾತುಗಳನ್ನಾಗಿ ನೀಡಿದೆ ಎಂದು ಆರೋಪಿಸಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷಕ್ಕೆ ಚುನಾವಣಾ ಆಯೋಗವು ಕಪಾಳ ಮೋಕ್ಷ ಮಾಡಿರುವುದು ಇದೇ ಮೊದಲು. ಪ್ರಜಾಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿರುವ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಸಂಬಂಧ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು ಎಂದು ಉಗ್ರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News