ನನಗೆ ಜನರ ಆಶೀರ್ವಾದ ಇದೆ: ರಮಾನಾಥ ರೈ

Update: 2018-05-02 11:13 GMT

ವಿಧಾನಸಭಾ ಚುನಾವಣೆಗೆ ಏಳು ಬಾರಿ ಸ್ಪರ್ಧಿಸಿ ಆರು ಸಲ ಶಾಸಕರಾಗಿ, ಮೂರು ಬಾರಿ ಸಚಿವರಾಗಿ ವಿವಿಧ ಖಾತೆಗಳನ್ನು ನಿರ್ವಹಿಸಿದ ಬೆಳ್ಳಿಪಾಡಿಗುತ್ತು ರಮಾನಾಥ ರೈ ಈ ಚುನಾವಣೆಯಲ್ಲಿ ಎಂಟನೇ ಬಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅತೀ ಕೋಮು ಸೂಕ್ಷ್ಮ ಪ್ರದೇಶವಾದ ಬಂಟ್ವಾಳ ಅಭಿವೃದ್ಧಿ ಕಾರ್ಯದಲ್ಲೂ ಜಿಲ್ಲೆ, ರಾಜ್ಯದ ಗಮನ ಸೆಳೆದಿದೆ. ಪ್ರಸಕ್ತ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿ ಕಾರ್ಯ ನಿರ್ವಹಿಸುತ್ತಿರುವ ರಮಾನಾಥ ರೈ ಅವರೊಂದಿಗೆ ‘ವಾರ್ತಾ ಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

► ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೀವು ವಿಫಲರಾಗಿದ್ದೀರಿ ಎಂಬ ಆರೋಪ ಇದೆಯಲ್ಲ?

ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕೆಲಸ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಯಾರು ಕಾರಣ ಎಂಬುದು ಜನರಿಗೆ ಗೊತ್ತಿದೆ. ಜಿಲ್ಲೆಯಲ್ಲಿ ನಡೆದ ಅಮಾಯಕರ ಹತ್ಯೆಯ ಹಿಂದೆ ಯಾರ ಕೈವಾಡವಿದೆ ಎಂಬುದೂ ಎಲ್ಲರಿಗೆ ಗೊತ್ತಾಗಿದೆ. ಟಿಪ್ಪುಸುಲ್ತಾನ್ ಜಯಂತಿ ಸಂದರ್ಭ ಕೋಮುಗಲಭೆ ನಡೆಸಿದ್ದು ಸಂಘಪರಿವಾರ. ಹತ್ಯೆ ಆರೋಪಿಗಳ ಪರ ಆರೆಸ್ಸೆಸ್ ಹಾಗೂ ಸಂಘಪರಿವಾರ ವಕಾಲತು ಮಾಡುತ್ತಿವೆ. ಕಾಂಗ್ರೆಸ್ ಎಂದಿಗೂ ಹತ್ಯೆ ಆರೋಪಿಗಳ ಪರ ವಕಾಲತು ಮಾಡಿಲ್ಲ. ಆರೆಸ್ಸೆಸ್, ಬಿಜೆಪಿ ಜಿಲ್ಲೆಯಲ್ಲಿ ಸಾಮರಸ್ಯವನ್ನು ಕದಡುವ ಕೆಲಸ ಮಾಡಿದರೆ, ಕಾಂಗ್ರೆಸ್ ಸಾಮರಸ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ. ನಮ್ಮಲ್ಲಿ ಯಾವೊಬ್ಬನೂ ಕೊಲೆ ಆರೋಪಿಗಳಿಲ್ಲ. ರಾಜೇಶ್ ನಾಕ್ ಬಳಿ ತುಂಬಾ ಕೊಲೆ ಆರೋಪಿಗಳಿದ್ದಾರೆ.

► ನಿಮ್ಮ ಚುನಾವಣಾ ಪ್ರಚಾರದ ಅಸ್ತ್ರ ಯಾವುದು?

