ರಾಜಿಂದರ್ ಸಾಚಾರ್

Update: 2018-04-29 11:08 GMT

ರಾಜಿಂದರ್ ಸಾಚಾರ್ ಇಂದು ಚರಿತ್ರೆಯ ಭಾಗವಾಗಿ ಸೇರಿಕೊಂಡಿದ್ದಾರೆ. ಅವರು ಮಾಡಿದ ಸೇವೆಗೆ ನಮನಗಳು. ನ್ಯಾಯಾಂಗದ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಚಾರ್‌ರಂತಹ ನ್ಯಾಯಾಧೀಶರುಗಳ ಅವಶ್ಯಕತೆ ಬಹಳವಿದೆ.

ದೇಶವಿಭಜನೆ ಸಂದರ್ಭದಲ್ಲಿ ಈಗಿನ ಪಾಕಿಸ್ತಾನ ಭಾಗದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಕಣ್ಣಾರೆ ಕಂಡು ಅಲ್ಲಿಂದ ಭಾರತಕ್ಕೆ ಬಂದವರಾಗಿದ್ದರು ರಾಜಿಂದರ್ ಸಾಚಾರ್. ಆದರೂ ಅವರು ಕಾಮಾಲೆ ಕಣ್ಣುಗಳಿಂದ ಅವುಗಳನ್ನು ನೋಡದೆ ಸರಿಯಾದ ಸಾಮಾಜಿಕ ಗ್ರಹಿಕೆಗಳನ್ನು ಬೆಳೆಸಿಕೊಂಡರು. ಅವರ ಆರೋಗ್ಯಕರ ದೃಷ್ಟಿಕೋನದಿಂದಾಗಿಯೇ ಭಾರತದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಬಗ್ಗೆ ಇಂತಹ ಹಲವು ಆಯಾಮಗಳುಳ್ಳ ಚಾರಿತ್ರಿಕ ವರದಿಯನ್ನು ನೀಡಲು ಸಾಚಾರ್ ಸಮಿತಿಗೆ ಸಾಧ್ಯವಾಗಿದೆ ಎನಿಸುತ್ತದೆ. ಇದರಲ್ಲಿ ಇಡೀ ಸಮಿತಿಯ ಪಾತ್ರ ಪ್ರಮುಖವಾಗಿದೆ.

ನ್ಯಾಯಾಧೀಶ ರಾಜಿಂದರ್ ಸಾಚಾರ್ ಈ ದೇಶದ ಬಹಳ ಜನರಿಗೆ ಚಿರಪರಿಚಿತ ಹೆಸರು. ಮಾನವ ಹಕ್ಕು ಹೋರಾಟಗಾರರಾಗಿಯೂ ಸಾಚಾರ್ ಗುರುತಿಸಿಕೊಂಡಿದ್ದರು. ಅವರು ಹೆಸರಾಂತ ನ್ಯಾಯವಾದಿಯಾಗಿದ್ದರು. ಅವರು ನೇತೃತ್ವ ವಹಿಸಿದ್ದ ‘ಸಾಚಾರ್ ಸಮಿತಿ’ ನೀಡಿದ್ದ ಅಧ್ಯಯನ ವರದಿ ಹಾಗೂ ಶಿಫಾರಸುಗಳು ಚರಿತ್ರಾರ್ಹ ಮಹತ್ವವನ್ನು ಪಡೆದಿವೆೆ. ಆ ವರದಿ ದೇಶಾದ್ಯಂತ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಮುಸ್ಲಿಂ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗೆಗಿನ ಅಧ್ಯಯನ ವರದಿ ಅದಾಗಿತ್ತು.

ನ್ಯಾಯಾಧೀಶ ರಾಜಿಂದರ್ ಸಾಚಾರ್ ಇಂದು ನಮ್ಮಾಂದಿಗೆ ಇಲ್ಲ. ತಮ್ಮ ತೊಂಬತ್ತೈದನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇದೇ 20 ಎಪ್ರಿಲ್ 2018 ರಂದು ದಿಲ್ಲಿಯಲ್ಲಿ ಅವರು ತಮ್ಮ ಬಾಳಪಯಣವನ್ನು ಮುಗಿಸಿದರು.

