ಈಗಿನ ನಟರಿಗೆ ಶರೀರ-ಶಾರೀರದ ನಡುವೆ ಸಮನ್ವಯತೆ ಇಲ್ಲವಾಗಿದೆ: ನಾಗತಿಹಳ್ಳಿ ಚಂದ್ರಶೇಖರ್

Update: 2018-04-27 15:00 GMT

ಬೆಂಗಳೂರು, ಎ.27: ಈಗಿನ ನಟರಿಗೆ ಶರೀರ ಹಾಗೂ ಶಾರೀರದ ನಡುವೆ ಸಮನ್ವಯತೆ ಇಲ್ಲವಾಗಿದೆ. ಕೇವಲ ದೇಹವನ್ನು ಹುರಿಗೊಳಿಸುವುದು ಹಾಗೂ ದೇಹ ಸೌಂದರ್ಯವೊಂದೆ ನಟನೆಗಿರುವ ಅರ್ಹತೆಯೆಂದು ಭಾವಿಸಿದ್ದಾರೆ ಎಂದು ಸಿನೆಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿಷಾದಿಸಿದ್ದಾರೆ.

ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕಸಾಪದ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಿರಿಯ ಗಾಯಕ ಆರ್.ಪರಮಶಿವನ್‌ಗೆ ಡಾ.ರಾಜ್‌ಕುಮಾರ್ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ದೇಹ ಸೌಂದರ್ಯವಿದ್ದ ಮಾತ್ರಕ್ಕೆ ನಟನಾಗಲು ಬರುವುದಿಲ್ಲ. ರಾಗ-ಭಾವಗಳ ಕುರಿತು ಅರಿವಿರಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಇವತ್ತಿನ ದಿನಗಳಲ್ಲಿ ಯಾರು ಬೇಕಾದರು ನಟನಾಗಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಲೆಯ ಕುರಿತು ಶ್ರದ್ಧೆಯಾಗಲಿ, ತಾಳ್ಮೆಯಾಗಲಿ ಇಲ್ಲವಾಗಿದೆ. ಆದರೆ, ಹಿಂದಿನ ದಿನಗಳಲ್ಲಿ ನಾಟಕ ಕಂಪೆನಿಗಳಲ್ಲಿ ಅಭಿನಯಿಸಬೇಕಾದ ಕಲಾವಿದರಿಗೆ ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ನೈತಿಕ ಮೌಲ್ಯಗಳು ಅಗತ್ಯವಾಗಿ ಇರಬೇಕಾಗಿತ್ತು ಎಂದು ಅವರು ತಿಳಿಸಿದರು.

ರಂಗಭೂಮಿ ತಾಯಿಯಿದ್ದಂತೆ: ಎಲ್ಲ ಕಲಾಪ್ರಕಾರಗಳಿಗೂ ರಂಗಭೂಮಿ ತಾಯಿ ಇದ್ದಂತೆ. ಭಾಷೆ ಬಳಸುವುದು, ಹಾಡುವುದು, ಭಾವನೆಗಳ ಏರಿಳಿತಗಳನ್ನು ನಾಜೂಕಾಗಿ ಕಲಿಸುತ್ತದೆ. ಹೀಗಾಗಿಯೆ ಡಾ.ರಾಜ್‌ಕುಮಾರ್ ತನ್ನ ಪಾತ್ರಗಳ ಸಂಭಾಷಣೆಯಲ್ಲಿ ಅಲ್ಪಪ್ರಾಣ, ಮಹಾಪ್ರಾಣಗಳನ್ನು ಎಲ್ಲಿಯೂ ತೊಡಕುಂಟಾಗದಂತೆ ಬಳಸುತ್ತಿದ್ದರು. ಇಂದಿನ ಕಲಾವಿದರಿಗೆ ರಂಗಭೂಮಿಯ ಮಾರ್ಗದರ್ಶನ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರಶಸ್ತಿ ಪುರಸ್ಕೃತ ಗಾಯಕ ಆರ್.ಪರಮಶಿವನ್ ಮಾತನಾಡಿ, ಡಾ.ರಾಜ್‌ಕುಮಾರ್ ದತ್ತಿ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ರಾಜ್‌ಕುಮಾರ್ ಜತೆಗೆ ಜೀವನದುದ್ದಕ್ಕೂ ಒಳ್ಳೆಯ ಸ್ನೇಹವಿತ್ತು. ನನ್ನನ್ನು ಆಗಾಗ ಮನೆಗೆ ಕರೆದು, ಊಟ ಮಾಡಿಸಿ, ಮಾತನಾಡಿಸಿ ಕಳುಹಿಸುತ್ತಿದ್ದರು. ಈಗಲೂ ಆ ನೆನಪುಗಳು ಹಸಿರಾಗಿವೆ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ಎಸ್.ಎ.ಚನ್ನೇಗೌಡ, ಕಸಾಪ ಕೋಶಾಧ್ಯಕ್ಷ ವುಲ್ಲಿಕಾರ್ಜುನಪ್ಪ ಮತ್ತಿತರರಿದ್ದರು.

ಡಾ.ರಾಜ್‌ಕುಮಾರ್ ತನ್ನ ಜೀವನದುದ್ದಕ್ಕೂ ಮೌಲ್ಯಯುತವಾಗಿ, ವಿನಯಪೂರ್ವಕವಾಗಿ ಬದುಕಿದವರು. ವೇದಿಕೆಗಳಲ್ಲಿ ಎಂದಿಗೂ ಕಾಲ ಮೇಲೆ ಕಾಲಾಕಿ ಕುಳಿತವರೆ ಅಲ್ಲ. ಆದರೆ, ಈಗಿನ ನಟರು ಎದುರಿಗೆ ಕುಳಿತವರಿಗೆ ತಾಗುವ ರೀತಿಯಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಇಂತಹ ನಟರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?
-ನಾಗತಿಹಳ್ಳಿ ಚಂದ್ರಶೇಖರ್ ಚಿತ್ರ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News