ನರೇಂದ್ರ ಮೋದಿ ದೇಶದ ನಂ.1 ಕಳ್ಳ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ

Update: 2018-04-29 16:23 GMT

ಬೆಂಗಳೂರು, ಎ. 29: ‘ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಅಭಿವೃದ್ಧಿ ಪಡಿಸಲು ಬಂದಿಲ್ಲ. ಬದಲಿಗೆ, ದೇಶದ ಸಂಪತ್ತನ್ನು ಅಂಬಾನಿ, ಅದಾನಿಗೆ ಒತ್ತೆ ಇಡಲು ಬಂದಿರುವ ದೇಶದ ನಂಬರ್ ಒನ್ ಕಳ್ಳ’ ಎಂದು ಗುಜರಾತ್ ಶಾಸಕ ಹಾಗೂ ಹೋರಾಟಗಾರ ಜಿಗ್ನೇಶ್ ಮೇವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಸಂವಿಧಾನವನ್ನು ಉಳಿಸಲು ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ-ಕಾರ್ಮಿಕರ ಅಭಿವೃದ್ಧಿಗೆ ಏನೂ ಕ್ರಮ ಕೈಗೊಳ್ಳದ ಪ್ರಧಾನಿ ನರೇಂದ್ರ ಮೋದಿ ದೇಶದ ಲಕ್ಷಾಂತರ ಭೂಮಿಯನ್ನು ಅದಾನಿ, ಅಂಬಾನಿಗೆ ಒತ್ತೆ ಇಟ್ಟಿದ್ದಾರೆ ಎಂದು ಕಿಡಿಕಾರಿದರು.

ಭಗತ್‌ಸಿಂಗ್, ರಾಜಗುರು ರೈತರ-ಕಾರ್ಮಿಕರ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ, ಪ್ರಧಾನಿ ನರೇಂದ್ರ ಮೋದಿ ಘರ್ ವಾಪಸಿ, ಗೋ ಹತ್ಯೆ ಕುರಿತು ಮಾತನಾಡುತ್ತಾರೆ. ಬಿಜೆಪಿ ನಾಯಕರು ದೇಶವನ್ನು ಅಭಿವೃದ್ಧಿ ಮಾಡುವ ಮೂಲಕ ಜನತೆಯ ಬಳಿ ಮತಯಾಚಿಸುವುದಿಲ್ಲ. ಬದಲಿಗೆ, ಘರ್‌ವಾಪಸಿ, ಗೋಹತ್ಯೆ ಹೆಸರಿನಲ್ಲಿ ಜನರ ಮಧ್ಯೆ ಧ್ವೇಷ ಬಿತ್ತಿಯುವ ಮೂಲಕ ಮತಯಾಚಿಸುತ್ತಾರೆ ಎಂದು ಅವರು ಟೀಕಿಸಿದರು.

ಬಸವಣ್ಣ, ನಾರಾಯಣಗುರು, ಪೆರಿಯಾರ್ ಚಿಂತನೆಗಳನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಎಂದಿಗೂ ಅವಕಾಶ ಮಾಡಿಕೊಡಬಾರದು. ಪ್ರಧಾನಿ ನರೇಂದ್ರ ಮೋದಿ ಮಾಡೆಲ್ ಮುಗಿದಿದೆ. ಹೀಗಾಗಿ ಹಣ ಹಂಚಿಕೆ ಮಾಡಿ, ಕೋಮು ದಳ್ಳುರಿ ಸೃಷ್ಟಿಸಿ ಚುನಾವಣೆ ಗೆಲ್ಲುವ ಷಡ್ಯಂತ್ರಗಳನ್ನು ಬಿಜೆಪಿ ರೂಪಿಸಿದೆ. ರಾಜ್ಯದ ಜನತೆ ಅದಕ್ಕೆ ಅವಕಾಶ ಮಾಡಬಾರದು ಎಂದು ಅವರು ಮನವಿ ಮಾಡಿದರು.

ಹಿರಿಯ ವಕೀಲ ಹಾಗೂ ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಕಾಡಿದೆ. ಹೀಗಾಗಿ ಮತಗಳನ್ನು ವಿಭಜಿಸುವ ಸಲುವಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯೆ ಹಣಕೊಟ್ಟು ನಾಲ್ಕರಿಂದ ಐದು ಪಕ್ಷೇತರ ಅಭ್ಯರ್ಥಿಗಳನ್ನು ನಿಲ್ಲಿಸಿ, ಕಾಂಗ್ರೆಸ್‌ನ್ನು ಸೋಲಿಸಲು ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಬಿಎಸ್‌ವೈ ಪರಾರಿ: ಚುನಾವಣೆಯ ನಂತರ ಬಿ.ಎಸ್‌ಯಡಿಯೂರಪ್ಪ ಕಣ್ಮರೆಯಾಗಲಿದ್ದಾರೆ. ಹಾಗೂ ಎಚ್.ಡಿ.ಕುಮಾರಸ್ವಾಮಿ ಕಣ್ಣೀರಿಟ್ಟು ಮೂಲೆಗೆ ಸರಿಯಲಿದ್ದಾರೆ. ಆದರೂ ಬಿ.ಎಸ್.ಯಡಿಯೂರಪ್ಪ, ಅಮಿತ್ ಶಾ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದೇನೆಂದು ಕನಸು ಕಾಣುತ್ತಿದ್ದಾರೆ. ಆದರೆ, ಇದು ಆಗುವ ಮಾತಲ್ಲ. ಹೀಗಾಗಿ ಚುನಾವಣೆಗೆ ಮೊದಲೆ ಅಮಿತ್ ಶಾ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಆಸೆ ಈಡೇರಿಸಿಕೊಳ್ಳಲಿ ಎಂದು ಅವರು ವ್ಯಂಗ್ಯವಾಡಿದರು.

ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಆರೆಸ್ಸೆಸ್‌ನವರು ಢೋಂಗಿ ಹಿಂದೂಗಳಾಗಿದ್ದಾರೆ. ಅವರಿಂದಾಗಿ ಬಹುಸಂಸ್ಕೃತಿಯಿಂದ ಹಿಂದೂಧರ್ಮ ನಾಶದ ಹಂತಕ್ಕೆ ಮುಟ್ಟಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಮೂಲಕ ಬಹುತ್ವದಡಿ ನೆಲೆಗೊಂಡಿರುವ ಹಿಂದೂ ಧರ್ಮವನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

‘ಇತ್ತೀಚೆಗೆ ದೇಶದಲ್ಲಿ ನಡೆದಿರುವ ಎಲ್ಲ ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿ ಮುಖಂಡರೆ ಪ್ರಮುಖ ಆರೋಪಿಯಾಗಿದ್ದಾರೆ. ಬಿಜೆಪಿ ಅತ್ಯಾಚಾರವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುವ ಮೂಲಕ ವೈದಿಕ ಧರ್ಮವನ್ನು ಮರು ಸ್ಥಾಪಿಸಲು ಷಡ್ಯಂತ್ರ ರೂಪಿಸಿದೆ’
-ಎ.ಕೆ.ಸುಬ್ಬಯ್ಯ ಹಿರಿಯ ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News