ಪುಸ್ತಕಗಳು

Update: 2018-04-29 11:38 GMT

ಭಾಗ 1

ಒಂದು ಟೀ ಷರ್ಟ್ ಅಥವಾ ಬೇರಾವುದೋ ಬಳಕೆಯ ವಸ್ತುಗಳು ಉತ್ಪಾದನೆಯಾಗುವಂತೆ ಪುಸ್ತಕಗಳು ಉತ್ಪಾದನೆಯಾಗುವುದಿಲ್ಲ. ಕೋಟ್ಯಂತರ ಮಂದಿಯಲ್ಲಿ ಲಕ್ಷಾಂತರ ಮಂದಿ ಪುಸ್ತಕವನ್ನು ಸಮರ್ಥವಾಗಿ ಓದಬಲ್ಲ ವಿದ್ಯಾವಂತರಿರುತ್ತಾರೆ. ಆದರೆ ಸಾವಿರ ಪ್ರತಿಗಳು ಮಾರಾಟವಾಗುವುದು ಬಲು ಕಷ್ಟದ ಕೆಲಸ. ಎಲ್ಲರೂ ಎಲ್ಲಾ ಪುಸ್ತಕಗಳನ್ನು ಕೊಳ್ಳುವುದಿಲ್ಲ, ಕೊಳ್ಳಬೇಕಿಲ್ಲ. ಓದಬೇಕಿಲ್ಲ. ಆದರೆ ವಿಷಯ ಮತ್ತು ಆಸಕ್ತಿ ಭೇದಗಳಿಗನುಸಾರವಾಗಿಯಾದರೂ ಕೆಲವು ಸಾವಿರಗಳೇ ಪುಸ್ತಕಗಳು ಮಾರಾಟವಾಗಬೇಕಾಗಿತ್ತು.

ಪುಸ್ತಕ ಎಂದರೆ ಅದು ಏನು?

ಪುಸ್ತಕ ಜ್ಞಾನದ ಕಿಟಕಿ, ನಿನ್ನ ಆಯ್ಕೆಯ ಪುಸ್ತಕ ಎಂಥದ್ದು ಎಂದು ಹೇಳಿದರೆ, ನೀನು ಎಂತಹವನೆಂದು ಹೇಳುತ್ತೇನೆ, ಪುಸ್ತಕ ಜ್ಞಾನಿಯ ಆತ್ಮೀಯ ಸಂಗಾತಿ, ಅರಿವಿನ ಗುರಿಗೆ ಪುಸ್ತಕವೇ ಗುರು ಎಂದೆಲ್ಲಾ ಬಹಳಷ್ಟು ಪುಸ್ತಕಗಳ ಬಗ್ಗೆ ನುಡಿಮುತ್ತುಗಳು ಕಂಗೊಳಿಸುತ್ತಿರುತ್ತವೆ.

ಈ ಮಾತುಗಳೆಲ್ಲವೂ ನಿಜ. ಆದರೆ, ಇವೆಲ್ಲಾ ಆಗಬೇಕಾದರೆ, ಪುಸ್ತಕಗಳು ಮಕ್ಕಳಿಗೆ ಕೈಗೆಟಕಬೇಕು. ಜನರಿಗೆ ಪುಸ್ತಕಗಳು ಸಿಕ್ಕಬೇಕು. ಪುಸ್ತಕಗಳು ಸಿಕ್ಕಮೇಲೆ ಓದು ದಕ್ಕಬೇಕು. ಓದು ದಕ್ಕಿದ ಮೇಲೆ ಮುಂದಿನ ಮಾತು.

