×
Ad

ಅಲ್ಪಸಂಖ್ಯಾತರ ಮತ ಧ್ರುವೀಕರಣಕ್ಕಾಗಿ ಅಮಿತ್ ಶಾ-ಕುಮಾರಸ್ವಾಮಿ ಭೇಟಿ ಬಗ್ಗೆ ಸುಳ್ಳು ಆರೋಪ: ಶೋಭಾ ಕರಂದ್ಲಾಜೆ

Update: 2018-04-30 18:45 IST

ಬೆಂಗಳೂರು, ಎ. 30: ಅಲ್ಪಸಂಖ್ಯಾತರ ಮತಗಳ ಧ್ರುವೀಕರಣಕ್ಕಾಗಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಭೇಟಿ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ದೂರಿದ್ದಾರೆ.

ಸೋಮವಾರ ಮಲ್ಲೇಶ್ವರಂನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ಧ. ರಾಷ್ಟ್ರೀಯ ಹಿತಾಸಕ್ತಿ ಸೇರಿ ಯಾವುದೇ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಕಾಂಗ್ರೆಸ್ ಹಿಂಜರಿಯುವುದಿಲ್ಲ ಎಂದು ಟೀಕಿಸಿದರು.

ಎ.13ರಂದು ಅಮಿತ್ ಶಾ ಮತ್ತು ಕುಮಾರಸ್ವಾಮಿ ಭೇಟಿಯಾಗಿದ್ದಾರೆಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆದರೆ, ಅಂದು ಅಮಿತ್ ಶಾ ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ ಪ್ರವಾಸದಲ್ಲಿದ್ದರು. ಇದು ಗುಪ್ತಚರ ಇಲಾಖೆಗೂ ಗೊತ್ತು. ಭೇಟಿ ನಿಜವೇ ಆಗಿದ್ದರೆ, ವರದಿಯನ್ನು ತರಿಸಿಕೊಂಡು ಸತ್ಯ ಬಹಿರಂಗ ಪಡಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ನಂತರ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮಾತುಕತೆ ನಡೆಸಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆದರೆ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಕಾಂಗ್ರೆಸ್ ಪಕ್ಷ. ಬಿಬಿಎಂಪಿಯಲ್ಲಿ ಅಧಿಕಾರಕ್ಕಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎರಡೂ ಪಕ್ಷಗಳು ಸೇರಿ ಬಿಬಿಎಂಪಿಯನ್ನು ಲೂಟಿ ಮಾಡುತ್ತಿವೆ ಎಂದು ಲೇವಡಿ ಮಾಡಿದರು.

ಕೋಮುವಾದಿ, ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರ ಮೇಲೆ ಎನ್‌ಐಎ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿತ್ತು. ಅಲ್ಪಸಂಖ್ಯಾತರ ಓಲೈಕೆ, ಓಟಿಗಾಗಿ ಇಂತಹ ಸಂಘಟನೆಗಳಿಗೆ ಕುಮ್ಮಕ್ಕು ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಈ ಮೈತ್ರಿ ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ, ಈ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ಕಾಂಗ್ರೆಸ್ ಪರವಾಗಿ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ. ಜನರು ಇವೆಲ್ಲವನ್ನು ಗಮನಿಸುತ್ತಿದ್ದು ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆಂದು ಅವರು ಎಚ್ಚರಿಕೆ ನೀಡಿದರು.

ವರುಣಾದಿಂದ ಚಾಮುಂಡೇಶ್ವರಿಗೆ ಕ್ಷೇತ್ರ ಬದಲಿಸಿದ ಸಿದ್ದರಾಮಯ್ಯ ಅಲ್ಲಿಯೂ ಗೆಲ್ಲಲು ಅಸಾಧ್ಯವೆನಿಸಿ, ಬಾದಾಮಿಯಲ್ಲೂ ಸ್ಪರ್ಧಿಸಿದ್ದಾರೆ. ಅಲ್ಲಿಯೂ ಸೋಲಿನ ಭಯ ಅವರನ್ನು ಆವರಿಸಿದೆ. ಇದರಿಂದ ಏಕಾಏಕಿ ಹತಾಶರಾಗಿರುವ ಸಿದ್ದರಾಮಯ್ಯ ವಿಲ-ವಿಲ ಒದ್ದಾಡುತ್ತಿದ್ದು ಕೀಳುಮಟ್ಟದ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರಣಾಳಿಕೆ 2-3ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಅದರ ಅಗತ್ಯವೂ ಇಲ್ಲ. ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ವಕ್ತಾರರಾದ ಡಾ.ವಾಮನ್ ಆಚಾರ್ಯ, ಅನ್ವರ್ ಮಾಣಿಪ್ಪಾಡಿ, ಮಂಜುಳಾ ಹಾಜರಿದ್ದರು.

‘ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲರಿಗೂ ಶುಭವಾಗಲೆಂದು ಹಾರೈಸುತ್ತೇನೆ. ಹದಿನೆಂಟು ವರ್ಷ ದಾಟಿ ಮತದಾನದ ಹಕ್ಕು ಪಡೆಯಲಿರುವ ಎಲ್ಲ ವಿದ್ಯಾರ್ಥಿಗಳು ದೇಶದ ಪ್ರಜಾಪ್ರಭುತ್ವದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ’
-ಶೋಭಾ ಕರಂದ್ಲಾಜೆ ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News