ಸಂವಿಧಾನ ಬಲಗೊಳಿಸಲು ಕಾರ್ಯ ಯೋಜನೆಗಳು ರೂಪುಗೊಳ್ಳಲಿ: ನಿವೃತ್ತ ಐಎಎಸ್ ಅಧಿಕಾರಿ ಎನ್.ಸಿ.ಮುನಿಯಪ್ಪ

Update: 2018-04-29 15:36 GMT

ಬೆಂಗಳೂರು, ಎ.29: ಸಂವಿಧಾನವನ್ನು ಮತ್ತಷ್ಟು ಬಲಗೊಳಿಸುವ ಮೂಲಕ ಸಂವಿಧಾನವನ್ನು ಬದಲಿಸುತ್ತೇವೆಂದು ಹೇಳುವವರಿಗೆ ಸವಾಲೆಸೆಯಬೇಕಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎನ್.ಸಿ.ಮುನಿಯಪ್ಪ ಸಲಹೆ ಮಾಡಿದ್ದಾರೆ.

ರವಿವಾರ ಬೆಂಗಳೂರು ದಲಿತ್ ಫೋರಂ ನಗರದ ಜೈಭೀಮ್ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ರವರ 127ನೆ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನ ಅಪಾಯದಲ್ಲಿ?’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇವತ್ತು ಎಲ್ಲ ಕ್ಷೇತ್ರವು ಖಾಸಗಿಕರಣವಾಗುತ್ತಿದೆ. ಸ್ವಾತಂತ್ರದ ಪ್ರಾರಂಭದಲ್ಲಿ ದೇಶದ ಬಹುತೇಕ ಕಂಪೆನಿಗಳು ಸರಕಾರದ ಅಧೀನದಲ್ಲಿದ್ದವು. ಹೀಗಾಗಿ ಸಂವಿಧಾನದ ಪ್ರಕಾರ ಆ ಕಂಪೆನಿಗಳಲ್ಲಿ ಮೀಸಲಾತಿ ಜಾರಿಯಲ್ಲಿತ್ತು. ಆದರೆ, ಈಗ ಸರಕಾರಿ ಕಾರ್ಖಾನೆಗಳು ಖಾಸಗೀಕರಣಕ್ಕೆ ತುತ್ತಾಗಿವೆ. ಇನ್ನು ಕಳೆದ 60, 70ವರ್ಷಗಳಲ್ಲಿ ಖಾಸಗಿ ಕಂಪೆನಿಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಳೆದಿವೆ. ಹೀಗಾಗಿ ಇಲ್ಲೆಲ್ಲ ಮೀಸಲಾತಿ ಜಾರಿಯಾಗಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರುವಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಶೇರು ಮಾರುಕಟ್ಟೆ ಸೇರಿದಂತೆ ಆರ್ಥಿಕ ವಲಯದಲ್ಲಿ ಪ್ರತಿ ತಿಂಗಳು ಲಕ್ಷಾಂತರ ಕೋಟಿ ರೂ.ಹೂಡಿಕೆಯಾಗುತ್ತಿದೆ. ಇದರಲ್ಲಿ ದಲಿತ ಸಮುದಾಯದ ಎಷ್ಟು ಮಂದಿ ಹಣ ಹೂಡಿಕೆ ಮಾಡಲು ಸಾಮರ್ಥ್ಯವಿದ್ದಾರೆ. ಈ ನಿಟ್ಟಿನಲ್ಲಿ ದಲಿತ ಸಮದಾಯವನ್ನು ಆರ್ಥಿಕವಾಗಿ ಬಲಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ತಿದ್ದುಪಡಿ ಕುರಿತು ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ. ಆದರೆ, ಸ್ವಾತಂತ್ರ ಬಂದು ಇಷ್ಟು ವರ್ಷಗಳು ಕಳೆದಿದ್ದರು ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಂತಿಲ್ಲ. ಉತ್ತರ ಪ್ರದೇಶದಲ್ಲಿ ಶೇ.46ರಷ್ಟು ದೌರ್ಜನ್ಯಗಳು ದಾಖಲಾದರೆ, ರಾಜಸ್ಥಾನದಲ್ಲಿ ಶೇ.40ರಷ್ಟು, ಬಿಹಾರದಲ್ಲಿ ಶೇ.28ರಷ್ಟು ಪ್ರಕರಣಗಳು ದಾಖಲಾಗಿವೆ. ಈ ದೌರ್ಜನ್ಯ ಪ್ರಕರಣಗಳನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಗಂಭೀರವಾದ ಚಿಂತನೆ ನಡೆಯುತ್ತಿಲ್ಲವೆಂದು ಅವರು ವಿಷಾಧಿಸಿದರು.

ಹೋರಾಟಗಾರ ಮಂಗ್ಳೂರು ವಿಜಯ ಮಾತನಾಡಿ, ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರವನ್ನು ಸಂವಿಧಾನವನ್ನು ಕರ್ತೃಗಳೆ ರೂಪಿಸಿದ್ದು, ನೀತಿ, ನಿಯಮಗಳ ಪ್ರಕಾರ ತಿದ್ದುಪಡಿಗೆ ಅವಕಾಶವಿದೆ. ಆದರೆ, ಕೇಂದ್ರ ಬಿಜೆಪಿ ಸರಕಾರ ಯಾವುದೆ ನಿಯಮಗಳನ್ನು ಪಾಲಿಸದೆ ತಮಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ತರಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲಿ ಜಾತಿ ದೌರ್ಜನ್ಯಕ್ಕೆ ಈಡಾಗುವವರು ದೂರು ದಾಖಲಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ದೌರ್ಜನ್ಯಗಳೆ ನಡೆದಿಲ್ಲವೆಂದು ಬಿಂಬಿಸಲು ಆಡಳಿತ ವರ್ಗ ಸದಾ ಸಿದ್ಧವಾಗಿರುತ್ತದೆ. ಈ ನಿಟ್ಟಿನಲ್ಲಿ ಜಾತಿ ದೌರ್ಜನ್ಯಗಳ ಕುರಿತು ಕಾನೂನು ಹೋರಾಟ ನಡೆಸಲು ದೂರು ದಾಖಲಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ವಿವಿಯ ಪ್ರೊ.ಡಾ.ಎಂ.ನಾರಾಯಣಸ್ವಾಮಿ, ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್.ತುಕಾರಾಮ್, ಬೆಂಗಳೂರು ವಿವಿ ಇತಿಹಾಸ ವಿಭಾಗದ ಪ್ರೊ.ಎಂ.ವಿ.ಉಷಾ ಸೇರಿದಂತೆ ಮತ್ತಿತರರಿದ್ದರು.

‘ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಂವಿಧಾನದಲ್ಲಿ ದಲಿತರಿಗಿಂತ ಒಕ್ಕಲಿಗ, ಲಿಂಗಾಯತ ಸೇರಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹಾಗೂ ಸರ್ವತೋಮುಖ ಅಭಿವೃದ್ಧಿ ಸಾಕಷ್ಟು ವಿಫುಲ ಅವಕಾಶ ಕಲ್ಪಿಸಲಾಗಿದೆ. ಆದರೂ, ಅಂಬೇಡ್ಕರ್‌ರನ್ನು ಕೇವಲ ದಲಿತ ಸಮುದಾಯಕ್ಕೆ ಸೀಮಿತಗೊಳಿಸಿ ನೋಡುವ ಪ್ರವೃತ್ತಿ ಮುಂದುವರೆದಿದೆ’
-ಎನ್.ಸಿ.ಮುನಿಯಪ್ಪ ನಿವೃತ್ತ ಐಎಎಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News