×
Ad

ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ಆರೋಪ: ಜೆಡಿಎಸ್ ಅಭ್ಯರ್ಥಿ ಹನುಮಂತೇಗೌಡ ವಿರುದ್ಧ ಕ್ರಮಕ್ಕೆ ಆಗ್ರಹ

Update: 2018-04-27 22:02 IST

ಬೆಂಗಳೂರು, ಎ.27: ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ಮಾಡಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹನುಮಂತೇಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ರೈತ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮಂತೇಗೌಡ ಎಂಬುವವರು ಹೆಬ್ಬಾಳ ಕ್ಷೇತ್ರಕ್ಕೆ ಸೇರಿದ ನಾಗಶೆಟ್ಟಿಹಳ್ಳಿ ಪ್ರದೇಶದಲ್ಲಿ 2.6 ಎಕರೆಗೂ ಅಧಿಕ ಸರಕಾರಿ ಜಮೀನನ್ನು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೆ, ಇಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದು, ಅದನ್ನು ಬಿಗ್ ಬಜಾರ್ ಕಂಪೆನಿಗೆ ಬಾಡಿಗೆಗೆ ನೀಡಿದ್ದಾರೆ. ಇದರ ಆಧಾರದ ಮೇಲೆ 8.9 ಕೋಟಿ ರೂ.ಗಳನ್ನು ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ ಎಂದರು.

ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡದಿಂದ ತಿಂಗಳಿಗೆ 20 ಲಕ್ಷ ಬಾಡಿಗೆ ಪಡೆಯುತ್ತಿದ್ದಾರೆ. ಆದರೆ, ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಈ ಯಾವ ಮಾಹಿತಿಯನ್ನು ನೀಡಿಲ್ಲ ಎಂದ ಅವರು, ಅವರಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ಈ ಆಸ್ತಿಯ ವಿವರಣೆ ಸಿಕ್ಕಿದೆ. ಆದರೆ, ಅವರು ಅಕ್ರಮವಾಗಿ ಕೋಟ್ಯಂತರ ರೂ.ಗಳ ಆಸ್ತಿಯ ಒಡೆಯನಾಗಿದ್ದಾರೆ ಎಂದು ಅವರು ಆರೋಪಿಸಿದರು.

ಹನುಮಂತೇಗೌಡ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಸರಕಾರಿ ಭೂಮಿಯನ್ನು ಕುಟುಂಬದ ಆಸ್ತಿ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಚುನಾವಣಾಧಿಕಾರಿಗಳು ಸೂಕ್ತ ದಾಖಲೆಗಳನ್ನು ಪರಿಶೀಲನೆ ನಡೆಸಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಚುನಾವಣಾ ಕಣದಿಂದ ರದ್ಧು ಮಾಡಬೇಕು ಎಂದು ಮುನೇಗೌಡ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News