ಬಿಜೆಪಿ ಜಾಹೀರಾತು ಪ್ರಸಾರಕ್ಕೆ ತಡೆ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು: ಶೋಭಾ ಕರಂದ್ಲಾಜೆ

Update: 2018-04-27 15:11 GMT

ಬೆಂಗಳೂರು, ಎ. 27: ‘ಆಯೋಗದ ಅನುಮತಿ ನಂತರವೇ ಜಾಹೀರಾತನ್ನು ಪ್ರಸಾರ ಮಾಡಲಾಗುತ್ತಿತ್ತು. ಬಿಜೆಪಿ ಚುನಾವಣಾ ಪ್ರಚಾರದ ಜಾಹೀರಾತುಗಳಿಗೆ ಆಯೋಗ ತಡೆಯಾಜ್ಞೆ ನೀಡುವ ಮೂಲಕ ಚುನಾವಣಾಧಿಕಾರಿಗಳು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ಈ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮೇ 1ರಿಂದ ರಾಜ್ಯದಲ್ಲಿ ಪ್ರವಾಸ ಆರಂಭಿಸಲಿದ್ದಾರೆ. ಮೇ 1ರ ಬೆಳಗ್ಗೆ ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಮಧ್ಯಾಹ್ನ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ಅನಂತರ ಎಂಜೆಎಂ ಕಾಲೇಜಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಚಿಕ್ಕೋಡಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಎ.28 ರಂದು ರಾಜ್ಯದ 6 ಪ್ರಮುಖ ಕೇಂದ್ರಗಳಲ್ಲಿ ‘ಕರುನಾಡ ಮಹಿಳಾ ಜಾಗೃತಿ ಸಮಾವೇಶ’ಗಳನ್ನು ಆಯೋಜಿಸಲಾಗಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ, ಸ್ಮತಿ ಇರಾನಿ, ಸಾಧ್ವಿ ನಿರಂಜನ ಜ್ಯೋತಿ ಬೆಳಗಾವಿಯಲ್ಲಿ, ಮೀನಾಕ್ಷಿ ಲೇಖಿ ಮಂಗಳೂರಿನಲ್ಲಿ, ಮಾಜಿ ಕೇಂದ್ರ ಸಚಿವೆ ಪುರಂದೇಶ್ವರಿ ರಾಯಚೂರಿನಲ್ಲಿ ನಡೆಯುವ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಮಹಿಳೆಯರ ಕಾನೂನುಗಳು, ಕೇಂದ್ರ ಸರಕಾರ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಜಾರಿಗೆ ತಂದಿರುವ ಯೋಜನೆಗಳು ಮತ್ತು ಕಾನೂನುಗಳು, ಮಹಿಳೆಯರ ಹಿತ ರಕ್ಷಿಸುವಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.

ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಶಿಕ್ಷೆಯಾಗಲು ‘ಅಪರಾಧ ತಿದ್ದುಪಡಿ ಮಸೂದೆ-2013’ನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗಿತ್ತು. ಆದರೆ, ಇದರ ಅಗತ್ಯವೇ ಇಲ್ಲ ಎಂದು ಅಂದಿನ ಗೃಹ ಸಚಿವರು ಮನವಿಯನ್ನು ತಳ್ಳಿ ಹಾಕಿದ್ದರು. ಕೇಂದ್ರ ರಾಜ್ಯಕ್ಕೆ 2.10ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡಿದ್ದು, ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯಗಳ ನಿರ್ಮಾಣ, ಮೆಟ್ರೊ ರೈಲು ಯೋಜನೆಗೆ ಅಗತ್ಯ ನೆರವು, ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ ಸೇರಿ ಹಲವು ಯೋಜನೆಗಳನ್ನು ರಾಜ್ಯಕ್ಕೆ ನೀಡಿದೆ. ಇದೇ ವೇಳೆ ನುಡಿದದ್ದೇನು? ನಡೆದದ್ದೇನು? ಎಂದು ಕಾಂಗ್ರೆಸ್‌ಗೆ ಪ್ರಶ್ನೆ ಕೇಳುವ ಪುಸ್ತಕಯನ್ನು ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News