ಈ ಜಾತಕನಿಗೆ ವಿದ್ಯಾಯೋಗವಿಲ್ಲವು

Update: 2018-04-29 12:51 GMT

ಭಾಗ 2

ಭಾರತದಲ್ಲಿರುವ ಅನೇಕ ಸಮುದಾಯಗಳು ಕಾವ್ಯಗಳನ್ನು ತಮಗೆ ಮತ್ತು ತಮ್ಮ ಸಮುದಾಯದ ಸದಸ್ಯರ ಅಗತ್ಯಗಳಿಗೆ ಅನುಗುಣವಾದ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದ್ದಾರೆ. ಬಡಗರು, ಬೈಗಾಗಳು, ಭಿಲ್ಲರು, ಚಕ್ಮಾಗಳು, ಚೆಂಚುಗಳು, ಗಡ್ಡಿಗಳು, ಗಾರೋಗಳು, ಗೊಂಡರು, ಗುಜ್ಜರರು, ಜರ್ವಾಗಳು, ಖಾಸೀಗಳು, ಕೋಲ್, ಕುಕಿ, ಲೆಪಚಾ, ನಾಗಾ, ಲೆಪಚಾ ಮೊಪಚಾ ಮೊದಲಾದ ನೂರಾರು ಬುಡಕಟ್ಟುಗಳು ತಮ್ಮದೇ ಮಹಾಭಾರತಗಳನ್ನು ಹೊಂದಿವೆ.