1923 ಡಿಸೆಂಬರ್ 22 ರಂದು ಹುಟ್ಟಿದ ರಾಜಿಂದರ್ ಸಾಚಾರ್ ಈಗ ಪಾಕಿಸ್ತಾನದ ಭಾಗವಾಗಿರುವ ಲಾಹೋರಿನಲ್ಲಿ ತಮ್ಮ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಪೂರೈಸಿದರು. ಕಾನೂನು ಪದವಿಯನ್ನು ಅಲ್ಲೇ ಪಡೆದರು. ಎಪ್ರಿಲ್ 22-1952 ರಿಂದ ವಕೀಲರಾಗಿ ಕಾರ್ಯನಿರ್ವಹಿಸಲಾರಂಭಿಸಿದ್ದರು. ಹಿಮಾಚಲ ಪ್ರದೇಶದ ಸಿಮ್ಲಾದಿಂದ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದ ರಾಜಿಂದರ್ ಸಾಚಾರ್ 1960ರ ವೇಳೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ತೊಡಗಿಸಿಕೊಂಡರು. ಸಿವಿಲ್, ಕ್ರಿಮಿನಲ್ ಹಾಗೂ ಕಂದಾಯ ವಿವಾದಗಳಿಗೆ ಸಂಬಂಧಿಸಿದ ದೂರುಗಳ ವಿಚಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನ್ಯಾಯಾಂಗದ ಎಲ್ಲಾ ವಿಭಾಗಗಳಲ್ಲೂ ಪರಿಣತಿಯನ್ನು ಪಡೆದಿದ್ದರು.

1970ರ ಫೆಬ್ರವರಿಯಲ್ಲಿ ಅವರು ದಿಲ್ಲಿ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಎರಡು ವರ್ಷಗಳ ಅವಧಿಗೆ ನೇಮಕವಾದರು. 1972 ರ ಫೆಬ್ರವರಿಯಲ್ಲಿ ನ್ಯಾಯಾಧೀಶರಾಗಿ ಸಾಚಾರ್‌ರನ್ನು ಮತ್ತೆರಡು ವರ್ಷಗಳ ಅವಧಿಗೆ ವಿಸ್ತರಿಸಲಾಯಿತು. 1972 ಜುಲೈನಲ್ಲಿ ಅವರು ದಿಲ್ಲಿ ಉಚ್ಚ ನ್ಯಾಯಾಲಯದ ಶಾಶ್ವತ ನ್ಯಾಯಾಧೀಶರುಗಳಲ್ಲಿ ಒಬ್ಬರಾಗಿ ನೇಮಕಗೊಂಡರು. ಸಿಕ್ಕಿಂ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ 16 ಮೇ 1975 ರಿಂದ 10 ಮೇ 1976 ರವರೆಗೆ ಕಾರ್ಯನಿರ್ವಹಿಸಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಏಕಾಏಕಿ ಅವರನ್ನು ಸಿಕ್ಕಿಂನಿಂದ ರಾಜಸ್ಥಾನಕ್ಕೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಲ್ಲಿ ಒಬ್ಬರನ್ನಾಗಿ ವರ್ಗಾಯಿಸಲಾಗಿತ್ತು. ತುರ್ತು ಪರಿಸ್ಥಿತಿಯನ್ನು ಸಮರ್ಥಿಸದೇ ಇದ್ದುದಕ್ಕೇ ಅವರನ್ನು ಈ ರೀತಿ ವರ್ಗಾವಣೆ ಮಾಡಲಾಗಿತ್ತು. ತುರ್ತುಪರಿಸ್ಥಿತಿ ಮುಗಿದು ಹೊಸ ಸರಕಾರ ರಚನೆಯಾದ ನಂತರವೇ ಸಾಚಾರರು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಮರಳಿ ಬಂದಿದ್ದು. ಆಗಸ್ಟ್ 1985 ರಿಂದ ತಮ್ಮ ನಿವೃತ್ತಿಯ ಅವಧಿಯಾದ 22 ಡಿಸೆಂಬರ್ 1985ರ ವರೆಗೂ ಅವರು ದಿಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು.

