ಬಿಎಸ್‌ವೈ ನಾಲಿಗೆ ಮೇಲಿನ ವಿಷ ತೆಗೆದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ, ಎ. 30: ಮಗುವಿಗೆ ಹೊಟ್ಟೆಯೊಳಗೆ ವಿಷ ಹೋಗಬಾರದೆಂದು ಹುಟ್ಟಿದ ಕೂಡಲೇ ನಾಲಿಗೆ ಮೇಲಿನ ವಿಷ ತೆಗೆಯುತ್ತಾರೆ. ಆದರೆ, ಯಡಿಯೂರಪ್ಪ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿರಲಿಕ್ಕಿಲ್ಲ. ಹೀಗಾಗಿ ಅವರು ಹೋದಲ್ಲೆಲ್ಲ ಸುಳ್ಳು ಹೇಳುತ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಸೋಮವಾರ ಅಫ್ಜಲ್‌ಪುರ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಯಡಿಯೂರಪ್ಪ ಅತ್ಯಂತ ಕೀಳಾಗಿ ಮಾತನಾಡುತ್ತಿದ್ದಾರೆ. ಆರೆಸ್ಸೆಸ್ ಹಿನ್ನೆಲೆಯುಳ್ಳವರ ಬಾಯಲ್ಲಿ ಇಂತಹ ಮಾತು. ಇದೇನಾ ಶಿಸ್ತಿನ ಪಕ್ಷ ಎಂದು ಪ್ರಶ್ನಿಸಿದರು.
ಅಹಿಂದ ವರ್ಗಗಳ ಬಗ್ಗೆ ಕಾಳಜಿಯುಳ್ಳ ಏಕೈಕ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ಎಲ್ಲರಿಗೂ ಸೌಲಭ್ಯಗಳನ್ನು ನೀಡಲಿದ್ದಾರೆ ಎಂದ ಅವರು, ಸಚಿವ ಸ್ಥಾನ ಸಿಕ್ಕಿಲ್ಲ ಎಂದು ನನ್ನ ಮೇಲೆ ಸಿಟ್ಟು ಮಾಡಿಕೊಂಡರು ಮಾಲೀಕಯ್ಯ ಗುತ್ತೇದಾರ್. ಆದರೆ, ಸಿದ್ದರಾಮಯ್ಯನವರ ಮೇಲೆ ಅವರಿಗೆ ಸಿಟ್ಟೇಕೆ? ಎಂದು ಟೀಕಿಸಿದರು.
ಬಿಜೆಪಿಯವರು ಕುತಂತ್ರ ರಾಜಕಾರಣ ಮಾಡುತ್ತಿದ್ದು, ಅಂಬೇಡ್ಕರ್ ನೀಡಿದ ಹಕ್ಕುಗಳನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಮೋದಿ, ಅಮಿತ್ ಶಾ ಹೋದಲ್ಲೆಲ್ಲ ಸುಳ್ಳು ಹೇಳುತ್ತಿದ್ದಾರೆ. ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ.ಹಾಕ್ತೀನಿ ಅಂತ ಹೇಳಿದ್ದ ಮೋದಿ ನಯಾಪೈಸೆಯನ್ನು ನೀಡಲಿಲ್ಲ. ಆದರೆ, ಸಿದ್ದರಾಮಯ್ಯ ರೈತರ ಸಾಲಮನ್ನಾ ಮಾಡಿದ್ದಾರೆ. ಆದರೆ, ಕೇಂದ್ರ ಈ ಬಗ್ಗೆ ಮಾತೇ ಆಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.