ಇನ್ನೊಂದು ಅಂಶವನ್ನು ನಾನು ನಿಮ್ಮ ಗಮನಕ್ಕೆ ತರಬೇಕು. ಭಾರತೀಯ ಸಮಾಜವು ಮೇಲು-ಕೀಳಿನ ತಾರತಮ್ಯದ ಮೇಲೆ ನಿಂತಿದೆ. ಇಲ್ಲಿ ಮೇಲಿನವರಿಗೆ ಅಕ್ಷರ ಸಿಕ್ಕಿದೆ. ಹಾಗಾಗಿ ಅವರೆಲ್ಲ ಬರೆದರು. ಆದರೆ ಕೆಳಗಿನ ಹಂತದ ಜನರಿಗೆ ವಿದ್ಯೆ ದೊರಕಲೇ ಇಲ್ಲ. ಹಾಗಾಗಿ ಇವರೆಲ್ಲ ಬಾಯಿ ಮಾತಿನಲ್ಲಿಯೇ ತಮ್ಮ ಸಾಂಸ್ಕೃತಿಕ ವಿವರಗಳನ್ನು ಉಳಿಸಿಕೊಂಡು ಬಂದರು. ಹೀಗೆ ಬಾಯಿ ಮಾತಿನಲ್ಲಿ ಉಳಿದುಕೊಂಡು ಬಂದದ್ದೇ ಜಾನಪದ. ಶ್ರೇಣೀಕೃತ ಸಮಾಜದ ಕೆಳ ಹಂತದಲ್ಲಿರುವ ಜನ ವರ್ಗಗಳ ಪರಂಪರೆ, ಆಧುನಿಕತೆ ಮತ್ತು ಭವಿಷ್ಯಗಳೆಲ್ಲ ಬಹುತೇಕವಾಗಿ ಉಳಿದಿರುವುದು ಇಂಥ ಮೌಖಿಕ ರೂಪಗಳಲ್ಲಿ. ಸಾವಿರಾರು ಸಾಲುಗಳಿರುವ, ಅತ್ಯಂತ ಮಹತ್ವದ ತುಳು ಜನಪದ ಕಾವ್ಯ ಸಿರಿಯು ಬಾಯಿಂದ ಬಾಯಿಗೆ ಹರಿದು ಬಂದು ಇಂದಿಗೂ ಉಳಿದಿದೆ. ದಲಿತರ ಯಾವುದೇ ಆಚರಣೆಗಳನ್ನು ದಾಖಲಿಸುವ ಯಾವುದೇ ಲಿಖಿತ ಪಠ್ಯಗಳಿಲ್ಲ. ಆದರೆ ದಲಿತರು ಪರಂಪರೆಯಿಂದ ದತ್ತವಾದ ಜ್ಞಾನವನ್ನು ಆಧರಿಸಿ ತಮ್ಮ ಆಚರಣೆಗಳನ್ನು ನಡೆಸಿಕೊಂಡು ಬದುಕಿದ್ದಾರೆ. ದಲಿತರಲ್ಲಿ ಅವರದೇ ಆದ ರಾಮಾಯಣವೂ ಇದೆ. ನಾನು ಬಹಳ ಹಿಂದೆ ಅಂಥದ್ದೊಂದು ತುಳು ರಾಮಾಯಣವನ್ನು ಸಂಗ್ರಹ ಮಾಡಿದ್ದೆ. ಕಾಗೆ ಹೊಡೆದವರಿಗೆ ಮಗಳು ಎಂದು ಅದರ ಹೆಸರು. ಕರಾವಳಿಯಲ್ಲಿ ಜನಪ್ರಿಯವಾಗಿರುವ ಸಾವಿರಾರು ಭೂತಗಳ ಆರಾಧನೆಯು ಮೌಖಿಕ ನಿರೂಪಣೆಗಳ ಮೂಲಕವೇ ನಡೆಯುತ್ತದೆ. ಆದರೆ ನಮ್ಮ ದೌರ್ಭಾಗ್ಯ ಎಂದರೆ ಮೌಖಿಕ ನಿರೂಪಣೆಗಳನ್ನು ಇನ್ನು ಕೂಡಾ ನಾವು ಭಾರತೀಯ ಸಂಸ್ಕೃತಿಯ ಮುಖ್ಯಭಾಗವೆಂದು ಪರಿಗಣಿಸದಿರುವುದು. ಕಾರಣ ಸುಮಾರು ಶೇಕಡಾ 90 ರಷ್ಟು ಜನರ ಸಂಸ್ಕೃತಿಯು ಇಂದಿಗೂ ಉಪೇಕ್ಷೆಗೆ ಗುರಿಯಾಗುತ್ತಿದೆ. ಭಾರತೀಯ ಜಾನಪದವನ್ನು ಲಿಖಿತ ನಿರೂಪಣೆಗಳ ಜೊತೆಗೆ ಸಮಸ್ಥಾನದಲ್ಲಿ ನಿಲ್ಲಿಸಲಾಗಿಲ್ಲ. ನಮ್ಮ ಮಾನವಿಕಗಳಲ್ಲಿ, ವಿಚಾರಸಂಕಿರಣಗಳಲ್ಲಿ, ಬೌದ್ಧಿಕ ಚರ್ಚೆಗಳಲ್ಲಿ ಮೌಖಿಕ ನಿರೂಪಣೆಗಳಿಗೆ ಅಂಥ ಮನ್ನಣೆ ದೊರಕಿಲ್ಲ. ಕಾರಣ ಮೌಖಿಕ ನಿರೂಪಣೆಗಳು ಸಾಮಾನ್ಯ ಜನರ ಜ್ಞಾನವಾಗಿದ್ದು ಅದಕ್ಕೆ ಅಂಥ ಮನ್ನಣೆ ನೀಡಬೇಕಾಗಿಲ್ಲ ಎಂಬ ಪಾರಂಪರಿಕ ನಿಲುವು. ಇದು ಬಹಳ ಅಪಾಯಕಾರಿಯಾದ ಧೋರಣೆ. ಹೀಗಾಗಿ ನಾವು ನಮ್ಮ ಪೂರ್ವಾಗ್ರಹಗಳನ್ನು ಬಿಟ್ಟು ಮೌಖಿಕ ಪರಂಪರೆಯ ನಿರೂಪಣೆಗಳಿಗೆ ಇನ್ನಾದರೂ ಗಂಭೀರವಾಗಿ ಕಿವಿಕೊಡಬೇಕಾಗಿದೆ.