1977 ಜೂನ್‌ನಲ್ಲಿ ಕಂಪೆನಿ ಕಾಯ್ದೆ ಹಾಗೂ ಏಕಸ್ವಾಮ್ಯ ಮತ್ತು ನಿರ್ಬಂಧಿತ ವ್ಯಾಪಾರಿ ವ್ಯವಹಾರ ಕಾಯ್ದೆಯ (Companies Act and the Monopolies and Restrictive Trade Practices Act)  ಪುನರ್ ಪರಿಶೀಲನೆಗಾಗಿ ರಚಿತಗೊಂಡ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸಮಿತಿಯ ನೇತೃತ್ವ ವಹಿಸಿ ಅವರು ಸಲ್ಲಿಸಿದ್ದ ವರದಿಯಲ್ಲಿ ವ್ಯಾಪಾರಿ ಸಂಸ್ಥೆಗಳು ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಪಾರದರ್ಶಕತೆ ಪಾಲಿಸದೇ ಇರುವುದನ್ನು ಗುರ್ತಿಸಿ ಹೇಳಿದ್ದರು. ಅದರಲ್ಲೂ ಮುಖ್ಯವಾಗಿ ಅದರಿಂದಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಒತ್ತು ಕೊಟ್ಟಿದ್ದರು.

1984 ಮೇ ತಿಂಗಳಲ್ಲಿ ಕೈಗಾರಿಕಾ ವ್ಯಾಜ್ಯಗಳ ಕಾಯ್ದೆಯನ್ನು ಪುನರ್ ಪರಿಶೀಲನೆ ಮಾಡಿದ್ದ ರಾಜಿಂದರ್ ಸಾಚಾರ್, ಬಾಕಿ ಉಳಿದಿರುವ ವ್ಯಾಜ್ಯಗಳ ಬಗ್ಗೆ, ಕಾರ್ಮಿಕ ನ್ಯಾಯಾಲಯಗಳಲ್ಲಿ ರಾಶಿಯಾಗಿ ಉಳಿದಿರುವ ವ್ಯಾಜ್ಯಗಳ ಕುರಿತು ಆತಂಕವನ್ನು ಪ್ರಕಟಿಸಿದ್ದರು. ಇರುವ ನ್ಯಾಯಾಲಯಗಳು ವ್ಯಾಜ್ಯಗಳ ಅನುಪಾತಕ್ಕೆ ಸಾಲುವುದಿಲ್ಲವೆಂಬುದನ್ನು ಗುರುತಿಸಿ ಹೇಳಿದ್ದರು. ಇದು ಮಾಲಕರಿಗೂ ಕಾರ್ಮಿಕರಿಗೂ ಬಹಳ ಕೆಡುಕನ್ನು ಮಾಡಲಿದೆ ಎಂದಿದ್ದರು.

1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಪಿ.ಯು.ಡಿ.ಆರ್ ಎಂಬ ಮಾನವ ಹಕ್ಕು ಸಂಘಟನೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ನ್ಯಾಯಾಧೀಶ ರಾಜಿಂದರ್ ಸಾಚಾರ್, ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಬಾಧಿತರಾದವರ ಹೇಳಿಕೆಗಳನ್ನು ಆಧರಿಸಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲು ಪೊಲೀಸ್ ಇಲಾಖೆಗೆ ಸೂಚಿಸಿದ್ದರು. ಅದರಲ್ಲಿ ಕಾಂಗ್ರೆಸ್‌ನ ಹಲವಾರು ನಾಯಕರುಗಳ ಹೆಸರುಗಳು ಇದ್ದ್ದದ್ದರಿಂದ ನಂತರದ ವಿಚಾರಣಾ ದಿನಾಂಕದ ವೇಳೆಗೆ ಸಾಚಾರ್ ಅವರಿದ್ದ ಪೀಠದಿಂದ ಆ ಅರ್ಜಿಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಲಾಗಿತ್ತು. ನಂತರ ದಾವೆದಾರರನ್ನು ಮನವೊಲಿಸಿ ದಾವೆಯನ್ನು ವಾಪಸ್ ಪಡೆ ಯಲು ಯತ್ನಿಸಿ ಅದು ಕೈಗೂಡದೇ ಇದ್ದಾಗ ಆ ದಾವೆಯನ್ನೇ ಇಬ್ಬರು ನ್ಯಾಯಾಧೀಶರಿದ್ದ ಆ ಪೀಠ ರದ್ದುಗೊಳಿಸಿತ್ತು. ಈ ಕ್ರಮ ವಿವಾದಕ್ಕೆ ಕಾರಣವಾಗಿತ್ತು. ನ್ಯಾಯಾಂಗದಲ್ಲಿನ ಇಂತಹ ಬೆಳವಣಿಗೆಗಳಿಗೆ ಸಾಚಾರ್ ತುಂಬಾ ನೊಂದುಕೊಂಡಿದ್ದರು.

