×
Ad

ನಾಲ್ವರು ಸರಕಾರಿ ನೌಕರರ ಮನೆ ಮೇಲೆ ಎಸಿಬಿ ದಾಳಿ

Update: 2018-04-27 20:46 IST

ಬೆಂಗಳೂರು, ಎ.27: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ ಕೇಳಿಬಂದ ಬೆನ್ನಲ್ಲೇ ರಾಜ್ಯದ ನಾಲ್ವರು ಸರಕಾರಿ ನೌಕರರ ಮನೆ, ಕಚೇರಿಗಳ ದಿಢೀರ್ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳ ತಂಡ, ಶೋಧನಾ ಕಾರ್ಯ ಮುಂದುವರೆಸಿದೆ.

ಶುಕ್ರವಾರ ಮುಂಜಾನೆ ರಾಜ್ಯಾದ್ಯಂತ 10 ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲು ಮಾಡಿದೆ.

ಬಾಗಲಕೋಟೆ: ಮುಧೋಳ ತಾಲೂಕಿನ ಕಂದಾಯ ನಿರೀಕ್ಷಕ ಸಂಗಪ್ಪ ಐ ಸೂದಿ ಅವರ ಮಹಾಲಿಂಗಪುರದಲ್ಲಿರುವ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ದಾಳಿ ನಡೆಸಿ ತನಿಖೆ ನಡೆಸಲಾಗುತ್ತಿದೆ.

ಚಿತ್ರದುರ್ಗ: ತಾಲೂಕಿನ ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಬಿ. ಲಕ್ಷ್ಮೀಪತಿ ಅವರು ಮನಮೈಯನಹಟ್ಟಿಯಲ್ಲಿರುವ ಹಾಗೂ ಬಾಗಲಕೋಟೆಯ ವಾಸದ ಮನೆ ಹಾಗೂ ಕಚೇರಿಯಲ್ಲಿ ಅಧಿಕಾರಿಗಳು ಪರಿಶೀಲನಾ ಕಾರ್ಯ ಮುಂದುವರೆಸಿದ್ದಾರೆ.

ಕೋಲಾರ: ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆಯ ಶಿರಸ್ತೆದಾರ ಮುನಿವೆಂಕಟಪ್ಪ ಅವರು ಮುಳಬಾಗಿಲು ತಾಲೂಕಿನಲ್ಲಿ ಮುತ್ಯಾಲಪೇಟೆ ವಾಸದ ಮನೆ ಸೇರಿ 2 ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿ ಶೋಧನಾ ಕಾರ್ಯ ಮುಂದುವರೆದಿದೆ.

ಮಾಗಡಿ: ಸೋಲೂರಿನ ಕಮ್ಯೂನಿಟಿ ಆರೋಗ್ಯ ಸೆಂಟರ್‌ನ ಸೆಕ್ಷನ್ ಸೂಪರಿಟೆಂಡೆಂಟ್ ಎಂ.ಎಲ್.ಗಣೇಶ್ ಮೂರ್ತಿ ಅವರ ಕುದೂರು ಟೌನನಲ್ಲಿರುವ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿದ್ದು, ಸರಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News