ಭಾರತದಲ್ಲಿ ಬೇಕಾದಷ್ಟು ನಮೂನೆಯ ನಿರೂಪಣೆಗಳಿವೆ. ಇಲ್ಲಿಯ ಸಾವಿರಾರು ಭಾಷೆಗಳು, ನೂರಾರು ಸಮು ದಾಯಗಳು, ವಿಭಿನ್ನ ಆಚರಣೆಗಳು, ವಿಸ್ತಾರವಾದ ಭೌಗೋಳಿಕತೆ ಇತ್ಯಾದಿಗಳೆಲ್ಲ ಭಾರತ ಶಕ್ತಿ.

ಈ ಹಂತದಲ್ಲಿ ನೀವೆಲ್ಲ ಕೆಳಗಿನ ನಾಲ್ಕು ಅಂಶಗಳನ್ನು ಗಂಭೀರವಾಗಿ ಗಮನಿಸಬೇಕು.

1. ಬೇರೆ ಬೇರೆ ಸಮುದಾಯಗಳು ಸೃಜನಶೀಲ ಪ್ರಕ್ರಿಯೆಗಳು

2. ಪ್ರಾದೇಶಿಕ ಪ್ರಭಾವಗಳು

3. ಕಾಲದ ಅಗತ್ಯಗಳು ಮತ್ತು

4.ನಿರೂಪಕನ ಸೃಜನಶೀಲ ಪ್ರಕ್ರಿಯೆ.

ಭಾರತದಲ್ಲಿರುವ ಅನೇಕ ಸಮುದಾಯಗಳು ಕಾವ್ಯಗಳನ್ನು ತಮಗೆ ಮತ್ತು ತಮ್ಮ ಸಮುದಾಯದ ಸದಸ್ಯರ ಅಗತ್ಯಗಳಿಗೆ ಅನುಗುಣವಾದ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದ್ದಾರೆ. ಬಡಗರು, ಬೈಗಾಗಳು, ಭಿಲ್ಲರು, ಚಕ್ಮಾಗಳು, ಚೆಂಚುಗಳು, ಗಡ್ಡಿಗಳು, ಗಾರೋಗಳು, ಗೊಂಡರು, ಗುಜ್ಜರರು, ಜರ್ವಾಗಳು, ಖಾಸೀಗಳು, ಕೋಲ್, ಕುಕಿ, ಲೆಪಚಾ, ನಾಗಾ, ಲೆಪಚಾ ಮೊಪಚಾ ಮೊದಲಾದ ನೂರಾರು ಬುಡಕಟ್ಟುಗಳು ತಮ್ಮದೇ ಮಹಾಭಾರತಗಳನ್ನು ಹೊಂದಿವೆ. ಉದಾಹರಣೆಗೆ ಮಧ್ಯಪ್ರದೇಶದ ಗೊಂಡಾ ಸಮುದಾಯವು ಭೀಮ ಕೇಂದ್ರಿತ ಮಹಾಭಾರತವನ್ನು ಕಟ್ಟಿಕೊಂಡರೆ ಹಿಮಾಚಲ ಪ್ರದೇಶದ ಗಡ್ಡಿ ಸಮುದಾಯವು ಹಿಡಿಂಬಿ ಕೇಂದ್ರಿತ ಪಠ್ಯವನ್ನು ರಚಿಸಿಕೊಂಡಿದೆ. ಮಧ್ಯಭಾರತದ ಮಹಾಭಾರತ ಕಥನಗಳಲ್ಲಿ ಭೀಮನೇ ನಾಯಕ. ಕೊಂಡ ಬುಡಕಟ್ಟಿನ ಜನರಲ್ಲಿ ಬಹಳ ಪ್ರಸಿದ್ಧವಾಗಿರುವ ಭೀಮ ಸಿದಿ ಎಂಬ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹಾರಕ. ಭೀಮನು ಅಲ್ಲಿ ಮಳೆ ತರುವ ದೈವವೂ ಆಗಿದ್ದಾನೆ. ಬಿಂಜಾಲ್ ಬುಡಕಟ್ಟಿನವರಿಗೆ ಕೀಚಕನೆಂದರೆ ಇಷ್ಟ. ಈಗಿನ ಉತ್ತರಾ ಖಂಡದಾದ್ಯಂತ ಇರುವ ಗಡ್ಡಿ ಬುಡಕಟ್ಟಿನ ಜನರಿಗೆ ಜರಾಸಂಧನೇ ದೈವ. ಇಂಥ ನೂರಾರು ವಿಷಯಗಳ ಕಡೆಗೆ ನಿಮ್ಮ ಗಮನ ಹರಿಯಬೇಕಾದ್ದು ಬಹಳ ಅಗತ್ಯ.