ನಾನು ಹೆಗ್ಗಳಿಕೆಯ ಮಾತುಗಳನ್ನು ಆಡುವುದಿಲ್ಲ. ಅದು ನನಗೆ ಇಷ್ಟವೂ ಇಲ್ಲ. ನಾನು ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ತಾಲೂಕಿನ ಸಂಖ್ಯಾ ಬಲದ ಆಧಾರದ ಮೇಲೆಯೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮಾಡಿದ ಕೆಲಸಕ್ಕೆ ಜನರ ಬಳಿ ಹೋಗಿ ಕೂಲಿ ಕೇಳುತ್ತಿದ್ದೇನೆ. ಅಭಿವೃದ್ಧಿ ನೋಡಿ ನನಗೆ ಮತ ಕೊಡಿ ಎಂದು ಕೇಳುತ್ತಿದ್ದೇನೆ. ಜನರು ಈ ಬಾರಿಯೂ ನನಗೆ ಆಶೀರ್ವಾದ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೀಗ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿ ನನ್ನ ಬೆಂಬಲಕ್ಕಿದ್ದಾರೆ.

 ► ಪೂಜಾರಿಯನ್ನು ದ್ವೇಷಿಸುತ್ತಿದ್ದ ನೀವು ಬಿಲ್ಲವರ ಮತಕ್ಕಾಗಿ ಪೂಜಾರಿಯ ಮನೆಗೆ ಹೋಗಿದ್ದೀರಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದು ಸರಿಯೇ?

 ಜನಾರ್ದನ ಪೂಜಾರಿ ಪಕ್ಷದ ಹಿರಿಯರು. ಆಶೀರ್ವಾದ ಕೋರಿ ಅವರ ಮನೆ ಬಾಗಿಲಿಗೆ ಹೋಗಿದ್ದೇನೆ. ನನಗೆ ಅವರು ಮತ ಹಾಕಿದ್ದಾರೆ. ನಾನೂ ಅವರಿಗೆ ಮತ ಹಾಕಿದ್ದು, ಲೋಕಸಭಾ ಚುನಾವಣೆಯಲ್ಲಿ ಅವರಿಗಾಗಿ ದುಡಿದಿದ್ದೇನೆ. ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಬಿಜೆಪಿ ನಾಯಕರು ಪೂಜಾರಿ ಅವರಿಗೆ ಮತಹಾಕಿಲ್ಲ. ಈ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಬಿಜೆಪಿಯ ಮಾತಿಗೆ ಮೂರು ಕಾಸಿನ ಬೆಲೆಯೂ ಇಲ್ಲ.

► ಈ ಬಾರಿ ನಿಮ್ಮ ಸ್ಪರ್ಧೆ ಯಾರ ವಿರುದ್ಧ?

ನಾನು ಮೊದಲೇ ಹೇಳಿದ ಹಾಗೆ ನನ್ನ ಸ್ಪರ್ಧೆ ಮತೀಯವಾದಿಗಳ ವಿರುದ್ಧ. ಅದರಲ್ಲೂ ಮುಖ್ಯವಾಗಿ ಸಂಘಪರಿವಾರದ ವಿರುದ್ಧ. ಜಾತ್ಯತೀತ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ಜಾತ್ಯತೀತತೆಯೇ ತನ್ನ ಸೈದ್ಧಾಂತಿಕ ನಿಲುವು. ಕಾಂಗ್ರೆಸ್ ಜಾತ್ಯತೀತ ಸಿದ್ಧಾಂತವನ್ನು ಬಲವಾಗಿ ನಂಬಿದೆ. ಅದಕ್ಕಾಗಿಯೇ ನಾನು ಕಾಂಗ್ರೆಸನ್ನು ಆಯ್ಕೆ ಮಾಡಿಕೊಂಡಿದ್ದೇನೆ. ದೇಶ ಬಲಿಷ್ಠವಾಗಬೇಕಾದರೆ ಜಾತ್ಯತೀತ ಸಿದ್ಧಾಂತ ಬಲಿಷ್ಠವಾಗಬೇಕಿದೆ.

► ಸಾಮರಸ್ಯಕ್ಕೆ ತೊಡಕು ಉಂಟು ಮಾಡುವವರ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ?

ಚುನಾವಣಾ ಸಂದರ್ಭ ಜಿಲ್ಲೆಯ ಸಾಮರಸ್ಯಕ್ಕೆ ತೊಡಕು ಉಂಟು ಮಾಡುವವರ ಬಗ್ಗೆ ಈಗಾಗಲೆ ಪೊಲೀಸ್ ಹಾಗೂ ಚುನಾವಣಾ ಅಧಿಕಾರಿಗಳಿಗೆ ದೂರನ್ನು ನೀಡಿದ್ದೇವೆ. ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಅದನ್ನು ಶಾಂತಿಯುತವಾಗಿ ಬಗೆಹರಿಸಬೇಕು. ಹತ್ಯಾ ರಾಜಕೀಯವನ್ನು ಮಾಡುವುದು ಬಿಜೆಪಿ. ಕಲ್ಲಡ್ಕದ ಪ್ರಭಾಕರ ಭಟ್‌ರ ಆಪ್ತರಲ್ಲಿ ಮೂವರು ಕೊಲೆ ಆರೋಪಿಗಳಿದ್ದಾರೆ. ಬಿಜೆಪಿ ಹತ್ಯೆಯನ್ನು ತಮ್ಮ ರಾಜಕೀ ಯಕ್ಕಾಗಿ ಬಳಸುತ್ತಿವೆ.

► ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಮತ್ತು ಸಾಮರಸ್ಯಕ್ಕಾಗಿ ನಿಮ್ಮ ಕೊಡುಗೆ ಏನು?

ನನಗೆ ನೀಡಿದ್ದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಮೂಲಕ ಜನರ ಬಳಿಯೇ ಇದ್ದುಕೊಂಡು ಜಿಲ್ಲೆಯಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈ ಬಗ್ಗೆ ನನಗೆ ತೃಪ್ತಿಯಿದೆ. ಸಾಮಾಜಿಕ ನ್ಯಾಯ ಹಾಗೂ ಜಿಲ್ಲೆಯಲ್ಲಿ ಸಾಮರಸ್ಯ ಉಳಿಸುವಲ್ಲಿ ಶಕ್ತಿ ಮೀರಿ ಶ್ರಮಿಸಿದ್ದೇನೆ. ಫರಂಗಿಪೇಟೆಯಿಂದ ಮಾಣಿವರೆಗೆ ಹಮ್ಮಿಕೊಂಡ ಕಾಲ್ನಡಿಗೆ ಜಾಥಾ ಜಿಲ್ಲೆಯ ಸಾಮರಸ್ಯಕ್ಕೆ ಹೊಸ ಮುನ್ನುಡಿ ಬರೆದಿದೆ. ಇಷ್ಟೇ ಅಲ್ಲದೆ ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಗರಿಷ್ಠ ಮಟ್ಟದ ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದೇನೆ. 

► ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾಕೆ ನಿಮ್ಮ ಬೆಂಬಲ ಇದೆ ಎಂದ ಆರೋಪ ಇದೆ ?

ಕೆಲವೊಂದು ಒತ್ತಡಗಳ ನಡುವೆಯೂ ಸಾಕಷ್ಟು ಪರಿಶ್ರಮಪಟ್ಟು ಜಿಲ್ಲೆಯಲ್ಲಿ ಪ್ರತ್ಯೇಕ ಮರಳು ನೀತಿ ಜಾರಿ ಮಾಡಿಸುವಲ್ಲಿ ಯಶಸ್ವಿ ಆಗಿದ್ದೇನೆ. ಬಂಟ್ವಾಳದಲ್ಲಿ ಕೆಲವರು ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದಾರೆ. ಅದು ಮಾಫಿಯ ಅಲ್ಲ. ಪಾಲೆಮಾರ್ ಅವರೊಂದಿಗೆ ಸೇರಿಕೊಂಡು ಚರಣ್ ಜುಮಾದಿಗುಡ್ಡೆ ಎಂಬವ ಬಂಟ್ವಾಳದಲ್ಲಿ ಮರಳು ಮಾಫಿಯಾದಲ್ಲಿ ತೊಡಗಿಕೊಂಡಿದ್ದಾನೆ. ಇದೀಗ ರಾಜೇಶ್ ನಾಕ್ ಅವರ ರೈಟ್‌ಹ್ಯಾಂಡ್ ಆಗಿರುವ ಚರಣ್ ಜುಮಾದಿಗುಡ್ಡೆ ಜಿಲ್ಲೆಯಲ್ಲೇ ನಂ.1 ಮರಳು ಮಾಫಿಯ ನಡೆಸುತ್ತಿದ್ದಾನೆ. ನನ್ನ ವಿರುದ್ಧ ಆರೋಪ ಮಾಡುವವರು ಆ ಬಗ್ಗೆ ಮಾತನಾಡುತ್ತಿಲ್ಲ.

► ನೀವು ಧರ್ಮ ವಿರೋಧಿ ಎಂದು ಪ್ರತಿಪಕ್ಷದವರು ಹೇಳುತ್ತಾರೆ?