ಸಾಚಾರ್‌ರು ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಬಹಳ ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು. ಮಾನವ ಹಕ್ಕುಗಳ ರಕ್ಷಣೆಯ ಬಗೆಗಿನ ಕಾಯ್ದೆಯ ಪುನರ್ ಪರಿಶೀಲನೆಗಾಗಿ ರಚಿತವಾಗಿದ್ದ ಸಲಹಾಸಮಿತಿಯ ಸದಸ್ಯರಾಗಿಯೂ ಅವರು ಕೆಲಸ ಮಾಡಿದ್ದರು. ಕಾಶ್ಮೀರದಲ್ಲಿನ ಗಲಭೆಪೂರಿತ ಪರಿಸ್ಥಿತಿಯ ಬಗ್ಗೆ ವರದಿ ತಯಾರಿಸುವಲ್ಲಿ ಪಾತ್ರ ವಹಿಸಿದ್ದರು. 1990 ರಲ್ಲಿ ಈ ವರದಿ ಹೊರಬಂದಿತ್ತು. ಪಿ.ಯು.ಸಿ.ಎಲ್ ಎಂಬ ಮಾನವ ಹಕ್ಕು ಸಂಘಟನೆಯಲ್ಲೂ ಅವರು ತೊಡಗಿಸಿಕೊಂಡಿದ್ದರು. ಮಾನವ ಹಕ್ಕುಗಳ ಕುರಿತಂತೆ 2004 ರಲ್ಲಿ ಮಾನವ ಹಕ್ಕುಗಳು 1996 ರಲ್ಲಿ ಅತ್ಯಗತ್ಯ ವಸತಿ ಹೊಂದುವ ಹಕ್ಕು ಎಂಬ ಪುಸ್ತಕಗಳನ್ನು ಅವರು ರಚನೆ ಮಾಡಿದ್ದರು. ಈ ಎರಡೂ ಪುಸ್ತಕಗಳು ಆಂಗ್ಲ ಭಾಷೆಯಲ್ಲಿವೆ.

ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಮೀಸಲಾತಿ ಇರಬೇಕೆಂದು ಬಲವಾಗಿ ಪ್ರತಿಪಾದಿಸುತ್ತಿದ್ದವರಲ್ಲಿ ಸಾಚಾರ್ ಒಬ್ಬರಾಗಿದ್ದರು. 2003ರಲ್ಲಿ ಅಮೆರಿಕ, ಇರಾಕ್ ಮೇಲೆ ನಡೆಸಿದ್ದ ಆಕ್ರಮಣವನ್ನು ಅಪ್ರಚೋದಿತವಾದುದು, ಅನ್ಯಾಯದ್ದು ಮತ್ತು ಅಂತರ್‌ರಾಷ್ಟ್ರೀಯ ಕಾನೂನು ಹಾಗೂ ವಿಶ್ವಸಂಸ್ಥೆಯ ನಿಯಮದ ಉಲ್ಲಂಘನೆ ಎಂದು ಕಟುವಾದ ಶಬ್ದಗಳಲ್ಲಿ ನ್ಯಾಯವಾದಿ ಪ್ರಶಾಂತ್ ಭೂಷಣ್‌ರೊಂದಿಗೆ ಸೇರಿ ಟೀಕಿಸಿದ್ದ ವ್ಯಕ್ತಿ. ನ್ಯಾಯಾಧೀಶ ರಾಜಿಂದರ್ ಸಾಚಾರ್ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ರಕ್ಷಣೆಗಾಗಿನ ಉಪ ಆಯೋಗದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

