ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕನ್ನಡದ ಫಾಂಟ್ ಮತ್ತು ಎನ್ ಕೋಡಿಂಗ್ ಪರಿವರ್ತಕಗಳು

Update: 2018-04-29 13:27 GMT

ಪತ್ರಿಕೆಯಲ್ಲಿ ಮುದ್ರಿಸಲು ‘ನುಡಿ ಫಾಂಟ್ ಬಳಸಿ ಟೈಪ್ ಮಾಡಲಾದ ಚಿಕ್ಕಲೇಖನವನ್ನು ಯಥಾವತ್ತು ‘ಫೇಸ್‌ಬುಕ್‌ನಲ್ಲಿ ಕಾಪಿ-ಪೇಸ್ಟ್ ಮಾಡಿದ ಮಿತ್ರರೊಬ್ಬರು ‘ವಿಚಿತ್ರಲಿಪಿ (ಜಂಕ್-ಕ್ಯಾರೆಕ್ಟರ್) ಸಮಸ್ಯೆ ಎದುರಿಸಿದರು. ಲೇಖನವನ್ನು ಮತ್ತೊಮ್ಮೆ ಟೈಪ್‌ಮಾಡುವುದರ ಹೊರತಾಗಿ ಉಪಾಯವೇನಾದರೂ ಇದೆಯೇ ಎಂದು ದೂರವಾಣಿಯಲ್ಲಿ ವಿಚಾರಿಸಿದರು. ದೂರವಾಣಿಯಲ್ಲಿ ಪರಿಹಾರ ಒದಗಿಸುವ ಸಂಕಷ್ಟವನ್ನು ತಪ್ಪಿಸಿಕೊಳ್ಳಲು, ಲೇಖನವನ್ನು ಇ-ಮೇಯ್ಲಿ ಮೂಲಕ ಪಡೆದು, ಲೇಖನದ ಪಠ್ಯವನ್ನು ಯೂನಿಕೋಡ್ ಶಿಷ್ಟತೆಗೆ ಪರಿವರ್ತಿಸಿ (ಟ್ರಾನ್ಸ್‌ಕೋಡ್ ಮಾಡಿ) ವಾಪಸ್ ಕಳುಹಿಸಲಾಯಿತು. ಆ ಯೂನಿಕೋಡ್ ಪಠ್ಯವನ್ನು ಯಾವುದೇ ಸಮಸ್ಯೆಯಿಲ್ಲದೆ ನೇರವಾಗಿ ಫೇಸ್‌ಬುಕ್‌ನಲ್ಲಿ ಅವರು ಹಾಕಿದರು.

ಹಳೆಯ ಆಸ್ಕಿ-ಫಾಂಟುಗಳನ್ನು ಬಳಸಿ ಟೈಪ್‌ಮಾಡಲಾದ ಕನ್ನಡ ಪಠ್ಯವನ್ನು ನೇರವಾಗಿ ಅಂತರ್ಜಾಲ ತಾಣಕ್ಕೆ ಹಾಕಲಾಗುವುದಿಲ್ಲ. ಹಾಗೆ ಹಾಕಲು ಹೋದರೆ, ಆ ಪಠ್ಯವು ವಿಚಿತ್ರಲಿಪಿಯಾಗಿ (ಜಂಕ್ ಕ್ಯಾರೆಕ್ಟರ್) ಕಾಣಿಸುತ್ತದೆ. ಅಂತರ್ಜಾಲದಲ್ಲಿನ ಬಳಕೆಗಾಗಿ ಕನ್ನಡದ ಪಠ್ಯವು ಯೂನಿಕೋಡ್‌ನಲ್ಲಿರುವುದು ಅತ್ಯಗತ್ಯ. ಪತ್ರಿಕೆಗಳ ಅಂತರ್ಜಾಲ ಆವೃತ್ತಿ ಗಳಲ್ಲಿ ಸುದ್ದಿಗಳನ್ನು ಪ್ರಕಟಿಸಲು ಮುದ್ರಣಕ್ಕೆ ಟೈಪ್‌ಮಾಡಲಾದ ಪಠ್ಯವನ್ನೇ ಯೂನಿಕೋಡ್ ಫಾಂಟ್‌ಗೆ ಪರಿವರ್ತಿಸಿ, ಪಠ್ಯವನ್ನು ‘ನ್ಯೂಸ್ ಪೋರ್ಟಲ್’ಗಳಿಗೆ ಹಾಕಲಾಗುತ್ತಿದೆ. ಕನ್ನಡದ ಜಾಲತಾಣಗಳು, ಬ್ಲಾಗುಗಳು, ಇ-ಮೇಯ್ಲಾ ಸಂದೇಶಗಳು, ಚಾಟಿಂಗ್ ಮೆಸೇಜ್‌ಗಳು ಇತ್ಯಾದಿಗಳು ಸಹ ಯೂನಿಕೋಡ್ ಫಾಂಟಿನಲ್ಲಿ ಇರುವುದು ಅನಿವಾರ್ಯ.