ಹಿಂದೆಂದಿಗಿಂತಲೂ ಪುಸ್ತಕಗಳು ಅತ್ಯಧಿಕ ಪ್ರಮಾಣದಲ್ಲಿ ಮುದ್ರಣಗೊಳ್ಳುತ್ತಿವೆ, ಪ್ರಕಾಶನಗೊಳ್ಳುತ್ತಿವೆ ಹಾಗೆ ಪುಸ್ತಕಗಳು ಬರುತ್ತಿರುವುದು, ಜನರು ಹೆಚ್ಚು ಹೆಚ್ಚು ಬುದ್ಧಿವಂತರೂ, ಜ್ಞಾನಿಗಳೂ, ತಿಳುವಳಿಕಸ್ಥರೂ ಆಗುತ್ತಿದ್ದಾರೆಂದುಕೊಂಡರೆ, ಅದು ಭ್ರಮೆ. ಅದೇ ರೀತಿ ಮಕ್ಕಳ ಪಠ್ಯಗಳಲ್ಲೂ ಬಹಳಷ್ಟು ಆವಿಷ್ಕಾರಗಳಾಗಿವೆ. ಬಹಳಷ್ಟು ಹೊಸ ಹೊಸ ವಿಷಯಗಳು ಸೇರ್ಪಡೆಯಾಗಿವೆ. ಆದರೂ ಶಿಕ್ಷಕರಾಗಲಿ, ಮಕ್ಕಳಾಗಲಿ ಪಾಠಗಳನ್ನು ಕಲಿತವರಾಗುತ್ತಾರೆಯೇ ಹೊರತು ಸೂಕ್ಷ್ಮತೆಯನ್ನು ಹೊಂದಿದವರಾಗಲಿ, ಜೀವನ ಕೌಶಲ್ಯಗಳನ್ನು ಅರಿತವರಂತೆ ಸ್ಥೂಲ ನೋಟಕ್ಕಾಗಲಿ ಕಾಣುವುದಿಲ್ಲ. ಬಹಳಷ್ಟು ಶಾಲೆಗಳಿಗೆ ಭೇಟಿ ಕೊಟ್ಟಾಗ ಮಗುವು ಪಠ್ಯದ ವಿಷಯಗಳನ್ನು ಚೆನ್ನಾಗಿ ಕಲಿಯುತ್ತಿದ್ದರೆ ಜಾಣನೆಂದೂ, ಅದೇ ಪಠ್ಯವನ್ನು ಚೆನ್ನಾಗಿ ಕಲಿತೊಪ್ಪಿಸದಿದ್ದರೆ ದಡ್ಡನೆಂದೂ ಪರಿಗಣಿಸಲಾಗುತ್ತಿದೆ.

ಮಕ್ಕಳ ಪುಸ್ತಕದ ಓದುಗಳೆಲ್ಲವೂ ಪಠ್ಯದ ಹಂತದಲ್ಲಿಯೇ ನಿರಾಸಕ್ತಿಗೆ ತಳ್ಳುವಂತೆ ಮಾಡುತ್ತದೆ. ಇದಕ್ಕೆ ಕಾರಣಗಳು ಹಲವು.

1.ಪಠ್ಯದಲ್ಲಿ ಆಯ್ಕೆಗಳಿಲ್ಲ. ಆಸಕ್ತಿಗೆ ಅನುಗುಣವಾಗಿ ಎಂಬ ಮಾತಿಲ್ಲ. ಇಷ್ಟವಿರಲಿ ಇಲ್ಲದಿರಲಿ ಓದಲೇಬೇಕು.

2.ಮಗುವಿನ ಜಾಣತನ ಮತ್ತು ಚುರುಕುತನಗಳು ಮಗುವಿನ ನಿರ್ದೇಶಿತ ಪಠ್ಯದ ಕಲಿಕೆಯ ಮೇಲೆ ನಿರ್ಧರಿಸಲಾಗುತ್ತದೆ.

3.ನಿರ್ದೇಶಿತ ಪಠ್ಯಗಳನ್ನು ಮುಗಿಸುವ ಒತ್ತಡ ಶಿಕ್ಷಕರ ಮೇಲಿರುವುದರಿಂದ ಅವರೂ ಒಂದು ಹಂತದ ಒತ್ತಡವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಕ್ಕಳ ಮೇಲೆ ಹೇರುತ್ತಾರೆ.