1963 ರ ಸಂದರ್ಭದಲ್ಲಿ ಕಾಂಗ್ರೆಸ್ಸಿನಿಂದ ಸಿಡಿದ ಒಂದು ಗುಂಪು ಪ್ರಜಾತಂತ್ರ ಪಕ್ಷ ಎಂಬ ಪಕ್ಷವನ್ನು ಸ್ಥಾಪಿಸಿತ್ತು. ಪಂಜಾಬಿನ ಆಗಿನ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ಕೈರೋನ್‌ರ ಭ್ರಷ್ಟಾಚಾರ ಹಾಗೂ ದುರಾಡಳಿತಗಳ ಬಗ್ಗೆ ದೋಷಾರೋಪಗಳನ್ನು ತಯಾರಿಸುವಲ್ಲಿ ಆ ಪಕ್ಷಕ್ಕೆ ಆಗ ನ್ಯಾಯವಾದಿಯಾಗಿದ್ದ ರಾಜಿಂದರ್ ಸಾಚಾರ್ ನೆರವಾಗಿದ್ದರು. ಆ ದೋಷಾರೋಪಗಳೆಲ್ಲಾ ನಂತರ ಸಾಬೀತಾಗಿ ಕೈರೋನ್ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ನ್ಯಾಯಾಧೀಶ ರಾಜಿಂದರ್ ಸಾಚಾರ್ ಹೆಚ್ಚು ಜನ ಮಾನಸದ ನೆನಪಿನಲ್ಲಿ ಉಳಿಯುವಂತೆ ಆಗಿದ್ದು ಅವರ ನೇತೃತ್ವದಲ್ಲಿ ತಯಾರಾದ ಮುಸ್ಲಿಂ ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳ ಬಗೆಗಿನ ವರದಿಯಿಂದ. ಈ ವರದಿ ಸಾಚಾರ್ ಸಮಿತಿ ವರದಿಯೆಂದೇ ಪರಿಗಣಿತವಾಗಿದೆ.

ಸಾಚಾರ್ ಸಮಿತಿ ವರದಿ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ನಿಜವಾದ ಸ್ಥಿತಿಗತಿಗಳನ್ನು ತೆರೆದಿಟ್ಟಿತ್ತು. ಬ್ರಾಹ್ಮಣಶಾಹಿ ಹಿಂದೂ ಕೋಮುವಾದಿ ಸಂಘ ಪರಿವಾರ ನಿರಂತರವಾಗಿ ಮಾಡುತ್ತಿದ್ದ ಕಟುಸುಳ್ಳು ಆರೋಪಗಳಿಗೆ ಸಾಚಾರ್ ವರದಿಯಲ್ಲಿ ಸ್ಪಷ್ಟ ಉತ್ತರಗಳಿವೆ. 2005ರ ಮಾರ್ಚ್‌ನಲ್ಲಿ ರಾಜಿಂದರ್ ಸಾಚಾರ್‌ರ ನೇತೃತ್ವದಲ್ಲಿ ಏಳು ಮಂದಿಯ ಸಮಿತಿಯನ್ನು ಮುಸ್ಲಿಂ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ವರದಿ ತಯಾರಿಸಲು ರಚಿತವಾಗಿತ್ತು. ಈ ಸಮಿತಿ ನವೆಂಬರ್ 30, 2006 ರಂದು 403 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು.

