ಕಾಂಗ್ರೆಸ್‌ಗೆ ಮತ ನೀಡಲು ಎನ್‌ಆರ್‌ಐಗಳ ಕುಟುಂಬದವರಿಗೆ ಸ್ಯಾಮ್ ಪಿತ್ರೋಡಾ ಮನವಿ

Update: 2018-04-30 14:12 GMT

ಬೆಂಗಳೂರು, ಎ.30: ಕರ್ನಾಟಕದ ಲಕ್ಷಾಂತರ ಜನರು ವಿದೇಶಗಳಲ್ಲಿ ನೆಲೆಸಿದ್ದು, ಇವರೆಲ್ಲರನ್ನೂ ಭೇಟಿಯಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಲು ಕರ್ನಾಟಕದಲ್ಲಿ ವಾಸಿಸುತ್ತಿರುವ ನಿಮ್ಮ ಕುಟುಂಬದವರಿಗೆ ಹೇಳಿ ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ಪ್ರಧಾನ ಮಂತ್ರಿಗಳ ಮಾಜಿ ಸಲಹೆಗಾರ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಸೋಮವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಡವರು, ಹಿಂದುಳಿದವರು, ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದೆ. ಇದರ ಸದುಪಯೋಗವನ್ನೆ ಪಡೆದುಕೊಂಡು ಸಾಕಷ್ಟು ಜನರು ವಿದೇಶಗಳಲ್ಲಿ ನೆಲೆಸಿ ಅನಿವಾಸಿ ಭಾರತೀಯರಾಗಿದ್ದಾರೆ. ಹೀಗಾಗಿ, ಇವರೆಲ್ಲರನ್ನೂ ಭೇಟಿಯಾಗಿ ಕರ್ನಾಟಕದಲ್ಲಿ ವಾಸಿಸುತ್ತಿರುವ ನಿಮ್ಮ ಕುಟುಂಬದವರಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಹೇಳಿ ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ವಿದೇಶಗಳಲ್ಲಿ ಕರ್ನಾಟಕಕ್ಕೆ ಉತ್ತಮ ಹೆಸರಿದ್ದು, ಸಾಕಷ್ಟು ವಿದೇಶಿ ಹೂಡಿಕೆದಾರರು ಹಾಗೂ ಅನಿವಾಸಿ ಭಾರತೀಯರು ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರ, ಶಿಕ್ಷಣ, ಕಬ್ಬಿಣ ಉತ್ಪಾದನೆ ಕ್ಷೇತ್ರ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಕೋಟ್ಯಂತರ ರೂ.ಬಂಡವಾಳವನ್ನು ಹೂಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ, ಸಮಪಾಲು ಸಮಬಾಳು, ಜಾತ್ಯತೀತ ಸಿದ್ಧಾಂತಗಳನ್ನು ರೂಢಿಸಿಕೊಂಡಿದೆ. ಆದರೆ, ಬಿಜೆಪಿಗೆ ಈ ಯಾವ ಸಿದ್ಧಾಂತವೂ ಇಲ್ಲವಾಗಿದ್ದು, ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನೆ ನೀಡಿ ಗೆದ್ದು ಬರುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಎಫ್‌ಎಸಿಸಿ, ಎಫ್‌ಸಿಸಿಪಿ ನಿರ್ದೇಶಕ ಡಾ.ದಯಾನಂದ ನಾಯಕ್ ಮಾತನಾಡಿ, ತಾವು ಚಿಕ್ಕವರಾಗಿದ್ದಾಗ ಕಾಂಗ್ರೆಸ್ ಸರಕಾರ ನೀಡಿದ ಆರ್ಥಿಕ ಸಹಾಯದಿಂದಾಗಿ ಹೆಚ್ಚಿನ ಶಿಕ್ಷಣವನ್ನು ಓದಿ ವಿದೇಶದಲ್ಲಿ ವಾಸವಾಗಿ ಬದುಕು ಕಟ್ಟಿಕೊಂಡೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಈ ದೇಶದ ಅಧ್ಯಕ್ಷರಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಮಧು, ಎಐಸಿಸಿ ಸಂಜೀವ್ ಸಿಂಗ್,  ಆರತಿಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News