4.ಪಠ್ಯ ಪುಸ್ತಕಗಳನ್ನು ಓದುವ ಅನಿವಾರ್ಯತೆ ಮತ್ತು ಸಮಯದ ಕೊರತೆ; ಇವುಗಳಿಂದ ಬೇರೆ ಪುಸ್ತಕಗಳ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅಥವಾ ಪುಸ್ತಕದ ಮೇಲೆಯೇ ಜಿಗುಪ್ಸೆ ಬಂದಿರುತ್ತದೆ.

5.ಪಠ್ಯ ಪುಸ್ತಕಗಳ ಜೊತೆ ಜೊತೆಗೆ ಇತರೇ, ಅಥವಾ ಅವುಗಳಿಗೆ ಪೂರಕವಾಗಿರುವ ಪುಸ್ತಕಗಳನ್ನು ಬಹಳಷ್ಟು ಶಿಕ್ಷಕರು ಸೂಚಿಸುವುದಿಲ್ಲ. ಇನ್ನೂ ಹೇಳುವುದಾದರೆ ಅವರೇ ಓದುವುದಿಲ್ಲ. ಬಹಳಷ್ಟು ಶಿಕ್ಷಕರು ತಾವು ಶಿಕ್ಷಕರಾಗಿ ಕೆಲಸಕ್ಕೆ ತೊಡಗಿದ ಮೇಲೆ ಅನಿವಾರ್ಯವಾಗಿ ಪಠ್ಯಗಳನ್ನು ಓದುವುದನ್ನು ಬಿಟ್ಟರೆ ಬೇರೆ ಪುಸ್ತಕಗಳನ್ನೇ ಓದುವುದಿಲ್ಲ.

6.ಮನೆಯಲ್ಲಿಯೂ ಕೂಡ ಬಹು ಹೆಚ್ಚಿನ ಮಂದಿ ಟಿವಿಗಳ ಮುಂದೆ ಕುಳಿತುಕೊಳ್ಳುವರೇ ಹೊರತು ಪುಸ್ತಕಗಳನ್ನು ಓದುವುದಿಲ್ಲ. ಎಷ್ಟೋ ಮನೆಗಳಲ್ಲಿ ಪುಸ್ತಕಗಳನ್ನೇ ತರುವುದಿಲ್ಲ. ತಂದರೂ ಅದು ಮಕ್ಕಳ ಗಮನಕ್ಕೆ ಬರುವುದಿಲ್ಲ. ತಾವೂ ಓದುವುದಿಲ್ಲ. ಒಂದು ಮನೆಯಲ್ಲಿ ಒಂದು ಪುಸ್ತಕದ ಸಂಗ್ರಹ ಯಾರೋ ಒಬ್ಬಿಬ್ಬರ ಆಸಕ್ತಿಯದ್ದಾಗಿದ್ದು ಅವರ ಆಸ್ತಿಯಾಗಿರುತ್ತದೆಯೇ ಹೊರತು, ಇನ್ನುಳಿದವರಿಗೆ ಅದು ಯಾವ ರೀತಿಯಲ್ಲಿಯೂ ಸಂಬಂಧಪಟ್ಟಿದ್ದಾಗಿರುವುದಿಲ್ಲ. ಹಾಗೆಯೇ ಇನ್ನೂ ಕೆಲವು ಗ್ರಂಥಸ್ವಾಮಿಗಳು ಇತರರ ಅತಿಕ್ರಮ ಪ್ರವೇಶವನ್ನೂ ಕೂಡ ಇಷ್ಟಪಡುವುದಿಲ್ಲ. ಕೆಲವರು ತಾವೇ ಇತರರಿಗೆ ಪುಸ್ತಕಗಳನ್ನು ಸೂಚಿಸುತ್ತಾರೆ. ಇದನ್ನೇ ಓದು ಎಂದು ತಾಕೀತು ಮಾಡುತ್ತಾರೆ. ಅವರು ತಮ್ಮ ಆಸಕ್ತಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳಲೇ ಬಿಡುವುದಿಲ್ಲ.

ಭೌತಿಕವಾಗಿ ಪುಸ್ತಕವನ್ನು ಜನರ ಆಕರ್ಷಣೆಗೆ ತರುವುದೇ ಕಷ್ಟ. ಜನರು ಕೊಂಡರೂ ಅದನ್ನು ಓದುವುದು ಕಷ್ಟ. ಓದಿದರೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಅರ್ಥ ಮಾಡಿಕೊಂಡರೂ ಅರಿವಿನ ಅನುಭವಕ್ಕೆ ತಂದುಕೊಳ್ಳುವುದು ಕಷ್ಟ.

ಒಂದು ಟೀ ಷರ್ಟ್ ಅಥವಾ ಬೇರಾವುದೋ ಬಳಕೆಯ ವಸ್ತುಗಳು ಉತ್ಪಾದನೆಯಾಗುವಂತೆ ಪುಸ್ತಕಗಳು ಉತ್ಪಾದನೆಯಾಗುವುದಿಲ್ಲ. ಕೋಟ್ಯಂತರ ಮಂದಿಯಲ್ಲಿ ಲಕ್ಷಾಂತರ ಮಂದಿ ಪುಸ್ತಕವನ್ನು ಸಮರ್ಥವಾಗಿ ಓದಬಲ್ಲ ವಿದ್ಯಾವಂತರಿರುತ್ತಾರೆ. ಆದರೆ ಸಾವಿರ ಪ್ರತಿಗಳು ಮಾರಾಟವಾಗುವುದು ಬಲು ಕಷ್ಟದ ಕೆಲಸ. ಎಲ್ಲರೂ ಎಲ್ಲಾ ಪುಸ್ತಕಗಳನ್ನು ಕೊಳ್ಳುವುದಿಲ್ಲ, ಕೊಳ್ಳಬೇಕಿಲ್ಲ. ಓದಬೇಕಿಲ್ಲ. ಆದರೆ ವಿಷಯ ಮತ್ತು ಆಸಕ್ತಿ ಭೇದಗಳಿಗನುಸಾರವಾಗಿಯಾದರೂ ಕೆಲವು ಸಾವಿರಗಳೇ ಪುಸ್ತಕಗಳು ಮಾರಾಟವಾಗಬೇಕಾಗಿತ್ತು. ಆದರೆ ಹಾಗೇನೂ ಆಗುತ್ತಿಲ್ಲ. ಕೆಲವು ಕಡೆಗಳಲ್ಲಂತೂ ಪುಸ್ತಕ ಖರೀದಿಯು ತಮ್ಮ ಸೈದ್ಧಾಂತಿಕ ಬದ್ಧತೆ ಮತ್ತು ನೈತಿಕ ಕರ್ತವ್ಯವೆಂಬಂತೆ ಆಗುತ್ತಿರುತ್ತದೆ. ಆ ಕಾರಣದಿಂದಾದರೂ ಪುಸ್ತಕಗಳು ಮಾರಾಟವಾಗುತ್ತವೆ. ಆದರೆ ನಿಜವಾದ ಓದಿನ ಆಸಕ್ತಿಯಿಂದ ಪುಸ್ತಕಗಳು ಬಿಕರಿಯಾಗುವುದು ಬಹಳ ಕಡಿಮೆ ಇದೆ. ಅದರಲ್ಲೂ ಕನ್ನಡದಲ್ಲಿ ಬಹಳ ಕಡಿಮೆ ಇದೆ.