ನನ್ನನ್ನು ಯಾರೂ ಜಾತಿವಾದಿ, ಮತೀಯವಾದಿ ಎಂದು ಕರೆದಿಲ್ಲ. ಬಿಜೆಪಿ ಅವರು ನನ್ನನ್ನು ಹಿಂದೂ ವಿರೋಧಿ ಎಂದು ಕರೆದರೆ ಇನ್ನು ಕೆಲವರು ಮುಸ್ಲಿಮ್ ವಿರೋಧಿ ಎಂದು ಕರೆಯುತ್ತಾರೆ. ಇದರ ಅರ್ಥ ನಾನು ಜಾತ್ಯತೀತ ಎಂದಲ್ಲವೇ? ನಾನು ನನ್ನ ಧರ್ಮವನ್ನು ಪ್ರೀತಿಸುವ ಮೂಲಕ ಇನ್ನೊಂದು ಧರ್ಮವನ್ನು ಗೌರವಿಸುತ್ತೇನೆ. ನಾವು ಯಾವುದೇ ಕಾರಣಕ್ಕೂ ಜನಾಂಗೀಯ ಘರ್ಷಣೆಗೆ ಕಾರಣವಾಗಬಾರದು. ಅದು ಇಡೀ ದೇಶಕ್ಕೆ ಅಪಾಯಕಾರಿಯಾಗಿದೆ.

► ಪ್ರಚಾರದ ವೇಳೆ ಮತದಾರರ ಸ್ಪಂದನೆ ಹೇಗಿದೆ?

ಗ್ರಾಮ, ಬೂತ್ ಮಟ್ಟದ ಪ್ರಚಾರ ವೇಳೆ ಮತದಾರರಿಂದ ಉತ್ತಮ ಬೆಂಬಲ ಸಿಗುತ್ತಿವೆ. ನೀವು ತುಂಬಾ ಕೆಲಸ ಮಾಡಿದ್ದೀರಿ ಸರ್ ಎನ್ನುತ್ತಿದ್ದಾರೆ. ಕೆಲವೊಂದು ಸಣ್ಣಪುಟ್ಟ ಕೆಲಸಗಳು ಬಾಕಿಯಿದೆ. ಅದನ್ನು ಮಾಡಿಕೊಡುವಂತೆ ಗ್ರಾಮಸ್ಥರು ನನ್ನಲ್ಲಿ ಕೇಳಿಕೊಂಡಿದ್ದಾರೆ. ಹೆಚ್ಚಿನ ಅನುದಾನವನ್ನು ಮೀಸಲಿಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ರಮಾನಾಥ ರೈ ಎಲ್ಲ ಅನುದಾನವನ್ನು ಬಂಟ್ವಾಳಕ್ಕೆ ಮೀಸಲಿಟ್ಟಿದ್ದಾರೆ ಎಂದು ಹೇಳುವವರು ಇದೀಗ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ.

► ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅಭಿವೃದ್ಧಿ ಕಾರ್ಯ ಮಾಡಿದ್ದೀರಾ?

 ನಾನು ಎಂದಿಗೂ ಚುನಾವಣೆಯ ದೃಷ್ಟಿಯಿಂದ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರ ಮೇಲಿನ ಸಾಮಾಜಿಕ ಕಳಕಳಿಯಿಂದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಂದೆಯೂ ಎಲ್ಲ ಕ್ಷೇತ್ರಗಳ ಬಗ್ಗೆ ಗಮನ ಹರಿಸಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಯವರು ಅಡ್ಡಿಪಡಿಸುವ ಮೂಲಕ ಅಭಿವೃದ್ಧಿಗೆ ತೊಡಕು ಉಂಟುಮಾಡುತ್ತಿದ್ದರು. ಅದೆನ್ನೆಲ್ಲ ಮೀರಿ ಸಾಕಷ್ಟು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇದನ್ನು ನೋಡಿ ಸಹಿಸಲು ಸಾಧ್ಯವಾಗದ ಬಿಜೆಪಿಯವರು ನೀರಿಲ್ಲದ ಮೀನಿನಂತೆ ಚಡಪಡಿಸುತ್ತಿದ್ದಾರೆ.

► ರಾಹುಲ್ ಗಾಂಧಿ ಭೇಟಿಯ ಬಳಿಕ ಮತದಾರರ ಪ್ರತಿಕ್ರಿಯೆ ಹೇಗಿದೆ?