ನನ್ನ ಊರಾದ ಪಂಜದ ಸಮೀಪದ ಎಡಮಂಗಲ ಎಂಬಲ್ಲಿ ನಾಕೂರುಗಯ ಎಂಬ ಸ್ಥಳವೊಂದಿದೆ. ಅಲ್ಲಿ ಜನಪ್ರಿಯವಾಗಿರುವ ಒಂದು ಕತೆ ಕೇಳಿದ್ದೀರಾ?

ಬಹಳ ಹಿಂದೆ ನಾಕೂರಿನ ಬಳಿ ದನ ಕಾಯುವ ಹುಡುಗನೊಬ್ಬನಿದ್ದ. ದನಗಳನ್ನು ಚೆನ್ನಾಗಿ ಮೇಯಿಸಿ ಸಾಯಂಕಾಲ ಹಟ್ಟಿಗೆ ಹೊಡೆದುಕೊಂಡು ಬರುವುದು ಅವನ ದಿನನಿತ್ಯದ ಕೆಲಸ. ಒಂದು ದಿನ ದನಗಳ ಯಜಮಾನ ಕಾವಲಿನ ಹುಡುಗನನ್ನು ಗದರಿಸಿದ -ಕಪಿಲೆ ದನದ ಕೆಚ್ಚಲು ಬರಿದಾಗಿದೆ. ಕಾಡಿನಲ್ಲಿ ದನಗಳನ್ನು ಮೇಯಿಸುವುದು ಬಿಟ್ಟು ಕೆಚ್ಚಲಿನಿಂದ ಹಾಲು ಕುಡಿಯಲು ಕಲಿತಿದ್ದೀಯಾ.....? ಹುಡುಗ ತಾನು ಹಾಗೆ ಮಾಡಿಲ್ಲವೆಂದು ಪ್ರಮಾಣ ಮಾಡಿ ಹೇಳಿದ. ಘಟನೆ ಮರುದಿನವೂ ಪುನರಾವರ್ತನೆಗೊಂಡಿತು. ಈ ಸಲ ಹುಡುಗ ಒಂದೆರಡು ಪೆಟ್ಟುಗಳನ್ನೂ ತಿನ್ನಬೇಕಾಯಿತು. ಪರಿಣಾಮವಾಗಿ ಮೂರನೇ ದಿವಸ ಹುಡುಗ ಕಪಿಲೆ ದನದ ಬೆನ್ನು ಹಿಡಿದ. ಕಪಿಲೆ ಕಾಡೊಳಕ್ಕೆ ನುಗ್ಗಿ ಕ್ಷಣ ಮಾತ್ರದಲ್ಲಿ ಮರೆಯಾಯಿತು. ಹುಡುಗ ಅನುಸರಿಸಿದ. ಆತ ನೋಡುತ್ತಿರುವಂತೆ ಕಪಿಲೆ ಕಾಡೊಳಗೆ ಪೊದರಿನಲ್ಲಿ ಅವಿತಿದ್ದ ಹುತ್ತವೊಂದಕ್ಕೆ ಹಾಲೂಡಿಸತೊಡಗಿತು. ಛಂಗನೆ ನೆಗೆದ ಹುಡುಗ ಕಪಿಲೆಯ ಬಾಲ ಹಿಡಿದ. ಈಗ ನೆಗೆದೋಡಿದ ಕಪಿಲೆಯು ನೇರವಾಗಿ ನಾಕೂರು ಹೊಳೆಗೆ ಹಾರಿತು. ಜೊತೆಗೆ ಹುಡುಗನನ್ನೂ ಕೊಂಡೊಯ್ದಿತು. ಹಾಗೆ ಕಪಿಲೆ ದನವು ಹುಡುಗನೊಡನೆ ಮರೆಯಾದ ಜಾಗದಲ್ಲಿ ಲಿಂಗರೂಪೀ ದೈವವೊಂದಿತ್ತು. ಆ ದೈವಕ್ಕೆ ಒಂದು ಚಾವಡಿ (ಗುಡಿ)ಯೂ ಇತ್ತು. ಈಗ ಅದು ನದಿಯ ನಡುವೆ ಮುಳುಗಿ ಹೋಗಿರುವುದರಿಂದ ಬೇರೆಯವರಿಗೆ ಕಾಣಿಸುವುದಿಲ್ಲ. ಆದರೆ ನದಿಯಲ್ಲಿ ನೀರು ಕಡಿಮೆ ಆದಾಗ, ಮಡಿವಂತರಿಗೆ ದೇವಳದ ಕಳಶ ಕಾಣಿಸುವುದುಂಟು.