ಮಕ್ಕಳಲ್ಲಿ ಗಮನಿಸಿದಾಗ ಒಂದು ಹಂತಕ್ಕೆ ಇಂಗ್ಲಿಷ್ ಭಾಷೆಯ ಓದುಗರು ಸಿಗುತ್ತಾರೆ. ಆದರೆ ಕನ್ನಡ ಭಾಷೆಯ ಪಠ್ಯೇತರ ಪುಸ್ತಕಗಳನ್ನು ಓದುವ ಮಕ್ಕಳು ಇಲ್ಲವೇ ಇಲ್ಲ ಎನ್ನುವಷ್ಟು ತೀರಾ ಕಡಿಮೆ. ಇದಕ್ಕೆ ನೇರವಾಗಿ ನಾನು ಎಂದಿನಂತೆ ಆರೋಪಿಸುವುದು ಪೋಷಕರು ಮತ್ತು ಶಿಕ್ಷಕರನ್ನೇ. ಪುಸ್ತಕಗಳು ಮಕ್ಕಳಿಗೆ ಎಟಕುವುವಂತೆ ಮಾಡುವುದು, ದೊರಕಿದ ಪುಸ್ತಕಗಳನ್ನು ಓದುವ ಕ್ರಿಯೆಗೆ ತೊಡಗಿಸುವುದು, ಓದುವ ಕ್ರಿಯೆ ವಿಚಾರದ ಗ್ರಹಿಕೆಯ ಪ್ರಕ್ರಿಯೆಗೆ ಒಡ್ಡುವಂತೆ ಮಾಡುವುದು, ಓದುವುದರ ಮೂಲಕ ಭಾವನೆಗಳಿಗೆ ತೆರೆದುಕೊಳ್ಳುವ ಮಟ್ಟಿಗೆ ತಾಧ್ಯಾತ್ಮತೆ ಹೊಂದುವಂತೆ ತರಬೇತಿ ನೀಡುವುದು; ಇವುಗಳನ್ನೆಲ್ಲಾ ಉದ್ದೇಶಿತ ಯೋಜನೆಯಂತೆ ಮಾಡದಿರುವುದೇ ಪೋಷಕರ ಮತ್ತು ಶಿಕ್ಷಕರ ವೈಫಲ್ಯ.

ಪೋಷಕರು ಮತ್ತು ಶಿಕ್ಷಕರೇನು ಮಾಡಬೇಕು?

ಪೋಷಕರು ಮತ್ತು ಶಿಕ್ಷಕರು ಮೊದಲು ತಾವು ಓದಿನ ಮಹತ್ವ ಮತ್ತು ಪುಸ್ತಕಗಳನ್ನು ಸಂಗ್ರಹಿಸುವುದರ ಬಗ್ಗೆ ಆಸಕ್ತಿ ವಹಿಸಬೇಕು.

1.ಮಕ್ಕಳಿಗೆ ಮಾದರಿಯಾಗಿ ಹಿರಿಯರು ತಮ್ಮ ಆಯ್ಕೆಯ, ಅಭಿರುಚಿಯ ಪುಸ್ತಕಗಳನ್ನು ಕೊಳ್ಳುವುದು, ಓದುವುದು ಮತ್ತು ತಮ್ಮ ಓದಿನ ಅನುಭವವನ್ನು ಕುಟುಂಬ ಮತ್ತು ಸ್ನೇಹಿತರೊಡನೆ ಮಕ್ಕಳ ಸಮ್ಮುಖದಲ್ಲಿ ಹಂಚಿಕೊಳ್ಳುವುದು.

2.ಮಕ್ಕಳ ಆಸಕ್ತಿಯನ್ನು ಗುರುತಿಸಿ, ಅವರ ವಯಸ್ಸು ಮತ್ತು ಓದಿನ ಸಾಮರ್ಥ್ಯಕ್ಕೆ ತಕ್ಕಂತೆ ಪುಸ್ತಕಗಳನ್ನು ಕೊಡಿಸುವುದು ಮತ್ತು ಅವುಗಳನ್ನು ಓದುವಂತೆ ಪ್ರೋತ್ಸಾಹಿಸುವುದು.

