ರಾಹುಲ್ ಗಾಂಧಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ: ಬಿಎಸ್‌ವೈ

Update: 2018-04-27 15:08 GMT

ಬೆಂಗಳೂರು, ಎ. 27: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಅಪ್ರಬುದ್ಧತೆಯನ್ನು ಸಾಬೀತುಪಡಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳುತ್ತಿಲ್ಲ. ಈಗ ಮತ್ತೊಮ್ಮೆ ಪೂರ್ವಾಪರ ತಿಳಿದುಕೊಳ್ಳದೆ ಬಾಲಿಶ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಎಲ್ಲ ಆರೋಪಗಳಿಂದ ನ್ಯಾಯಾಲಯಗಳೇ ನನ್ನನ್ನು ದೋಷಮುಕ್ತ ಗೊಳಿಸಿದರೂ ಹೀಗೆ ಹಗುರವಾಗಿ ಮಾತನಾಡುವುದು, ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಶೋಭೆ ತರುವುದಿಲ್ಲ ಎಂದು ಸಲಹೆ ಮಾಡಿದರು.

ಜಾಮೀನಿನ ಮೇಲೆ ಹೊರಗಿರುವ ತಮ್ಮ ಅವಸ್ಥೆಯನ್ನು ಮರೆತು, ಹೀಗೆ ಮನಬಂದಂತೆ ಮಾತನಾಡುವುದನ್ನು ನೋಡಿ ಜನ ನಗುತ್ತಿದ್ದಾರೆ. ಹೀಗೆ ಯಾರೋ ಬರೆದುಕೊಟ್ಟದ್ದನ್ನೇ ಹೇಳುವ, ಓದುವ ರಾಹುಲ್ ಗಾಂಧಿಯವರ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ತಮ್ಮ ಹುಳುಕನ್ನು ಸರಿಪಡಿಸಿಕೊಳ್ಳುವ ಬದಲು ಮತ್ತೊಬ್ಬರತ್ತ ಬೊಟ್ಟು ಮಾಡುವ ಚಾಳಿಯನ್ನು ಅವರು ಮೊದಲು ಬಿಡಲಿ ಎಂದು ಯಡಿಯೂರಪ್ಪ ಹೇಳಿದರು.

ಐದು ವರ್ಷ ಅಧಿಕಾರ ನಡೆಸಿ ಸಾಧನೆಗಳ ಆಧಾರದ ಮೇಲೆ ಜನರ ಮುಂದೆ ಹೋಗುವ ಬದಲಿಗೆ, ನ್ಯಾಯಾಲಯಗಳು ಇತ್ಯರ್ಥಪಡಿಸಿದ ಹಳೆಯ ವಿಷಯಗಳನ್ನೇ ಕೆದುಕುತ್ತಾ, ತಮ್ಮ ಸರಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಎಸ್‌ವೈ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News