ಮೋದಿ ಸರಕಾರದ ನೀತಿಯಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ: ಮಾಜಿ ಕೇಂದ್ರ ಸಚಿವ ಡಾ.ಶಕೀಲ್ ಅಹ್ಮದ್
ಬೆಂಗಳೂರು, ಎ.29: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರ ಕೈಗೊಳ್ಳುತ್ತಿರುವ ಗುರಿ ರಹಿತ, ದುರ್ಬಲ ಮತ್ತು ಖಚಿತತೆ ಇಲ್ಲದ ವಿದೇಶಾಂಗ ಹಾಗೂ ಸೇನಾ ನೀತಿಗಳ ಪರಿಣಾಮವಾಗಿ ದೇಶದ ರಾಷ್ಟ್ರೀಯ ಭದ್ರತೆ ಮೇಲೆ ಅಪಾಯಕಾರಿ ಪರಿಣಾಮ ಬೀರಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಶಕೀಲ್ ಅಹ್ಮದ್ ಆರೋಪಿಸಿದರು.
ರವಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, 56 ಇಂಚಿನ ಎದೆ ಎಂಬ ಸುಳ್ಳಾಟ ಆಡುವ ಮೂಲಕ ನರೇಂದ್ರಮೋದಿ, ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಭದ್ರತೆಯ ಪರಿಸ್ಥಿತಿ ಕಳವಳಕಾರಿಯಾಗಿ ಕುಸಿತ ಕಂಡಿದೆ ಎಂದರು.
ಗಡಿಯುದ್ಧಕ್ಕೂ ಕದನ ವಿರಾಮ ಉಲ್ಲಂಘನೆ, ಗಡಿಯಾಚೆಗಿನ ನುಸುಳುವಿಕೆ, ನಮ್ಮ ಭದ್ರತಾ ನೆಲೆಗಳ ಮೇಲೆ ಭಯೋತ್ಪಾದಕರ ದಾಳಿ ಮತ್ತು ರಾಜ್ಯಗಳಲ್ಲಿ ನಕ್ಸಲ್ ದಾಳಿಗಳು ಗಣನೀಯವಾಗಿ ಏರಿಕೆಯಾಗಿದೆ. ಭಾಷಣ ಕಲೆ ಮತ್ತು ಮಾಧ್ಯಮ ಶೀರ್ಷಿಕೆಗಳ ನಿರ್ವಹಣೆಗಳು ಪರಿಸ್ಥಿತಿಯನ್ನು ಇನ್ನಷ್ಟು ಶೋಚನೀಯಗೊಳಿಸಿವೆ ಎಂದು ಅವರು ಹೇಳಿದರು.
ಟಿವಿ ಸ್ಟುಡಿಯೋದೊಳಗಿನ ಯುದ್ಧದ ಕೆಚ್ಚು ಮತ್ತು ಪ್ರಧಾನಿ ಮೋದಿ ವ್ಯಕ್ತಿತ್ವದ ಉತ್ಪ್ರೇಕ್ಷೆಗಳು ಪ್ರತಿದಿನ ಹೋರಾಟ ಮಾಡುವ ನಮ್ಮ ಯೋಧರ ತ್ಯಾಗಕ್ಕೆ ಮಾಡುವ ಅಪಮಾನವಾಗಿದೆ. ನೋಟು ಅಮಾನ್ಯೀಕರಣದ ನಂತರ ಭಯೋತ್ಪಾದನೆ ಮತ್ತು ನಕ್ಸಲ್‌ವಾದ ಕೊನೆಗೊಳ್ಳಲಿದೆ ಎಂದು ಪ್ರಧಾನಿ ಹೇಳಿಕೆ ನೀಡಿದ್ದರು. ಆದರೆ, ವಾಸ್ತವ ಬೇರೆಯೇ ಇದೆ ಎಂದು ಅವರು ತಿಳಿಸಿದರು.
ನೋಟು ಅಮಾನ್ಯೀಕರಣದ ನಂತರ 30 ಪ್ರಮುಖ ನಕ್ಸಲ್ ದಾಳಿಗಳು ನಡೆದಿದ್ದು, 103ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು 121ಕ್ಕೂ ಹೆಚ್ಚು ನಾಗರಿಕರು ಹತರಾಗಿದ್ದಾರೆ. ಅದೇ ರೀತಿ ನೋಟು ಅಮಾನ್ಯೀಕರಣದ ನಂತರ ಜಮ್ಮು ಮತ್ತು ಕಾಶ್ಮೀರವೊಂದರಲ್ಲೆ 53 ಪ್ರಮುಖ ಭಯೋತ್ಪಾದನಾ ದಾಳಿ ನಡೆದಿದ್ದು, 99 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅಲ್ಲದೆ, 64 ನಾಗರಿಕರು ಹತರಾಗಿದ್ದಾರೆ ಎಂದು ಶಕೀಲ್ ಅಹ್ಮದ್ ತಿಳಿಸಿದರು.