3.ಅವರಿಗಾಗಿ ಕೊಡಿಸಿರುವ ಪುಸ್ತಕಗಳನ್ನು ಓದಿದ ಮೇಲೆ ಅದರ ಬಗ್ಗೆ ಕೇಳಿ ತಿಳಿಯುವ ಅಥವಾ ಅದರ ಕುರಿತು ಇತರರೊಡನೆ ಹಂಚಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.

4.ಪ್ರತಿದಿನವೂ ಪಠ್ಯೇತರ ಓದಿನ ಬಗ್ಗೆ ಕೊಂಚ ನಿಗಾವಹಿಸುವುದು.

5.ಪ್ರಾರಂಭಕ್ಕೆ ಅಮರ ಚಿತ್ರ ಕಥೆಗಳು ಅಥವಾ ಇತರ ಕಾಮಿಕ್ಸ್ ಗಳನ್ನು ಒದಗಿಸಿ ಚಿತ್ರಗಳ ಸಮೇತ ಓದಿನ ಅಭಿರುಚಿಯನ್ನು ಬೆಳೆಸುವುದು.

6.ತಾವು ಓದಿರುವುದರ ಬಗ್ಗೆ ಅಭಿಪ್ರಾಯಗಳನ್ನು ಮೂಡಿಸುವ, ಅದನ್ನು ಗುರುತಿಸುವ ಕೆಲಸಗಳನ್ನು ಮಾಡಬೇಕು.

7.ಓದಿರುವುದನ್ನು ಸಂಕ್ಷಿಪ್ತವಾಗಿ ಬರೆಯುವ ಅಥವಾ ಇಷ್ಟವಾದ ಅಂಶಗಳನ್ನು ಗುರುತುಹಾಕಿ ಅವುಗಳನ್ನು ಪ್ರತ್ಯೇಕವಾಗಿ ದಾಖಲಿಸುವ ಕೆಲಸ ಮಾಡಿಸಬೇಕು.

8.ಶಿಕ್ಷಕರು ಪಠ್ಯದ ವಿಷಯಗಳಿಗೆ ಸಂಬಂಧಪಟ್ಟಂತಹ ಪುಸ್ತಕಗಳನ್ನು ಗುರುತಿಸಿ, ಪಟ್ಟಿ ಮಾಡಿ, ಮಕ್ಕಳಿಗೆ ಸೂಚಿಸಬೇಕು.

9.ಶಾಲೆಯ ಗ್ರಂಥಾಲಯಗಳಲ್ಲಿ ಅಂತಹ ಪಠ್ಯೇತರ ಪುಸ್ತಕಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ವಿದ್ಯಾರ್ಥಿಗಳ ತಂಡಗಳಿಗೆ ಪ್ರಾಜೆಕ್ಟ್ ರೀತಿ ಓದುವುದಕ್ಕೆ ಪ್ರೋತ್ಸಾಹಿಸುವುದು.

10.ಪಠ್ಯದ ವಿಷಯಗಳು, ಪ್ರಚಲಿತ ವಿದ್ಯಮಾನಗಳನ್ನೆಲ್ಲಾ ದಿನ ಪತ್ರಿಕೆಗಳಲ್ಲಿ, ವೃತ್ತ ಪತ್ರಿಕೆಗಳಲ್ಲಿ ಮತ್ತು ಇತರ ಪುಸ್ತಕಗಳಲ್ಲಿ ಗುರುತಿಸುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು.

ಪುಸ್ತಕದ ಓದಿನ ಬಗ್ಗೆ ಹಲವು ಪ್ರಶ್ನೆಗಳು

ವಿಶ್ವ ಪುಸ್ತಕದಿನದಂದು ಕಾರ್ಯಕ್ರಮವೊಂದರ ಭಾಗವಾಗಿದ್ದಾಗ ಮಕ್ಕಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು.

1. ನಾವು ಪುಸ್ತಕಗಳನ್ನು ಹೇಗೆ ಆಯ್ಕೆ ಮಾಡಿ ಓದಬೇಕು?

