×
Ad

ಎಸಿಪಿ ಶೈಲೇಂದ್ರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

Update: 2018-04-27 21:28 IST

ಬೆಂಗಳೂರು, ಎ.27: ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು, ಅರಮನೆ ಭದ್ರತೆ ವಿಭಾಗದ ಎಸಿಪಿ ಶೈಲೇಂದ್ರ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗೆ ಕಾನೂನು ಬಾಹಿರವಾಗಿ ಪತ್ರ ಬರೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಸುಬ್ರಹ್ಮಣ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿದೆ.

ಪ್ರಕರಣದ ಪ್ರತಿವಾದಿಗಳಾದ ಸರಸ್ವತಿ ಪುರಂ ಪೊಲೀಸ್ ಠಾಣೆ ಇನ್ಸಪೆಕ್ಟರ್, ಡಿಸಿಪಿ ಮತ್ತು ಎಸಿಪಿ ಶೈಲೇಂದ್ರ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ. ಜೂನ್ 5ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅರ್ಜಿದಾರರ ಪರ ಎಂ.ಎಸ್.ಭಾಗವತ್ ವಾದ ಮಂಡಿಸಿದರು.

ಪ್ರಕರಣವೇನು: ಅರಮನೆ ಭದ್ರತಾ ವಿಭಾಗದ ಎಸಿಪಿ ಶೈಲೇಂದ್ರ ಅವರು ಚಾಮುಂಡೇಶ್ವರಿ ಸೇರಿ ಇನ್ನಿತರ ವಿಧಾನಸಭಾ ಕ್ಷೇತ್ರಗಳಿಗೆ ಪೊಲೀಸ್ ವ್ಯಾನ್‌ನಲ್ಲಿ ಹಣ ಸಾಗಿಸುತ್ತಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರಿಗೆ ಐದು ಅನಾಮಧೇಯ ಪತ್ರ ಬಂದಿದ್ದವು. ಈ ಪತ್ರಗಳನ್ನು ಟಿ.ಎಸ್.ಸುಬ್ರಹ್ಮಣ್ಯ ಅವರು ಬರೆಸಿದ್ದಾರೆ ಎಂದು ಆರೋಪಿಸಿ ಈ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News