ಬಿಜೆಪಿ ಸರಕಾರದ 46 ತಿಂಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರವೊಂದರಲ್ಲೆ ನಮ್ಮ 362 ಧೀರ ಯೋಧರು ಹುತಾತ್ಮರಾಗಿದ್ದು, 213 ನಾಗರಿಕರು ಹತರಾಗಿದ್ದಾರೆ. ದೇಶದ ಗಡಿಯುದ್ಧಕ್ಕೂ 2947 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ. ಸೇನಾ ಪಡೆಗಳಲ್ಲಿ ಅಧಿಕಾರಿಗಳ ತೀವ್ರ ಕೊರತೆಯಿದೆ. ಭೂ ಸೇನಾ ಪಡೆಯಲ್ಲಿ 7679, ನೌಕಾ ಪಡೆಯಲ್ಲಿ 1434 ಅಧಿಕಾರಿಗಳ ಕೊರತೆ ಹಾಗೂ 14,821 ನಾವಿಕರ ಕೊರತೆಯಿದೆ. ವಾಯು ಪಡೆಯಲ್ಲಿ 15,357 ಸಿಬ್ಬಂದಿಯ ಕೊರತೆಯಿದೆ ಎಂದು ಶಕೀಲ್‌ಅಹ್ಮದ್ ತಿಳಿಸಿದರು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಚೀನಾ ಗಡಿಯುದ್ದಕ್ಕೂ ಕಾರ್ಯನಿರ್ವಹಿಸಲು 64,678 ಕೋಟಿ ರೂ.ವೆಚ್ಚದಲ್ಲಿ ಹೆಚ್ಚುವರಿಯಾಗಿ 90,274 ಯೋಧರನ್ನೊಳಗೊಂಡ ‘ಮೌಂಟೇನ್ ಸ್ಟ್ರೈಕ್ ಕೋರ್’(ಗುಡ್ಡಗಾಡು ಕಾರ್ಯಪಡೆ)ರಚನೆಗೆ ಅಂಗೀಕಾರ ನೀಡಲಾಗಿತ್ತು. ಆದರೆ, ಅದೀಗ ನೆನೆಗುದಿಗೆ ಬಿದ್ದಿದೆ. ಸೇನಾ ಪಡೆಗಳ ಬೇಡಿಕೆಗೆ ವಿರುದ್ಧವಾಗಿ ಬಜೆಟ್‌ನಲ್ಲಿ ರಕ್ಷಣಾ ಬಂಡವಾಳವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ ಎಂದು ಅವರು ದೂರಿದರು.
ಡೋಕ್ಲಾಮ್‌ದಲ್ಲಿ ಚೀನಾದ ಸೇನೆ ನಮ್ಮ ಭೂಮಿಯನ್ನು ಅತಿಕ್ರಮಣ ಮಾಡಿದೆ. ನಮ್ಮ ಗಡಿಯೊಳಗೆ ಬಂಕರ್, ರಸ್ತೆ, ಕಟ್ಟಡಗಳನ್ನು ನಿರ್ಮಿಸಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರಮೋದಿ ಚೀನಾಗೆ ಭೇಟಿ ಕೊಟ್ಟಿದ್ದರು. ಮತ್ತೊಂದು ಕಡೆ ಪಾಕಿಸ್ತಾನ ಅತಿಕ್ರಮಣಕ್ಕೆ ಮುಂದಾಗಿದೆ. ಗಡಿಯನ್ನು ಸುರಕ್ಷಿತಗೊಳಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಶಕೀಲ್ ಅಹ್ಮದ್ ವಾಗ್ದಾಳಿ ನಡೆಸಿದರು.
‘ಉತ್ತರಪ್ರದೇಶದಲ್ಲಿ ಯುವತಿಯೊಬ್ಬಳ ಮೇಲೆ ಬಿಜೆಪಿ ಶಾಸಕ ಅತ್ಯಾಚಾರ ಎಸಗಿದ ಆರೋಪ ಎದುರಿಸಿದ್ದು, ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಆತನ ವಿರುದ್ಧ ಏನು ಕ್ರಮ ಕೈಗೊಂಡಿದೆ. ತಪ್ಪಿತಸ್ಥರನ್ನು ಶಿಕ್ಷಿಸುವ ಬದಲು ಆತನನ್ನು ರಕ್ಷಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ಘಟನೆ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲವೇಕೆ?’
-ಡಾ.ಶಕೀಲ್‌ಅಹ್ಮದ್ ಕೇಂದ್ರದ ಮಾಜಿ ಸಚಿವ