ಸ್ವಾಮೀಜಿಗಳಿಗೆ ‘ಯಡಿಯೂರಪ್ಪ ಮಾವನಿದ್ದಂತೆ’: ಹಿರೇಮಠ ಶಿವಾಚಾರ್ಯ ಸ್ವಾಮಿ
ಬೆಂಗಳೂರು, ಎ. 29: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯೂಡಿಯೂರಪ್ಪನವರು ‘ಮಠಾಧಿಪತಿಗಳಿಗೆ ಒಂದು ರೀತಿಯಲ್ಲಿ ಹೆಣ್ಣು ಕೊಟ್ಟ ಮಾವನಿದ್ದಂತೆ’ ಎಂದು ಕುಂದಗೋಳ ಹಿರೇಮಠದ ಶಿವಾಚಾರ್ಯ ಸ್ವಾಮಿ ಹೇಳಿದ್ದಾರೆ.
ರವಿವಾರ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮದುವೆಯಾಗುವ ವರನಿಗೆ ಮಾವ, ವರದಕ್ಷಣೆ ರೂಪದಲ್ಲಿ ಕಾರು, ಮನೆ, ರೊಕ್ಕ, ಪಲ್ಲಂಗ, ಫ್ಯಾನ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ನೀಡುತ್ತಾನೆ. ಅದೇ ರೀತಿ, ಯೂಡಿಯೂರಪ್ಪನವರು ರಾಜ್ಯದಲ್ಲಿರುವ ಎಲ್ಲ ಮಠದ ಸ್ವಾಮೀಜಿಗಳಿಗೆ 2 ಕೋಟಿ ರೂ., 5 ಕೋಟಿ ರೂ., 10 ಕೋಟಿ ರೂ. ಹಣ ನೀಡಿದ್ದು, ಇವರು ಹೆಣ್ಣು ಕೊಟ್ಟ ಮಾವ ಇದ್ದಂತೆ ಎಂದು ಬಹುಪರಾಕ್ ಹೇಳಿದರು.
ಕುಂದಗೋಳ ಬಿಜೆಪಿ ಅಭ್ಯರ್ಥಿ ಹಾಗೂ ಎಸ್.ಐ.ಚಿಕ್ಕನಗೌಡರ ಪರ ಪ್ರಚಾರ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಕೂಡ ಭಾಗಿಯಾಗಿದ್ದರು. ಇದೇ ವೇಳೆ ಸ್ವಾಮೀಜಿ ಈ ಹೇಳಿಕೆ ನೀಡಿದ್ದು, ಇದರಿಂದ ಬಿಎಸ್‌ವೈ ತೀವ್ರ ಮುಜುಗರಕ್ಕೆ ಈಡಾದ ಪ್ರಸಂಗ ನಡೆಯಿತು.