ಕನ್ನಡದ ಹಲವಾರು ದಿನಪತ್ರಿಕೆಗಳು, ನಿಯತಕಾಲಿಕೆಗಳು ಓದುಗರಿಂದ, ಲೇಖನಗಳು, ಪ್ರತಿಕ್ರಿಯೆಗಳು ಇವುಗಳೆಲ್ಲವನ್ನೂ ಇ-ಮೇಯ್ ಮೂಲಕ ‘ಬರಹ’ ಅಥವಾ ‘ನುಡಿ’ ತಂತ್ರಾಂಶದಲ್ಲಿ ಕಳುಹಿಸಿಕೊಡುವಂತೆ ಆಗಾಗ ಪ್ರಕಟನೆ ನೀಡುವುದನ್ನು ನೀವು ಗಮನಿಸಿರಬಹುದು. ಪತ್ರಿಕೆಗಳು ನುಡಿ, ಬರಹ ಫಾಂಟುಗಳನ್ನು ಬಳಸಿ ಮುದ್ರಣ ಮಾಡುತ್ತವೆ ಎಂದು ಭಾವಿಸಬೇಡಿ. ನುಡಿ, ಬರಹದ ಫಾಂಟುಗಳನ್ನು ಕನ್ನಡದ ಯಾವುದೇ ದಿನಪತ್ರಿಕೆಯು ಬಳಸುತ್ತಿರುವ ಬೇರೆಬೇರೆ ಫಾಂಟ್‌ಗಳಿಗೆ ಪರಿವರ್ತಿಸುವ ಸೌಲಭ್ಯಗಳಿವೆ. ಪಠ್ಯಪರಿವರ್ತನೆಯ ಸೌಲಭ್ಯದಿಂದ ಓದುಗರು ಮತ್ತು ಪತ್ರಿಕೆಗಳ ನಡುವೆ ‘ಡಿಜಿಟಲ್-ಕನ್ನಡ-ಪಠ್ಯವನ್ನು ವಿನಿಮಯಮಾಡಿಕೊಳ್ಳುವುದು ಸಾಧ್ಯವಾಗಿದೆ. ಇದರಿಂದಾಗಿ ಪತ್ರಿಕೆಗಳಲ್ಲಿ ಓದುಗರಿಂದ ಬಂದ ಲೇಖನ ಮತ್ತು ಪ್ರತಿಕ್ರಿಯೆಗಳನ್ನು ನೇರವಾಗಿ ಪ್ರಕಟನೆಗೆ ಬಳಸುತ್ತಿರುವುದರಿಂದ ಬಹಳಷ್ಟು ಟೈಪಿಂಗ್ ಶ್ರಮ ಮತ್ತು ಸಮಯವನ್ನು ಉಳಿತಾಯವಾಗುತ್ತಿದೆ. ಹಲವು ತಾಂತ್ರಿಕ ಕಾರಣಗಳಿಗಾಗಿ, ಪತ್ರಿಕೆಗಳು ಯೂನಿಕೋಡ್ ಫಾಂಟ್‌ಗಳನ್ನು ಬಳಸಿ ಪುಟವಿನ್ಯಾಸವನ್ನು ಮಾಡುತ್ತಿಲ್ಲ. ಇಂದಿಗೂ ಹಳೆಯ ಆಸ್ಕಿ ಫಾಂಟುಗಳೇ ಪ್ರಕಟನಾ ಮಾಧ್ಯಮದಲ್ಲಿ ತಮ್ಮ ಪಾರಮ್ಯವನ್ನು ಮೆರೆಯುತ್ತಿವೆ. ಮುದ್ರಣಕ್ಕೆಂದು ಟೈಪ್‌ಮಾಡಲಾದ ಅದೇ ಕನ್ನಡ ಪಠ್ಯವನ್ನು ಅಂತರ್ಜಾಲದಲ್ಲಿ ಬಳಸಬೇಕಾದರೆ ಅವುಗಳನ್ನು ಯೂನಿಕೋಡ್‌ಗೆ ಪರಿವರ್ತಿಸಿ ಬಳಸಲಾಗುತ್ತಿದೆ. ವ್ಯಕ್ತಿಗತ ಬಳಕೆದಾರರೂ ಸಹ ಹೀಗೆಯೇ, ತಮ್ಮ ಅವಶ್ಯಕತೆಗೆ ತಕ್ಕಂತೆ ‘‘ಪರಿವರ್ತಕಗಳನ್ನು (ಕನ್‌ವರ್ಟರ್ಸ್‌) ಬಳಸಿ ವಿಚಿತ್ರಲಿಪಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಸ್ಮಾರ್ಟ್ ಫೋನುಗಳಲ್ಲಿ ಫಾಂಟ್ ನಿಗದಿಪಡಿಸುವ ಅವಕಾಶವಿಲ್ಲದಿರುವುದರಿಂದ, ಕನ್ನಡದ ಪಠ್ಯಕ್ಕೆ ಹಳೆಯ ಮತ್ತು ಹೊಸ ಎನ್‌ಕೋಡಿಂಗ್ ಎಂಬ ಗೊಂದಲ ಗಳಿಲ್ಲ. ಸ್ಮಾರ್ಟ್‌ಫೋನುಗಳಲ್ಲಿ ಯೂನಿಕೋಡ್ ಶಿಷ್ಟತೆ ಆರಂಭದಿಂದಲೂ ಅನುಷ್ಠಾನಗೊಂಡಿದೆ. ಕಂಪ್ಯೂಟರಿನಲ್ಲಿ ಸಿದ್ಧಪಡಿಸಿದ ಹಳೆಯ ಪಠ್ಯಗಳು ಸ್ಮಾರ್ಟ್‌ಫೋನಿನಲ್ಲಿ ಸಹಜವಾಗಿ ವಿಚಿತ್ರಲಿಪಿಗಳಾಗಿ ಕಂಡುಬರುತ್ತವೆ. ಕನ್ನಡದ ಜನಪ್ರಿಯ ಲಿಪಿತಂತ್ರಾಂಶಗಳಾದ ‘ನುಡಿ, ‘ಬರಹಗಳಲ್ಲಿ ‘‘ಫಾಂಟ್ ಪರಿವರ್ತಕಗಳು ಮತ್ತು ‘‘ಎನ್‌ಕೋಡಿಂಗ್ ಪರಿವರ್ತಕಗಳನ್ನು ಒದಗಿಸಲಾಗಿದೆ. ಡಿ.ಟಿ.ಪಿ. ಉದ್ದೇಶದಿಂದ ಬಳಕೆಯಲ್ಲಿರುವ ಕನ್ನಡದ ಹಳೆಯ ಲಿಪಿತಂತ್ರಾಂಶಗಳಾದ ಶ್ರೀಲಿಪಿ, ಆಕೃತಿ ಮತ್ತು ಐಎಸ್‌ಎಂ ತಂತ್ರಾಂಶಗಳ ತಲಾ ಒಂದೊಂದು ನಿರ್ದಿಷ್ಟ ಫಾಂಟ್‌ನ ಎನ್‌ಕೋಡಿಂಗ್‌ನ್ನು ಬರಹಕ್ಕೆ ಮತ್ತು ಬರಹದಿಂದ ಆಯಾಯ ತಂತ್ರಾಂಶಗಳ ಎನ್‌ಕೋಡಿಂಗ್‌ಗೆ ಪರಸ್ಪರ ಬದಲಾಯಿಸುವ ಸೌಲಭ್ಯವನ್ನು ‘ಬರಹ 7.0’ ಆವೃತ್ತಿಯಲ್ಲಿ ನೀಡಲಾಗಿದೆ. ಬರಹ ಬಳಸಿ ಟೈಪ್‌ಮಾಡಲಾದ ಕನ್ನಡದ ಶುದ್ಧಪಠ್ಯವನ್ನು (ಪ್ಲೇನ್-ಟೆಕ್ಸ್ಟ್) ಬರಹದ ಎನ್‌ಕೋಡಿಂಗ್‌ನಿಂದ ಬೇರೆಬೇರೆ ಹೆಸರಿನ ಫಾಂಟ್‌ಗಳ ಎನ್‌ಕೋಡಿಂಗ್‌ಗೆ ಬದಲಾಯಿ ಸಬಹುದು. ಯೂಸರ್ ಇಂಟರ್‌ಫೇಸ್ ಇರುವ ‘ಫಾಂಟ್ ಕನ್‌ವರ್ಟ್’ ಎಂಬ ಸೌಲಭ್ಯವನ್ನು ಬಳಸಿ, ಸುಮಾರು ಹತ್ತು ಹನ್ನೆರಡು ಪುಟಗಳಷ್ಟು ಪ್ರಮಾಣದ ಕನ್ನಡ ಪಠ್ಯವನ್ನು ಪರಸ್ಪರ ಟ್ರಾನ್ಸ್‌ಕೋಡಿಂಗ್ ಮಾಡಬಹುದು. ಅಂದರೆ, ಒಂದು ಗ್ಲಿಫ್ ಎನ್‌ಕೋಡಿಂಗ್‌ನಿಂದ ಮತ್ತೊಂದು ಗ್ಲಿಫ್ ಎನ್‌ಕೋಡಿಂಗ್‌ಗೆ ಪರಿವರ್ತನೆ ಮಾಡಬಹುದು. ಗಾತ್ರದಲ್ಲಿ ದೊಡ್ಡದಾಗಿರುವ ಟೆಕ್ಸ್ಟ್ ಫೈಲ್‌ಗಳನ್ನು ನೇರವಾಗಿ ಟ್ರಾನ್ ್ಸ ಕೋಡಿಂಗ್ ಮಾಡಲು ಬರಹದ ವಿಶೇಷ ಸೌಲಭ್ಯವಾದ ‘ಕಮಾಂಡ್‌ಲೈನ್ ಯುಟಿಲಿಟಿ’ಯನ್ನು ಬಳಸಬಹುದು.

ಬರಹದಲ್ಲಿ, ಕೇವಲ ಪಠ್ಯರೂಪದ (ಟೆಕ್ಸ್ಟ್-ಫಾರ್ಮೆಟ್) ಪಠ್ಯವನ್ನು ಅಷ್ಟೇ ಅಲ್ಲದೆ, ಹೆಚ್.ಟಿ.ಎಂ.ಎಲ್, ಆರ್‌ಟಿಎಫ್ ರೂಪದಲ್ಲಿನ ಪಠ್ಯ ವನ್ನೂ ಸಹ ಟ್ರಾನ್ಸ್‌ಕೋಡಿಂಗ್ ಮಾಡುವ ಸೌಲಭ್ಯಗಳು ಇವೆ. ಆಸ್ಕಿ-ಎನ್‌ಕೋಡಿಂಗ್ ಇರುವ ವಿವಿಧ ಫಾಂಟ್‌ಗಳ ನಡುವೆ ‘‘ಗ್ಲಿಫ್-ಕೋಡ್‌ಗಳ ಟ್ರಾನ್ಸ್‌ಕೋಡಿಂಗ್ ಮಾಡಿಕೊಳ್ಳಬಹುದು. ಇದರಿಂದಾಗಿ, ಟೈಪ್‌ಮಾಡಲಾಗಿರುವ ಕನ್ನಡದ ಹಳೆಯ ಪಠ್ಯವನ್ನು ಯುನಿಕೋಡ್‌ನಂತಹ ಹೊಸ ಶಿಷ್ಟತೆಗೆ ವರ್ಗಾಂತರಿಸಿಕೊಳ್ಳಲು ಸಾಧ್ಯವಾಗಿದೆ. ಬರಹದಲ್ಲಿ ಇರುವ ಈ ಪರಿವರ್ತನೆಯ ಸೌಲಭ್ಯ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಸಮರ್ಥವಾಗಿ ಬಳಸುವಲ್ಲಿ ಅತ್ಯಂತ ಉಪಯುಕ್ತವಾಗಿದೆ.