ಪುಸ್ತಕವನ್ನು ಆಯ್ಕೆ ಮಾಡುವುದಕ್ಕಿಂತ ಮುಖ್ಯವಾಗಿ ಓದುವ ಅಭ್ಯಾಸವನ್ನು ಮೊದಲು ಬೆಳೆಸಿಕೊಳ್ಳಬೇಕು. ಅಕ್ಷರಗಳು ಮತ್ತು ಕಾಗುಣಿತಗಳು ಕಲಿತಾದ ಮೇಲೆ ಪಠ್ಯದ ಹೊರತಾಗಿ ಯಾವುದೇ ವಿಷಯ ಸಿಕ್ಕರೂ ಓದುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಅದು ಯಾವುದೋ ಜಾಹೀರಾತಿನ ಕರಪತ್ರವಾಗಿರಬಹುದು, ಪತ್ರಿಕೆಯ ಹರಿದ ತುಂಡಾಗಿರಬಹುದು, ಯಾವುದೋ ಫಲಕದ ಮೇಲಿರುವ ನಿರ್ದೇಶನ ಅಥವಾ ಮಾಹಿತಿಗಳಾಗಿರಬಹುದು. ಮೊದಲು ಓದುವುದನ್ನು ರೂಢಿಸಿಕೊಂಡಮೇಲೆ ಪುಸ್ತಕಗಳ ಕಡೆಗೆ ಗಮನ ಹರಿಯುತ್ತದೆ.

2. ಒಳ್ಳೆಯ ಪುಸ್ತಕಗಳನ್ನು ಆಯ್ಕೆ ಮಾಡುವುದು ಹೇಗೆ?

ಒಳ್ಳೆಯ ಮತ್ತು ಕೆಟ್ಟ ಪುಸ್ತಕಗಳೆನ್ನುವುದು ಅವರ ಒಲವು ನಿಲುವುಗಳ ಮೇಲೆ ಆಧರಿತವಾಗುತ್ತದೆ. ಯಾವುದು ತಮಗೆ ಅಗತ್ಯ ಮತ್ತು ಅನಗತ್ಯ ಎಂಬುದನ್ನು ಗುರುತಿಸಿಕೊಳ್ಳಬೇಕು. ಪ್ರತಿಯೊಬ್ಬ ಮಗುವಿಗೂ ತನ್ನದೇ ಆದಂತಹ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆಗಳಿರುತ್ತವೆ. ಅದಕ್ಕೆ ತಕ್ಕಂತೆ ಮಗುವಿನ ಅಗತ್ಯ, ಅಭಿರುಚಿ ಮತ್ತು ಆಸಕ್ತಿಗಳೂ ರೂಪುಗೊಳ್ಳುತ್ತವೆ. ಆದ್ದರಿಂದ ಪುಸ್ತಕಗಳ ಆಯ್ಕೆಯನ್ನು ಇದು ಒಳ್ಳೆಯದು, ಇದು ಬೇಕಾದದ್ದು ಎಂದು ಸಾಮಾನ್ಯೀಕರಿಸಿ ಹೇಳುವುದು ಕಷ್ಟ. ಬಹುಶಃ ಅದು ಸರಿ ಹೋಗುವುದೂ ಇಲ್ಲ.

3. ಓದುವುದರಿಂದ ಏನಾಗುತ್ತದೆ?

