ಬಿಜೆಪಿ ಆರೆಸ್ಸೆಸ್‌ನ ಬೆದರುಗೊಂಬೆ: ನಟ ಪ್ರಕಾಶ್ ರೈ

Update: 2018-04-29 15:17 GMT

ಬೆಂಗಳೂರು, ಎ.29: ಬಿಜೆಪಿ ಒಂದು ರಾಜಕೀಯ ಪಕ್ಷವೆ ಅಲ್ಲ. ಅದು ಆರೆಸ್ಸೆಸ್‌ನ ಬೆದರುಗೊಂಬೆಯಂತೆ ಕೆಲಸ ಮಾಡುತ್ತಿದೆಯಷ್ಟೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಟೀಕಿಸಿದ್ದಾರೆ.

ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಸಂವಿಧಾನವನ್ನು ಉಳಿಸಲು ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೆಸ್ಸೆಸ್ ಗೆ ನಿಜವಾಗಿಯೂ ಧೈರ್ಯವಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲಿ. ಅದನ್ನು ಬಿಟ್ಟು ಬಿಜೆಪಿಯೆಂಬ ಮುಖವಾಣಿ ಸೃಷ್ಟಿಸಿ ರಾಜಕೀಯ ಮಾಡುವುದಲ್ಲವೆಂದು ಸವಾಲು ಹಾಕಿದರು.

ಬಿಜೆಪಿ ನಾಯಕರು ಮಹಾ ಸುಳ್ಳುಗಾರರು. ಹೀಗಾಗಿಯೆ ಪ್ರಧಾನಿ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಸುಳ್ಳು ಹೇಳಿದ್ದಾರೆ. ಆದರೆ, ಅವರು ವಾಸ್ತವವಾಗಿ ನೋಟು ನಿಷೇಧದ ಮುಖಾಂತರ ದೇಶದಾದ್ಯಂತ ಕೋಟ್ಯಂತರ ಉದ್ಯೋಗವನ್ನು ನಾಶ ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಮಾಡಿದುಣ್ಣೋ ಮಾರಾಯ: ದೇಶದಲ್ಲಿ ಬಿಜೆಪಿ ನಾಯಕರು ದೇಶದ ಜನತೆಗೆ ಮಾಡಿರುವ ಪಾಪದ ಕೃತ್ಯಗಳ ಪ್ರತಿಫಲವನ್ನು ಕೆಲವೆ ದಿನಗಳಲ್ಲಿ ಅನುಭವಿಸಲಿದ್ದಾರೆ. ಕನ್ನಡದ ಪ್ರಸಿದ್ಧ ಗಾದೆಯಂತೆ ಬಿಜೆಪಿ ನಾಯಕರು ಮಾಡಿದುಣ್ಣೋ ಮಾರಾಯ ಸ್ಥಿತಿಗೆ ಬರುವುದರಲ್ಲಿ ಯಾವುದೆ ಅನುಮಾನವಿಲ್ಲವೆಂದು ಅವರು ಹೇಳಿದರು.

ನಮ್ಮದು ಬಸವಣ್ಣ, ಕುವೆಂಪು, ತೇಜಸ್ವಿ, ಸಾಹಿತ್ಯದ ನಾಡು. ಇಲ್ಲಿ ಕೆಲವು ಪತ್ರಕರ್ತರು ಬಿಜೆಪಿಯ ಹಣ ಪಡೆದು ಗೌರಿ ಲಂಕೇಶ್ ಬಗ್ಗೆ ತುಚ್ಚವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ಇದನ್ನು ರಾಜ್ಯದ ಜನತೆ ಯಾವುದೆ ಕಾರಣಕ್ಕೂ ಸಹಿಸುವುದಿಲ್ಲವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾಂತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹೋರಾಟಗಾರ ರಿಚಾ ಸಿಂಗ್, ಕೋಮು ಸೌಹಾರ್ದ ವೇದಿಕೆಯ ಮುಖಂಡ ಕೆ.ಎಲ್. ಅಶೋಕ್, ಬಾಬು ಮ್ಯಾಥ್ಯು, ಅಖಿಲಾ, ಗೌರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News