ಔಷಧಗಳ ಮಾಹಿತಿ ಪಡೆಯುವುದು ಅತ್ಯಗತ್ಯ: ಡಾ.ಎಸ್.ರಾಮಾನಂದ ಶೆಟ್ಟಿ
ಬೆಂಗಳೂರು, ಎ.27: ಶಿಕ್ಷಣದ ಜೊತೆಗೆ ರೋಗಿಗಳಿಗೆ ನೀಡುವ ಔಷಧದ ಮೂಲ ಪರಿಣಾಮಗಳ ಬಗ್ಗೆ ಔಷದಾಲಯ(ಫಾರ್ಮಸಿ) ವಿದ್ಯಾರ್ಥಿಗಳು ನಿಖರವಾದ ಮಾಹಿತಿ ಪಡೆದುಕೊಳ್ಳುವುದು ಮುಖ್ಯ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಮಾನಂದ ಶೆಟ್ಟಿ ಹೇಳಿದರು.
ಶುಕ್ರವಾರ ನಗರದ ಯಲಹಂಕದ ಆದಿತ್ಯ ಇನ್ಸ್‌ಟಿಟ್ಯೂಟ್ ಆಫ್ ಫಾರ್ಮಸಿ ಎಜುಕೇಶನ್ ಅಂಡ್ ರಿಸರ್ಚ್ (ಎಬಿಐಪಿಇಆರ್) ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೋಗಿಗಳಿಗೆ ವೈದ್ಯರು ಬರೆದುಕೊಡುವ ಔಷಧಿಯನ್ನು ಕೊಡುವುದಷ್ಟೇ ಫಾರ್ಮಸಿ ಶಿಕ್ಷಣವಲ್ಲ. ಬದಲಾಗಿ ರೋಗಿಗಳಿಗೆ ಕೂಡುವ ಔಷಧ ಅದರ ಮೂಲ ಹಾಗೂ ಅದರಿಂದಾಗುವ ಪರಿಣಾಮಗಳ ಇಲ್ಲಿಯವೆರೆಗೆ ಆಗಿರುವ ಅನುಭವಗಳು ಅಡ್ಡಪರಿಣಾಮಗಳ ಕುರಿತು ತಿಳಿದುಕೊಳ್ಳುವುದು ಅಗತ್ಯ ಎಂದರು.
ಉಪನ್ಯಾಸಕರು ಶಿಕ್ಷಣಕ್ಕಷ್ಟೇ ಸೀಮಿತವಾಗದೇ ಮೂಲಭೂತ ಶಿಕ್ಷಣದ ಸಮುದಾಯದ ನಡುವಿನ ವ್ಯತ್ಯಾಸ, ತಂತ್ರಜ್ಞಾನದ ಪ್ರಗತಿ, ಸವಾಲುಗಳು ಮತ್ತು ಅನಿಶ್ಚಿತತೆಯನ್ನು ನಿಭಾಯಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.
ರಾಜ್ಯ ಸರಕಾರದ ಔಷಧ ನಿಯಂತ್ರಕ ಭಾಗೋಜಿ ಟಿ.ಖಾನಪುರ್ ಮಾತನಾಡಿ, ಭಾರತೀಯ ಔಷಧೀಯ ಉದ್ಯಮವು ವಿಶ್ವದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದು ಈ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಫಾರ್ಮಸಿ ಪ್ರಮುಖ ಪಾತ್ರವಹಿಸಲಿದೆ ಫಾರ್ಮಸಿ ಶಿಕ್ಷಣ ಪಡೆಯುವುದು ಕೇವಲ ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೇ ರೋಗಿಗಳ ಸೇವೆಯನ್ನು ಪ್ರಮುಖ ಧ್ಯೇಯವಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆದಿತ್ಯ ಇನ್ಸ್‌ಟಿಟ್ಯೂಟ್‌ನ ಅಧ್ಯಕ್ಷ ಡಾ. ಬಿ.ಎ.ವಿಶ್ವನಾಥ್, ಇನ್ಸ್‌ಟಿಟ್ಯೂಟ್‌ನ ನಿರ್ದೇಶಕಿ ಡಾ.ಪ್ರಿಯಾ ವಿಶ್ವನಾಥ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.