ಅಮಿತ್ ಶಾ ಹಿಂದೂ ಅಲ್ಲ ಎನ್ನುವ ಸತ್ಯವನ್ನು ಬಿಜೆಪಿಗರು ಎಂದಿಗೂ ಒಪ್ಪುವುದಿಲ್ಲ: ಸಿದ್ದರಾಮಯ್ಯ

Update: 2018-04-30 13:40 GMT

ವಿಜಯಪುರ, ಎ. 30: ‘ನನಗೆ ಮರಾಠಿ ಬರಲ್ಲ ಕ್ಷಮಿಸಿ ಎಂದು ಬೆಳಗಾವಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಾನು ಹೇಳಿದ್ದು, ಇದರಲ್ಲಿ ತಪ್ಪೇನಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಪ್ರತಾಪ ಸಿಂಹರನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ಕನ್ನಡಿಗ, ಕನ್ನಡಕ್ಕೆ ಬದ್ಧತೆ ಇಟ್ಟುಕೊಂಡಿರುವ ನಾಯಕ, ನನ್ನಂತಹ ಬದ್ಧತೆಯುಳ್ಳ ನಾಯಕ ಸಿಗುವುದು ಕಷ್ಟ. ನನ್ನ ಬದ್ಧತೆ ಬಗ್ಗೆ ಮಾತನಾಡುವವರು, ಅವರು ಹಿಂದಿ ವಿರೋಧಿ ಅಂತ ಹೇಳಲಿ ಎಂದು ಸವಾಲು ಹಾಕಿದರು.

ಬಿಜೆಪಿ ಸತ್ಯ ಒಪ್ಪಿಕೊಳ್ಳುವುದಿಲ್ಲ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೈನ ಸಮುದಾಯಕ್ಕೆ ಸೇರಿದ್ದು, ಹಿಂದೂ ಎಂದು ಹೇಳುತ್ತಾರೆ. ಬಿಜೆಪಿಯವರು ಸತ್ಯವನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ, ಜೆಡಿಎಸ್ ಈ ಬಾರಿ ಗೆಲ್ಲುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂಬ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾನು ಐದು ಬಾರಿ ಆಯ್ಕೆಯಾಗಿದ್ದು, ಆಗ ಈ ಅಮಿತ್ ಶಾ ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಬಿಎಸ್‌ವೈ ಪುತ್ರ ವಿಜಯೇಂದ್ರಗೆ ಅನಂತಕುಮಾರ್ ಸೇರಿದಂತೆ ಇನ್ನಿತರರು ಟಿಕೆಟ್ ತಪ್ಪಿಸಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ ಎಂದ ಅವರು, ನಾನು ಮತ್ತು ಶಾಸಕ ಝಮೀರ್ ಅಹ್ಮದ್ ಖಾನ್ ಎಲ್ಲಿಗೂ ಹೋಗಿಲ್ಲ. ಪಾಕಿಸ್ತಾನಕ್ಕೆ ವೀಸಾ ಇಲ್ಲದೆ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News