2001ರ ಜನಗಣತಿಯ ವಿವರಗಳು, ರಾಷ್ಟ್ರೀಯ ಸ್ಯಾಂಪಲ್ ಸರ್ವೇ, ಭಾರತೀಯ ರಿಸರ್ವ್ ಬ್ಯಾಂಕ್, ನಬಾರ್ಡ್, ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್, ರಾಷ್ಟ್ರೀಯ ಅಲ್ಪ ಸಂಖ್ಯಾತರ ಅಭಿವೃದ್ಧಿ ಹಾಗೂ ಹಣಕಾಸು ನಿಗಮ, ಇನ್ನಿತರ ಹಣಕಾಸು ಸಂಸ್ಥೆಗಳು, ಸರಕಾರದ ವಿವಿಧ ಇಲಾಖೆಗಳು, ಅಲ್ಪಸಂಖ್ಯಾತರಿಗಾಗಿನ ರಾಷ್ಟ್ರೀಯ ಆಯೋಗ NCERT , ವಿವಿಧ ಸಚಿವಾಲಯಗಳು, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳು, ಕಾಲೇಜುಗಳು ಮೊದಲಾದವುಗಳಿಂದ ಮಾಹಿತಿಗಳನ್ನು ಸಂಗ್ರಹಿಸಿದ ಸಾಚಾರ್ ಸಮಿತಿ ಅಧ್ಯಯನ ನಡೆಸಿ ವರದಿ ತಯಾರಿಸಿತ್ತು. ಹಾಗಾಗಿ ಈ ವರದಿಗೆ ಅಧಿಕೃತ ಮಾಹಿತಿಗಳೇ ಪ್ರಧಾನ ಮೂಲಗಳಾಗಿದ್ದವು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹೋಲಿಕೆಯಲ್ಲಿ ದಲಿತರಿಗಿಂತಲೂ ಹಿಂದುಳಿದಿರುವುದನ್ನು ಅಂಕಿಅಂಶಗಳ ಮೂಲಕ ಸ್ಪಷ್ಟವಾಗಿ ಹೇಳಿತು. ಮುಸ್ಲಿಂ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಅತ್ಯಲ್ಪವಾಗಿ ಪಾಲ್ಗೊಳ್ಳುವ ಸ್ಥಿತಿಯಲ್ಲಿರುವುದನ್ನು ಗುರುತಿಸಿ ಹೇಳಿತು. ಮುಸ್ಲಿಂ ಸಮುದಾಯದಲ್ಲಿ ನೂರ ಮೂವತ್ತ ಮೂರರಷ್ಟು ಜಾತಿ ಪಂಗಡಗಳಿರುವುದನ್ನು ಗುರುತಿಸಿದ ಈ ಸಾಚಾರ್ ಸಮಿತಿ ಅಲ್ಲಿನ ಜಾತಿ ಅಸಮಾನತೆಗಳ ಬಗ್ಗೆಯೂ ಬೆಳಕು ಚೆಲ್ಲಿತು. ಮುಸ್ಲಿಂ ಸಮುದಾಯದಲ್ಲಿಯೂ ದಲಿತ, ಹಿಂದುಳಿದ ವರ್ಗಗಳಿಗೆ ಸೇರಿಸಬೇಕಾದ ಜಾತಿಪಂಗಡಗಳಿವೆ ಎನ್ನುವುದನ್ನು ಉದಾಹರಣೆ ಸಹಿತವಾಗಿ ವಿವರಿಸಿ ಹೇಳಿತು. ಉಚ್ಚ ಜಾತಿಗಳೆಂದು ಗುರುತಿಸಲ್ಪಟ್ಟ ಜಾತಿಪಂಗಡಗಳು ಮುಸ್ಲಿಮರಾಗಿ ಮತಾಂತರವಾಗಿ ಅಲ್ಲೂ ಉಚ್ಚ ಜಾತಿಯ ಸ್ಥಾನಮಾನಗಳನ್ನು ಹೊಂದಿ ಉಳಿದವರನ್ನು ತುಚ್ಛೀಕರಿಸಿ ನೋಡುತ್ತಿರುವುದರ ಬಗ್ಗೆಯೂ ಸಮಿತಿಯ ವರದಿಯಲ್ಲಿ ವಿವರಗಳಿವೆ. ದೇಶದ ಕಾರಾಗೃಹಗಳಲ್ಲಿ ಹೆಚ್ಚು ಶೇಕಡಾವಾರು ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದ ಜನರು ಬಂಧಿಗಳಾಗಿ ಸಿಲುಕಿರುವುದನ್ನು ಗುರುತಿಸಿದ ಸಾಚಾರ್ ಸಮಿತಿ ವರದಿ ಜಾಗತೀಕರಣದ ನಂತರ ಪಾರಂಪರಿಕ ಉದ್ಯೋಗಗಳ ಅವಕಾಶಗಳಿಂದ ವಂಚಿತರಾಗಿ ಅವರ ಬದುಕು ದುರ್ಬರವಾಗಿರುವುದನ್ನು ಹೇಳಿತು.