ಓದುವುದು ಎಂಬ ಕ್ರಿಯೆಯು ಓದುವಿಕೆಯನ್ನು ದಕ್ಕಿಸಿಕೊಳ್ಳುವುದರ ಪ್ರಕ್ರಿಯೆಗೆ ಒಯ್ಯುತ್ತದೆ. ಇದು ತಮಗೆ ತಿಳಿದಿರುವ ವಿಚಾರಗಳ ಆಳ ಎತ್ತರಗಳನ್ನು ಪರಿಚಯಿಸುತ್ತದೆ. ನಮ್ಮ ವಿಚಾರ ಮತ್ತು ತಿಳುವಳಿಕೆಯನ್ನು ಗಟ್ಟಿಗೊಳಿಸುವುದೇ ಅಲ್ಲದೇ ಇತರ ಭಿನ್ನ ವಿಚಾರ ಮತ್ತು ಅಭಿಪ್ರಾಯಗಳನ್ನು ಪರಿಚಯಿಸುತ್ತದೆ. ಎಷ್ಟೋ ಬಾರಿ ಯಾವುದೋ ಒಂದು ಮೂಲದಿಂದ ಮಾತ್ರವೇ ವಿಷಯವನ್ನು ತಿಳಿಯುವುದಿದ್ದು, ಅದನ್ನೇ ಸರಿ ಮತ್ತು ಸತ್ಯವೆಂದು ತಿಳಿಯಲಾಗುತ್ತದೆ. ಸ್ವಂತವಾಗಿ ಓದುವ ಮತ್ತು ಓದಿಗಾಗಿ ಹುಡುಕಾಡುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ವಿಷಯಗಳ ಸತ್ಯಾಸತ್ಯತೆಗಳನ್ನು ತಿಳಿಯಬಹುದಾಗಿರುತ್ತದೆ. ಇತರರ ಅಭಿಪ್ರಾಯಗಳನ್ನು ತಿಳಿಯಬಹುದಾಗಿರುತ್ತದೆ. ತಮ್ಮದೂ ಆದಂತಹ ಸ್ವತಂತ್ರ ಅಭಿಪ್ರಾಯವನ್ನು ರೂಪಿಸಬಹುದಾಗಿರುತ್ತದೆ. ಮಕ್ಕಳು ಪುಸ್ತಕ ಎಂಬ ಭಿನ್ನಭಿನ್ನ ಲೋಕಗಳ ದ್ವಾರ ತೆಗೆದು ಅವುಗಳಲ್ಲಿ ಪ್ರವೇಶಿಸಿ, ಓದುವ ಮೂಲಕ ಸಂಚಾರ ಮಾಡಿ, ವಿಷಯಗಳನ್ನು ಕಂಡು, ಕೇಳಿ, ಅರಿವನ್ನು ಪಡೆಯುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ನೇರವಾಗಿ ಪ್ರಭಾವಿಸುತ್ತವೆ. ಮಕ್ಕಳಲ್ಲಿ ಬೆಳೆಯದ ಓದಿನ ಅಭಿರುಚಿ ಮುಂದೆಯೂ ದಕ್ಕುವುದು ತೀರಾ ಕಷ್ಟಸಾಧ್ಯ. ಈಗಲೂ ನಾವು ನೋಡುತ್ತಿರುತ್ತೇವೆ, ಬರಿಯ ಸುದ್ದಿಯ ಜಾಡನ್ನು ಹಿಡಿದು ಹಿಂದೆ ಮುಂದೆ ಏನೂ ನೋಡದೇ ಬರಿದೇ ಬಡಬಡಾಯಿಸುವ ಹಿರಿಯರನ್ನು. ಸುದ್ದಿಯನ್ನು ಸಮರ್ಥಿಸುವ ಅಥವಾ ವಿರೋಧಿಸುವ ಮಂದಿಯು ಇನ್ನೂಕೊಂಚ ಆಳಕ್ಕಿಳಿದು ಅವುಗಳ ಮೂಲಗಳನ್ನು ಅರಿಯುವಲ್ಲಿ ಕೊಂಚ ಆಸಕ್ತಿ ಮತ್ತು ಶ್ರಮ ವಹಿಸಿದರೆ ಸಮಾಜದಲ್ಲಿ ಮತ್ತು ವ್ಯಕ್ತಿಗಳಲ್ಲಿ ಎಷ್ಟೋ ಅನವಶ್ಯಕ ಸಂಘರ್ಷಗಳ ಪ್ರಮಾಣವನ್ನು ತಗ್ಗಿಸಬಹುದಿತ್ತು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News