×
Ad

19.69 ಕೋಟಿ ರೂ.ನಗದು, 4.81 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ: ಸಂಜೀವ್ ಕುಮಾರ್

Update: 2018-04-30 20:40 IST

ಬೆಂಗಳೂರು, ಎ.30: ಆದಾಯ ಇಲಾಖೆಯ ಕರ್ನಾಟಕದ ತನಿಖಾ ದಳವು ಮುಂಬರುವ ವಿಧಾನಸಭಾ ಚುನಾವಣೆಯ ಅಂಗವಾಗಿ ವಿವಿಧ ಕಡೆ ನಡೆಸಿದ ಕಾರ್ಯಾಚರಣೆಯಲ್ಲಿ 19.69 ಕೋಟಿ ರೂ. ನಗದು ಮತ್ತು ಸಕಾರಣ ನೀಡಲು ವಿಫಲವಾದ ಪ್ರಕರಣಗಳಲ್ಲಿ ಒಟ್ಟು 4.81 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.

ಸೋಮವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2013ರ ವಿಧಾನಸಭಾ ಚುನಾವಣೆಯ ವೇಳೆ ನಡೆಸಿದ ಇದೇ ಕಾರ್ಯಾಚರಣೆ ವೇಳೆಯಲ್ಲಿ 4.97 ಕೋಟಿ ರೂ.ನಗದು ಮತ್ತು 3.41 ಕೋಟಿರೂ.ಗಳ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದರು.

ಮತದಾರರಿಗೆ ಹಂಚಲು ಉದ್ದೇಶಿಸಿದ್ದ ನಗದು, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ರಾಜ್ಯಾದ್ಯಂತ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಅಲ್ಲದೆ ಅಗತ್ಯ ಸಿಬ್ಬಂದಿ ಮತ್ತು ಗಸ್ತಿಗಾಗಿ ಸೂಕ್ತ ಸಂಖ್ಯೆಯಲ್ಲಿ ವಾಹನಗಳನ್ನು ನೀಡಿರುವುದರಿಂದ ಪ್ರತಿ ಜಿಲ್ಲೆಯಲ್ಲಿ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಹಲವು ರೀತಿಯ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಅವರು ತಿಳಿಸಿದರು.

ಮೈಸೂರು ಭಾಗದಲ್ಲಿ ಗುತ್ತಿಗೆದಾರರು 500 ರೂ.ಮತ್ತು 2 ಸಾವಿರ ರೂ.ಮೌಲ್ಯದ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿತ್ತು. ಈ ಮಾಹಿತಿ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ತನಿಖಾ ದಳವು ಎ.24ರಿಂದ 26 ರವರೆಗೆ ಗುತ್ತಿಗೆದಾರರ ಮೇಲೆ ನಡೆಸಿದ ಕಾರ್ಯಾಚರಣೆಯಲ್ಲಿ 6.76 ಕೋಟಿ ರೂ. ಮೊತ್ತದ ನಗದನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.

ಚುನಾವಣೆಯ ಹಿನ್ನೆಲೆಯಲ್ಲಿ ಸರಕಾರಿ ಗುತ್ತಿಗೆದಾರರು ಅಧಿಕ ಪ್ರಮಾಣದಲ್ಲಿ ನಗದನ್ನು ಸಂಗ್ರಹಿಸುತ್ತಿದ್ದಾರೆ ಎನ್ನುವ ಖಚಿತ ಗುಪ್ತಚರ ವರದಿಯ ಮೇರೆಗೆ ಬೆಂಗಳೂರು, ದಾವಣಗೆರೆ ಮತ್ತು ಮೈಸೂರಿನ ಗುತ್ತಿಗೆದಾರರ ಮೇಲೆ ಎ.26ರಿಂದ 28ರವರೆಗೆ ತಪಾಸಣೆ ನಡೆಸಲಾಗಿತ್ತು ಎಂದು ಸಂಜೀವ್‌ಕುಮಾರ್ ತಿಳಿಸಿದರು. ದಾಖಲಾತಿ ಇಲ್ಲದೆ 4.08 ಕೋಟಿರೂ.ನಗದು ಮತ್ತು 2.79 ಕೋಟಿರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ದಾಳಿ ನಡೆಸಿದ ಗುತ್ತಿಗೆದಾರರಿಗೆ ಸೇರಿದ ವಾಹನದಲ್ಲಿ ಸಾಗಿಸುತ್ತಿದ್ದ 1.2 ಕೋಟಿರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದ್ದ ಮಾಹಿತಿಗಳನ್ನು ಪರಿಶೀಲನೆಗೆ ಒಳಪಡಿಸಿದ ಹೆಚ್ಚಿನ ಮೊತ್ತದ ಖರೀದಿ, ನಕಲಿ ಉಪಗುತ್ತಿಗೆದಾರರು ಮತ್ತು ಕಾರ್ಮಿಕರಿಗೆ ಹಣಪಾವತಿ ಯಾಗಿದ್ದರ ಜೊತೆಗೆ ಲೆಕ್ಕವಿಲ್ಲದೆ ನಗದಿನ ರೂಪದಲ್ಲಿ ಹಣ ಸಂದಾಯ ಮಾಡಲಾಗಿತ್ತು. ವಿಚಾರಣೆಯ ವೇಳೆ 74.39 ಕೋಟಿ ರೂ.ಗಳ ಹೆಚ್ಚುವರಿ ಆದಾಯವನ್ನು ಒಪ್ಪಿಕೊಂಡಿದ್ದರು ಎಂದು ಸಂಜೀವ್‌ಕುಮಾರ್ ಹೇಳಿದರು.