ಸಾಚಾರ್ ಸಮಿತಿ ಸಲ್ಲಿಸಿದ ಈ ವರದಿ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಆದರೆ ಆ ವರದಿ ಈಗಲೂ ಅನುಷ್ಠಾನ ಆಗಿಲ್ಲ. ಸಂಘ ಪರಿವಾರ ಮಾತ್ರ ಸಾಚಾರ್ ಸಮಿತಿಯ ವರದಿಯನ್ನು ಇನ್ನಿಲ್ಲದಂತೆ ವಿರೋಧಿಸುತ್ತಾ ಬಂದಿದೆ. ಹಾಗಾಗಿ ಬಿಜೆಪಿ ಸರಕಾರ ಅದನ್ನು ಅನುಷ್ಠಾನಗೊಳಿಸಲು ಹೋಗುವುದಿಲ್ಲ. ಆದರೆ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಕೂಡ ಅನುಷ್ಠಾನಗೊಳಿಸಲಿಲ್ಲ ಎನ್ನುವುದನ್ನು ಮರೆಯುವಂತಿಲ್ಲ.

ನ್ಯಾಯಾಧೀಶ ರಾಜಿಂದರ್ ಸಾಚಾರ್‌ರ ತಂದೆ ಭೀಮ್‌ಸೇನ್ ಸಾಚಾರ್ ಎರಡು ಅವಧಿಗೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1949 ರಲ್ಲಿ ಎಂಟು ತಿಂಗಳುಗಳ ಕಾಲ ನಂತರ 1952 ರಿಂದ 1956 ರವರೆಗೆ ಅವರು ಅಧಿಕಾರದಲ್ಲಿದ್ದರು.

1948ರಲ್ಲಿ ಸಮಾಜವಾದಿ ಪಕ್ಷ ಸ್ಥಾಪನೆಯಾದಾಗ ರಾಜಿಂದರ್ ಸಾಚಾರ್ ಅದರ ಸದಸ್ಯರಾಗಿ ಸೇರಿಕೊಂಡರು. ಅವರ ತಂದೆಯವರ ರಾಜಕೀಯ ನಿಲುವುಗಳನ್ನು ವಿರೋಧಿ ಸುತ್ತಿದ್ದ ರಾಜಿಂದರ್ ಸಾಚಾರ್ ದೇಶವಿಭಜನೆ ಸಂದರ್ಭದಲ್ಲಿ ಈಗಿನ ಪಾಕಿಸ್ತಾನ ಭಾಗದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಕಣ್ಣಾರೆ ಕಂಡು ಅಲ್ಲಿಂದ ಭಾರತಕ್ಕೆ ಬಂದವರಾಗಿದ್ದರು. ಆದರೂ ಅವರು ಕಾಮಾಲೆ ಕಣ್ಣುಗಳಿಂದ ಅವುಗಳನ್ನು ನೋಡದೇ ಸರಿಯಾದ ಸಾಮಾಜಿಕ ಗ್ರಹಿಕೆಗಳನ್ನು ಬೆಳೆಸಿಕೊಂಡರು. ಅವರ ಆರೋಗ್ಯಕರ ದೃಷ್ಟಿಕೋನದಿಂದಾಗಿಯೇ ಭಾರತದ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರ ಬಗ್ಗೆ ಇಂತಹ ಹಲವು ಆಯಾಮಗಳುಳ್ಳ ಚಾರಿತ್ರಿಕ ವರದಿಯನ್ನು ನೀಡಲು ಸಾಚಾರ್ ಸಮಿತಿಗೆ ಸಾಧ್ಯವಾಗಿದೆ ಎನಿಸುತ್ತದೆ. ಇದರಲ್ಲಿ ಇಡೀ ಸಮಿತಿಯ ಪಾತ್ರ ಪ್ರಮುಖವಾಗಿದೆ. ಇಂತಹ ರಾಜಿಂದರ್ ಸಾಚಾರ್ ಇಂದು ಚರಿತ್ರೆಯ ಭಾಗವಾಗಿ ಸೇರಿಕೊಂಡಿದ್ದಾರೆ. ಅವರು ಮಾಡಿದ ಸೇವೆಗೆ ನಮನಗಳು ನ್ಯಾಯಾಂಗದ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಚಾರ್‌ರಂತಹ ನ್ಯಾಯಾಧೀಶರುಗಳ ಅವಶ್ಯಕತೆ ಬಹಳವಿದೆ.

Writer - ನಂದಕುಮಾರ್. ಕೆ.ಎನ್.

contributor

Editor - ನಂದಕುಮಾರ್. ಕೆ.ಎನ್.

contributor

Similar News