ಕಾರ್ಮಿಕರಿಗೆ ಚುನಾವಣಾ ರಜೆ ನೀಡುವಂತೆ ಸೂಚಿಸಲು ಆಗ್ರಹ
ಬೆಂಗಳೂರು, ಎ.27: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಮಿಕರು ಕಡ್ಡಾಯ ಮತದಾನ ಮಾಡುವ ಸಲುವಾಗಿ ಚುನಾವಣಾ ಆಯೋಗವು ಮಾಲಕರಿಗೆ ಚುನಾವಣೆ ದಿನದಂದು ರಜೆ ನೀಡಬೇಕು ಎಂದು ಸೂಚಿಸಬೇಕು ಎಂದು ಕರ್ನಾಟಕ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್.ರಾಜನ್, ರಾಜ್ಯಾದ್ಯಂತ ಲಕ್ಷಾಂತರ ಕಾರ್ಮಿಕರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ, ವಾಣಿಜ್ಯ ಸಂಸ್ಥೆಗಳಲ್ಲಿ, ಹೊಟೇಲ್, ಗಾರ್ಮೆಂಟ್ಸ್ ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಆದರೆ, ಇವರಲ್ಲಿ ಬಹುತೇಕರು ಚುನಾವಣೆ ಸಂದರ್ಭದಲ್ಲಿ ಮತದಾನ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ, ಈ ಬಾರಿ ಚುನಾವಣಾ ಆಯೋಗವು ಕಾರ್ಮಿಕರಿಗೆ ಮತದಾನ ಮಾಡಲು ರಜಾ ನೀಡಲು ಮಾಲಕರಿಗೆ ಸೂಚನೆ ನೀಡಬೇಕು ಹಾಗೂ ರಜಾ ನೀಡದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮೇ 1 ಕಾರ್ಮಿಕ ದಿನಾಚರಣೆ: ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೇ 1 ರಂದು ನಗರದ ಮಿನರ್ವ ವೃತ್ತದಿಂದ ಜೆಸಿ ರಸ್ತೆಯ ಮೂಲಕ ಬನ್ನಪ್ಪ ಪಾರ್ಕ್‌ವರೆಗೂ ನೂರಾರು ಕಾರ್ಮಿಕರು ಕೆಂಪು ಸಮವಸ್ತ್ರ ಧರಿಸಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅನಂತರ ಪಾರ್ಕ್‌ನಲ್ಲಿ ಬೃಹತ್ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಮಿಕರ ಮೆರವಣಿಗೆಯಲ್ಲಿ ಪೀಣ್ಯ, ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಅತ್ತಿಬೆಲೆ, ಜಿಗಣಿ ಕೈಗಾರಿಕಾ ಪ್ರದೇಶಗಳಿಂದ ಹಾಗೂ ರಾಮನಗರ ಜಿಲ್ಲೆಯ ಬಿಡದಿ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.