‘ನುಡಿ ತಂತ್ರಾಂಶದಲ್ಲಿ ಈ ರೀತಿಯ ಟ್ರಾನ್ಸ್‌ಕೋಡಿಂಗ್‌ಗೆ ನೇರವಾದ ಸೌಲಭ್ಯಗಳು ಇಲ್ಲ. ಕೋರಿಕೆಯ ಮೇರೆಗೆ ಇಂತಹ ಪರಿವರ್ತಕಗಳನ್ನು (ಪ್ರತ್ಯೇಕವಾಗಿ) ಕನ್ನಡ ಗಣಕ ಪರಿಷತ್ತು ಒದಗಿಸುತ್ತದೆ. ಕೆಲವೇ ಆಯ್ದ ತಂತ್ರಾಂಶ ತಯಾರಕರ ಎನ್‌ಕೋಡಿಂಗ್‌ನ್ನು ಪರಿವರ್ತಿಸುವ ಈ ಪರಿವರ್ತಕಗಳು ಎಂ.ಎಸ್.ವರ್ಡ್‌ನಲ್ಲಿ (ಟೆಂಪ್ಲೇಟ್ ರೂಪದಲ್ಲಿ) ಕಾರ್ಯನಿರ್ವಹಿಸುತ್ತವೆ. ಇವು ಒಂದೊಂದೇ ಸಾಲನ್ನು ಪರಿವರ್ತಿಸುತ್ತವೆ. ಫಾರ್ಮೆಟಿಂಗ್‌ನ್ನು ಹಾಗೆಯೇ ಉಳಿಸಿಕೊಳ್ಳಲು ಸಹಾಯಕವಾಗುವ ಈ ಪರಿವರ್ತಕಗಳು, ಗಾತ್ರದಲ್ಲಿ ದೊಡ್ಡದಿರುವ ಫೈಲ್‌ಗಳನ್ನು (ಹೆಚ್ಚು ಸಂಖ್ಯೆಯ ಪುಟಗಳಿರುವ ಕಡತ) ಪರಿವರ್ತಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತವೆ. ಎನ್‌ಕೋಡಿಂಗ್ ಪರಿವರ್ತನೆ ಉದ್ದೇಶಕ್ಕೆ ಬರಹದಲ್ಲಿ ನೀಡಲಾಗಿರುವ ಕಮಾಂಡ್‌ಲೈನ್ ಯುಟಿಲಿಟಿಗಳಂತಹ ಸೌಲಭ್ಯಗಳು ಮಾತ್ರವೇ ದೊಡ್ಡ ಫೈಲ್‌ಗಳನ್ನು ತಕ್ಷಣದಲ್ಲಿ ಪರಿವರ್ತಿಸಿಕೊಡಬಲ್ಲವು. ಬರಹದ ರೀತಿಯಲ್ಲಿ ಎಲ್ಲಾ ತಯಾರಕರ ಫಾಂಟ್‌ಗಳ ಪರಿವರ್ತಕಗಳು ನುಡಿಯಲ್ಲಿ ದೊರೆಯುವುದಿಲ್ಲ. ಬಳಕೆದಾರರೇ ನೇರವಾಗಿ, ಸರಳವಾಗಿ ಎನ್‌ಕೋಡಿಂಗ್ ಪರಿವರ್ತನೆಗಳನ್ನು ಮಾಡಲು ನುಡಿಯಲ್ಲಿ ‘ಯೂಸರ್ ಇಂಟರ್‌ಫೇಸ್’ ನೀಡಲಾಗಿಲ್ಲ. ಬದಲಾಗಿ, ನುಡಿ.5 ಆವೃತ್ತಿಯಲ್ಲಿ ‘ಕನ್ನಡ ಯೂನಿಕೋಡ್ ಎಂಬ ಹೆಸರಿನ ಟೆಂಪ್ಲೇಟ್‌ನ್ನು ತೆರೆದು, ಅದರಲ್ಲಿನ ‘ನುಡಿ ಯೂನಿಕೋಡ್ ಕನ್‌ವರ್ಷನ್ ಎಂಬುದನ್ನು ಕ್ಲಿಕ್‌ಮಾಡಿದರೆ ಬರುವ ಹಲವು ಆಯ್ಕೆಗಳಲ್ಲಿ ಅಗತ್ಯವಿರುವುದನ್ನು ಆಯ್ದುಕೊಂಡು ಪಠ್ಯವನ್ನು ಪರಿವರ್ತಿಸಿಕೊಂಡು ಬಳಸಬಹುದು.

