ಬೆಂಗಳೂರು: ಬಸವ ತತ್ವ ಅಳವಡಿಸಿಕೊಳ್ಳಲು ವಿಜಯಲಕ್ಷ್ಮಿ ಬಾಳೇಕುಂದ್ರಿ ಕರೆ
ಬೆಂಗಳೂರು, ಎ.29: ಜೀವನದಲ್ಲಿ ಬಸವ ತತ್ವ ಅಳವಡಿಕೊಳ್ಳುವ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಸಮಾಜ ವಿರೋಧಿ ಚಟುವಟಿಕೆ ಹಾಗೂ ಭ್ರಷ್ಟಾಚಾರದಂತಹ ಕೊಳಕನ್ನು ತೊಡೆದುಹಾಕಬೇಕೆಂದು ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಕರೆ ನೀಡಿದರು.
ರವಿವಾರ ನಗರದ ಕಸಾಪ ಸಭಾಂಗಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಬಸವ ಜಯಂತಿ, ಬಸವ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಇಲ್ಲವಾಗಿದೆ. ಅಲ್ಲದೆ, ಭ್ರಷ್ಟಾಚಾರದ ಅಲೆ ವ್ಯಾಪಕವಾಗಿದ್ದು, ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕಲು ಪ್ರತಿಯೊಬ್ಬರು ವಚನ ಸಾಹಿತ್ಯ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜನರು ನಾನಾ ಕಾರಣಗಳಿಂದ ಮಾನಸಿಕ ಒತ್ತಡದಿಂದ ನರಳುತ್ತಿದ್ದಾರೆ. ಜನ, ಮನ, ಶರೀರವನ್ನು ಹೇಗೆ ಹಾಳು ಮಾಡುಕೊಳ್ಳುತ್ತಿದ್ದಾರೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ. ಇಂತಹ ಒತ್ತಡಗಳಿಂದ ಹೊರ ಬಂದು ಉತ್ತಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಮಾತನಾಡಿ, ಕನ್ನಡ ನಶಿಸಿ ಹೋಗುತ್ತಿದೆ ಎಂಬ ನಕಾರಾತ್ಮಕ ಭಾವನೆ ಕನ್ನಡ ಬೆಳೆಸುವ ಕೆಲಸ ಮಾಡಬೇಕು. ಜೊತೆಗೆ, ನಗರದಲ್ಲಿ ನೆಲೆಸಿರುವ ಪರಭಾಷಿಕರಿಗೆ ಕನ್ನಡ ಕಲಿಸುವ ಮೂಲಕ ಕನ್ನಡಾಭಿಮಾನ ಬೆಳೆಸಬೇಕು ಎಂದು ಹೇಳಿದ ಅವರು ವಚನ ಸಾಹಿತ್ಯ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಸರ್ವಧರ್ಮಗಳ ಸಮನ್ವಯತೆಯನ್ನು ಸಾರಿದೆ ಎಂದು ಹೇಳಿದರು.
ಲಂಡನ್‌ನಲ್ಲಿ ಸಮ್ಮೇಳನ: ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮುಂದಿನ ವರ್ಷ ಲಂಡನ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಆಯೋಜಿಸಲಾಗುತ್ತಿದೆ. ಸಮ್ಮೇಳನದ ಅಧ್ಯಕ್ಷರನ್ನಾಗಿ ಲಂಡನ್ ಸಾಹಿತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಾಯಣ್ಣ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಜಿ.ಎಸ್. ಸುಶೀಲಮ್ಮ, ಸಾಹಿತಿ ಜಿ.ಎಚ್.ಹನ್ನೆರಡು ಮಠ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡಸಂಘದ ಅಧ್ಯಕ್ಷ ಎಂ.ತಿಮ್ಮಯ್ಯ, ಸಮಾಜ ಸೇವಕ ತಿಂಡ್ಲು ಬಸವರಾಜ್ ಅವರಿಗೆ ಬಸವ ಪ್ರಶಸ್ತಿ ಪ್ರದಾನಿಸಲಾಯಿತು.