ವ್ಯಕ್ತಿಯೊಬ್ಬರು ನಿರ್ದಿಷ್ಟ ಪಕ್ಷವೊಂದರ ಕೆಲವು ಅಭ್ಯರ್ಥಿಗಳಿಗೆ ಮತ್ತು ದೂರದ ಜಿಲ್ಲೆಗಳಲ್ಲಿ ಚುನವಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದವರಿಗೆ ನಗದು ಪೂರೈಕೆ ಮಾಡುತ್ತಿರುವುದು ಖಚಿತಪಟ್ಟಿತ್ತು. ಈತ ಆದಾಯ ತೆರಿಗೆ ಕಟ್ಟದೇ ತನ್ನ ಸಮುದಾಯದವರಿಂದ ಅಧಿಕ ಲಾಭದ ಆಮಿಷ ತೋರಿಸಿ ಹೆಚ್ಚಿನ ಮೊತ್ತವನ್ನು ಸಂಗ್ರಹಿಸುತ್ತಿದ್ದ, ಅಲ್ಲದೆ ಸ್ಥಳೀಯ ರಾಜಕಾರಣಿಗಳು ಈತನನ್ನು ಓಲೈಸುತ್ತಿದ್ದರು ಎಂದು ಅವರು ತಿಳಿಸಿದರು.

ಈ ಮಾಹಿತಿಯ ಆಧಾರದ ಮೇಲೆ ಅವರ ಕಚೇರಿ, ಮನೆಯಲ್ಲಿ ತಪಾಸಣೆ ನಡೆಸಲಾಯಿತು. 32 ಗಂಟೆಗಳ ಕಾಲ ನಡೆದ ತನಿಖೆಯಲ್ಲಿ 3.18 ಕೋಟಿ ರೂ.ನಗದನ್ನು ವಶಪಡಿಸಿಕೊಳ್ಳಲಾಯಿತು. ಪ್ರಮುಖ ವ್ಯಕ್ತಿಯೊಬ್ಬರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 2 ಕೋಟಿ ರೂ.ನಗದನ್ನು ಇಲಾಖೆ ಸಂಪೂರ್ಣ ತನಿಖೆಯ ನಂತರ ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.

ಪಕ್ಷವೊಂದರ ಅಭ್ಯರ್ಥಿ ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ಪರಿಶೀಲನೆ ನಡೆಸಿದಾಗ 2012-13ರ ನಂತರದ ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿಲ್ಲದಿರುವುದು ಕಂಡು ಬಂದಿತು. ಆದರೆ, ಪ್ರಮಾಣಪತ್ರದಲ್ಲಿ ಆದಾಯವನ್ನು ಘೋಷಿಸಿಕೊಂಡಿದ್ದು, ಆದಾಯ ತೆರಿಗೆಯನ್ನು ಪಾತಿಸಿರಲಿಲ್ಲ ಎಂದು ಅವರು ತಿಳಿಸಿದರು.
ಅವರ ಪತ್ನಿ ಘೋಷಿಸಿಕೊಂಡಿರುವ ಆದಾಯಕ್ಕೂ ಹಾಗೂ ಆದಾಯ ತೆರಿಗೆ ರಿಟ್ರನ್ಸ್ ಫೈಲ್ ಮಾಡಿರುವುದರಲ್ಲಿ ಇರುವ ಮೊತ್ತಕ್ಕೂ ಗಣನೀಯ ವ್ಯತ್ಯಾಸಗಳಿವೆ. ಕುಟುಂಬದ ಸದಸ್ಯರ ಹೆಸರಿನಲ್ಲಿ ಅಂದಾಜು 18 ಕೋಟಿರೂ.ಗಳ ಆದಾಯವಿದೆ ಎಂದು ಘೋಷಿಸಿಕೊಂಡಿದ್ದರು. ಆದರೆ, 191 ಕೋಟಿ ರೂ.ಮೌಲ್ಯದ ಆಸ್ತಿ ಇದ್ದು, ಈ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಸಂಜೀವ್‌ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News