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಒದಗಿಸಿರುವ ಉಚಿತ ಕನ್ನಡ ತಂತ್ರಾಂಶ ಸಲಕರಣೆಗಳ ಪೈಕಿ ಇಂತಹ ಪರಿವರ್ತಕ ತಂತ್ರಾಂಶವೂ ಸಹ ಇದೆ. ಇದನ್ನು ಬಳಸಿ ವಿವಿಧ ಹೆಸರಿನ ಆಸ್ಕಿ-ಫಾಂಟುಗಳ ಪಠ್ಯವನ್ನು ಯೂನಿಕೋಡ್ ಫಾಂಟ್‌ಗೆ ಪರಿವರ್ತಿಸಬಹುದು. ಇದನ್ನು http://www.karnataka.gov.in/kcit/pages/kannadasoftware.aspx ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬೇರೆಬೇರೆ ನಮೂನೆಯ (ಫಾರ್ಮೆಟ್) ಕಡತಗಳನ್ನು ಪರಿವರ್ತಿಸುವ ಕುರಿತಾದ ವಿಧಿವಿಧಾನಗಳನ್ನು ವಿವರಿಸುವ ಸಹಾಯವನ್ನು (ಹೆಲ್ಪ್) ಅದರಲ್ಲಿ ಒದಗಿಸಲಾಗಿದೆ.

ಕನ್ನಡ ಪಠ್ಯವನ್ನು ಪರಿವರ್ತಿಸಿ ನೀಡುವ ಆನ್‌ಲೈನ್ ಜಾಲತಾಣಗಳಿವೆ. ಇಲ್ಲಿ ದೊರೆ ಯುವ ಸೌಲಭ್ಯವನ್ನು ಬಳಸಿ ನುಡಿ, ಬರಹಗಳಲ್ಲಿನ ಆಸ್ಕಿ-ಫಾಂಟುಗಳ ಕನ್ನಡ ಪಠ್ಯವನ್ನು ಯೂನಿಕೋಡ್‌ಗೆ ಬದಲಾಯಿಸಿಕೊಳ್ಳಬಹುದು.