ರಾಹುಲ್ ಗಾಂಧಿ ಬಂಟ್ವಾಳಕ್ಕೆ ಭೇಟಿ ನೀಡಿದ್ದು ಬಹಳ ಸಂತೋಷದ ವಿಚಾರ. ಕಳೆದ ಬಾರಿಯ ಚುನಾವಣೆಯ ಸಂದರ್ಭ ಮಂಗಳೂರಿನಲ್ಲಿ ಸಾರ್ವಜನಿಕ ಸಮಾವೇಶ ಆಯೋಜಿಸಿದ್ದೆವು. ಈ ಬಾರಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಇಂಗಿತಕ್ಕೆ ಒತ್ತು ನೀಡಿ ರಾಹುಲ್ ಗಾಂಧಿ ಬಂಟ್ವಾಳಕ್ಕೆ ಭೇಟಿ ನೀಡಿದ್ದಾರೆ. ಮಧ್ಯಾಹ್ನದ ಸುಡುಬಿಸಿಲು ಲೆಕ್ಕಿಸದೇ ಸ್ವಇಚ್ಛೆಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದರಿಂದ ಪಕ್ಷ ಇನ್ನಷ್ಟು ಬಲವರ್ಧನೆಯಾಗಿದೆ.

► ಪಕ್ಷದ ಪ್ರಣಾಳಿಕೆಯಲ್ಲಿ ಹೊಸ ಭರವಸೆ ಏನಿದೆ?

ಎಲ್ಲ ವರ್ಗದ ಜನರ ಮಾತುಗಳನ್ನು ಕ್ರೋಡೀಕರಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಜನರ ಮಾತುಗಳೇ ನಮ್ಮ ಪ್ರಣಾಳಿಕೆ. ಪ್ರಣಾಳಿಕೆಯಲ್ಲಿರುವ ವಿಷಯಗಳು ಜನರು ನಂಬುವಂತಿರಬೇಕು. ಈ ಹಿಂದೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.95ರಷ್ಟು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಪ್ರಣಾಳಿಕೆಯಲ್ಲಿ ಇಲ್ಲದ ಅದೆಷ್ಟೋ ಅಭಿವೃದ್ಧಿ ಹಾಗೂ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಪ್ರಣಾಳಿಕೆಯನ್ನು ಕೈಯಲ್ಲಿ ಹಿಡಿಕೊಂಡು ಬಜೆಟ್ ಸಿದ್ಧಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

► ಬಂಟ್ವಾಳದಲ್ಲಿ ಬಿಜೆಪಿ ಗೆದ್ದರೆ ಕರ್ನಾಟಕವೇ ಗೆದ್ದಂತೆ ಎಂದು ದ.ಕ. ಸಂಸದ ಹೇಳಲು ಕಾರಣವೇನು?

ಇಂತಹ ಹೇಳಿಕೆಯನ್ನು ನೀಡುವ ಮೂಲಕ ಬಿಜೆಪಿ ನನ್ನನ್ನು ಶಿಖರಕ್ಕೇರಿಸುತ್ತಿದೆ. ಇದರ ಮೊದಲು ಎರಡು ಸಲ ಇಂತಹ ಬೇರೆ ಬೇರೆ ಹೇಳಿಕೆ ನೀಡುವ ಮೂಲಕ ನನಗೆ ತುಂಬಾ ಪ್ರಚಾರ ನೀಡಿದ್ದಾರೆ.

►ರಾಜ್ಯದಲ್ಲಿ ಎಷ್ಟು ಕ್ಷೇತ್ರವನ್ನು ಗೆಲ್ಲುವ ಭರವಸೆ ಇದೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಜನರು ಹೆಚ್ಚಿನ ನಂಬಿಕೆಯಿಟ್ಟಿದ್ದಾರೆ. ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ವಂಚಿತ ಜನರ ಧ್ವನಿಯಾಗಿದ್ದಾರೆ. ಖಂಡಿತವಾಗಿ ಈ ಬಾರಿಯೂ ಕಾಂಗ್ರೆಸ್ ನಿರೀಕ್ಷೆಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸಲಿದೆ.

Full View

Writer - ಸಂದರ್ಶನ: ರಹ್ಮಾನ್ ತಲಪಾಡಿ

contributor

Editor - ಸಂದರ್ಶನ: ರಹ್ಮಾನ್ ತಲಪಾಡಿ

contributor

Similar News