ಈ ಐತಿಹ್ಯವನ್ನು ನಿರೂಪಿಸುವ ನಿರೂಪಕನು ನಾಕೂರು ಗಯವನ್ನು ಬೆರಳಿಂದ ತೋರಿಸಿ, ಲಿಂಗ-ಕಳಶ ಇರುವ ಸ್ಥಳವನ್ನು ನಿಸ್ಸಂಶಯವಾಗಿ ತೋರಿಸುತ್ತಾನೆ. ನಾವೂ ನೋಡುತ್ತೇವೆ. ಕಪಿಲೆ, ಕೆಚ್ಚಲು, ಹಾಲು, ಹುಡುಗ, ಲಿಂಗ, ನೀರು, ಕಳಶಗಳ ಸುಂದರ ಕಟ್ಟೋಣದಲ್ಲಿ ತಲ್ಲೀನರಾಗುತ್ತೇವೆ. ನಮ್ಮ ಎಂದಿನ ಬೌದ್ಧಿಕ ವ್ಯಾಖ್ಯಾನದ ಪರಿಧಿಯೊಳಗೆ ಇವಕ್ಕೆಲ್ಲ ಹೊಸ ಅರ್ಥ ಹುಡುಕುವ ಚಟುವಟಿಕೆಯಲ್ಲಿ ಮಗ್ನರಾಗಿ ಬಿಡುತ್ತೇವೆ. ಇಂಥ ಆಕರ್ಷಣೆಯಿಂದ ತಪ್ಪಿಸಿಕೊಂಡು ಈ ಐತಿಹ್ಯದ ಬಹುಮುಖತೆಯ ಕಡೆಗೆ ನಾವು ಸಾಗಬೇಕು. ಅದೇನೂ ಸುಲಭದ ಕೆಲಸವಲ್ಲ. ಹಾವೇರಿ, ಸಿದ್ಧಾಪುರದ ಬಿಳಿನೆಲೆ ಸಕಲೇಶಪುರ, ಸೋಮವಾರಪೇಟೆ ಕಿತ್ತೂರು, ಮೊದಲಾದೆಡೆಗಳಲ್ಲಿ ಈ ಕತೆ ಬೇರೆ ಬೇರೆ ರೂಪದಲ್ಲಿ ದೊರೆಯುತ್ತದೆ. ನಾವು ಈಗ ಅಂಥ ಅನೇಕ ಕತೆಗಳಿಗೆ ಕಿವಿಗೊಡಬೇಕು. ಅದರಿಂದ ನಮ್ಮ ಸಮಾಜದ ಕುರಿತು ನಮ್ಮ ಅರಿವು ಹೆಚ್ಚುತ್ತದೆ.

ಹೀಗೆ ನೀವು ನಿಮ್ಮದೇ ಕತೆಗಳಿಗೆ ಕಿವಿಗೊಡುತ್ತಾ ಬೆಳೆಯಿರಿ. ಅದು ನಿಮ್ಮ ಶಕ್ತಿ. ಈ ಶಕ್ತಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News