ಕನ್ನಡದ ಡಿ.ಟಿ.ಪಿ.ಗಾಗಿ ಲಿಪಿತಂತ್ರಾಂಶ ಸಿದ್ಧಪಡಿಸಿ ನೀಡಿರುವ ಎಲ್ಲ ತಂತ್ರಾಂಶ ತಯಾರಕರು ಬೇರೆಬೇರೆ ತಯಾರಕರ ಫಾಂಟುಗಳ ಪಠ್ಯವನ್ನು ತಮ್ಮ ಫಾಂಟುಗಳಿಗೆ ಪರಿವರ್ತಿಸುವ ಸೌಲಭ್ಯವನ್ನು ಹಿಂದಿನಿಂದಲೂ ನೀಡುತ್ತಲೇ ಬಂದಿದ್ದಾರೆ. ಹಳೆಯ ಎನ್‌ಕೋಡಿಂಗ್‌ನಿಂದ ಹೊಸ ಎನ್‌ಕೋಡಿಂಗ್‌ಗೆ ಏಕಮುಖದ (ಮುಮ್ಮುಖ) ಪರಿವರ್ತನೆಯನ್ನು ಬಹುತೇಕ ತಂತ್ರಾಂಶಗಳು ನೀಡುತ್ತವೆ. ಆದರೆ, ಹೊಸದರಿಂದ ಹಳೆಯದಕ್ಕೆ (ಹಿಮ್ಮುಖ) ಪರಿವರ್ತನೆಯನ್ನು ನೀಡುವ ಸೌಲಭ್ಯ ಇರುವುದು ‘ಬರಹ ತಂತ್ರಾಂಶದಲ್ಲಿ ಮಾತ್ರ. ಕೆಲವೊಮ್ಮೆ ಹಿಮ್ಮುಖ ಪರಿವರ್ತನೆಯ ಅಗತ್ಯ ವಿರುತ್ತದೆ. ಉದಾಹರಣೆಗೆ, ಅಂತರ್ಜಾಲದಲ್ಲಿ ಲಭ್ಯವಿರುವ ಪಠ್ಯವನ್ನು ಯಥಾವತ್ತು ಮುದ್ರಣಕ್ಕೆ (ಡಿ.ಟಿ.ಪಿ) ತೆಗೆದುಕೊಳ್ಳಬೇಕಾದಾಗ ಇಂತಹ ಪರಿವರ್ತಕದ ಅಗತ್ಯವಿದೆ. ಈ ಪರಿವರ್ತಕಗಳ ಗೊಡವೆಯೇ ಬೇಡ ಎಂದಾದರೆ, ಎಲ್ಲರೂ, ಎಲ್ಲ ಉದ್ದೇಶಕ್ಕೂ ಹೊಸ ಯೂನಿಕೋಡ್ ಶಿಷ್ಟತೆಯ ಫಾಂಟುಗಳನ್ನು ಬಳಸಿಯೇ ಕನ್ನಡ ಪಠ್ಯವನ್ನು ಟೈಪ್‌ಮಾಡಿದರೆ ಸಮಸ್ಯೆಗಳೇ ಇರುವುದಿಲ್ಲ. ಪುಸ್ತಕ ಪ್ರಕಾಶಕರು ಮತ್ತು ಪತ್ರಿಕೆಗಳು ಯೂನಿಕೋಡ್ ಫಾಂಟು ಬೆಂಬಲಿಸುವ ಡಿ.ಟಿ.ಪಿ.ತಂತ್ರಾಂಶಗಳತ್ತ ಗಮನ ಹರಿಸಬೇಕು. ತಾವು ಈಗ ಬಳಸುತ್ತಿರುವ ಡಿ.ಟಿ.ಪಿ.ತಂತ್ರಾಂಶಗಳಲ್ಲಿ ಯೂನಿಕೋಡ್ ಫಾಂಟ್ ಬಳಸಲು ಅನುವಾಗುವಂತೆ ತಂತ್ರಾಂಶಗಳನ್ನು ಸುಧಾರಿಸಿ ನೀಡುವಂತೆ ತಯಾರಕರನ್ನು ಅವರು ಒತ್ತಾಯಿಸಬೇಕು. ಕನ್ನಡ ಲಿಪಿತಂತ್ರಾಂಶ ತಯಾರಕರೂ ಸಹ ಇನ್ನು ಮುಂದೆ ಹಳೆಯ ಫಾಂಟುಗಳನ್ನು ಒದಗಿಸುವುದನ್ನು ನಿಲ್ಲಿಸಿ, ಯೂನಿಕೋಡ್ ಶಿಷ್ಟತೆಯ ಫಾಂಟುಗಳನ್ನೇ ತಯಾರಿಸಿ ನೀಡಬೇಕು. ಆಗ ಮಾತ್ರವೇ ಕನ್ನಡ ಪಠ್ಯವೂ ಸಹ ಗೊಂದಲಗಳಿಲ್ಲದಂತೆ, ಸ್ಮಾರ್ಟ್‌ಫೋನ್ ಸೇರಿದಂತೆ, ಎಲ್ಲೆಡೆಯಲ್ಲಿ ಬಳಸಲು ಸಾಧ್ಯವಾಗುತ್ತದೆ.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News