ನಾಲ್ವರು ಅಧಿಕಾರಿಗಳ ನಿವಾಸಗಳ ಮೇಲೆ ಎಸಿಬಿ ದಾಳಿ: ಅಪಾರ ಮೊತ್ತದ ಅಕ್ರಮ ಹಣ-ಆಸ್ತಿ ಪತ್ತೆ
ಬೆಂಗಳೂರು, ಎ. 30: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಸೇರಿದಂತೆ ಹತ್ತು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಅಪಾರ ಮೊತ್ತದ ಅಕ್ರಮ ಆಸ್ತಿ-ಹಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ, ಮುಧೋಳ ತಾಲೂಕು ಕಂದಾಯ ನಿರೀಕ್ಷಕ ಸಂಗಪ್ಪ ಸೂದಿ, ಚಿತ್ರದುರ್ಗ ತಾ.ಪಂ. ಅಧಿಕಾರಿ ಬಿ.ಲಕ್ಷ್ಮಿಪತಿ, ಕೋಲಾರ ಜಿಲ್ಲಾಧಿಕಾರಿ ಕಚೇರಿ ಶಿರಸ್ತೆದಾರ ಮುನಿವೆಂಕಟಪ್ಪ ಹಾಗೂ ಮಾಗಡಿ ಸೋಲೂರಿನ ಅಧಿಕಾರಿ ಗಣೇಶ ಮೂರ್ತಿ ಎಸಿಬಿ ದಾಳಿಗೊಳಗಾದ ಅಧಿಕಾರಿಗಳು ಎಂದು ತಿಳಿಸಲಾಗಿದೆ.
ಸಂಗಪ್ಪ ಸೂದಿ: ಇವರ ಬಳಿ ಎರಡು ವಾಸದ ಮನೆ, 2 ನಿವೇಶನಗಳು, ಏಳು ಎಕರೆ ಜಮೀನು, ಚಿನ್ನ-ಬೆಳ್ಳಿ, ಒಂದು ಕಾರು, ಎರಡು ಬೈಕ್, 92 ಸಾವಿರ ರೂ.ನಗದು, 5 ಲಕ್ಷ ರೂ.ಮೊತ್ತದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಎಸಿಬಿ ತಿಳಿಸಿದೆ.
ಬಿ.ಲಕ್ಷ್ಮಿಪತಿ: ಇವರಿಗೆ ಒಂದು ವಾಸದ ಮನೆ, ಆರು ನಿವೇಶನಗಳು, 15 ಎಕರೆ ಕೃಷಿ ಭೂಮಿ, ಚಿನ್ನ-ಬೆಳ್ಳಿ, ನಾಲ್ಕು ಕಾರುಗಳು, ಒಂದು ಟ್ರಾಕ್ಟರ್, ಮೂರು ಬೈಕ್ ಹಾಗೂ 1.13 ಲಕ್ಷ ರೂ.ನಗದು ಸೇರಿದಂತೆ ಅಪಾರ ಮೊತ್ತದ ಆಸ್ತಿ ಪತ್ತೆಯಾಗಿದೆ ಎಂದು ಎಂದು ಭ್ರಷ್ಟಾಚಾರ ನಿಗ್ರಹ ದಳ ತಿಳಿಸಿದೆ.
ಮುನಿವೆಂಕಟಪ್ಪ: ಎರಡು ಮನೆ, 38 ಎಕರೆ ಭೂಮಿ, ಚಿನ್ನ-ಬೆಳ್ಳಿ, ಎರಡು ಕಾರು, ಒಂದು ಟ್ರಾಕ್ಟರ್, ಒಂದು ವಾಟರ್ ಟ್ಯಾಂಕರ್, ಎರಡು ಬೈಕ್, 12 ಲಕ್ಷ ಗೃಹೋಪಯೋಗಿ ವಸ್ತುಗಳು, 2.21 ಲಕ್ಷ ರೂ.ನಗದು, ವಿವಿಧ ಬ್ಯಾಂಕು ಖಾತೆಗಳಲ್ಲಿ 1.66ಲಕ್ಷ ರೂ.ನಗದು ಪತ್ತೆಯಾಗಿದೆ.
ಗಣೇಶ ಮೂರ್ತಿ: ಏಳು ನಿವೇಶನಗಳು, ಚಿನ್ನ-ಬೆಳ್ಳಿ, ಎರಡು ಕಾರು, 1 ಬೈಕ್, 3ಲಕ್ಷ ರೂ.ಪಾಲಿಸಿಗಳು, ವಿವಿಧ ಬ್ಯಾಂಕುಗಳಲ್ಲಿ 2ಲಕ್ಷ ರೂ.ನಗದು ಪತ್ತೆಯಾಗಿದೆ. ಮೇಲ್ಕಂಡ ನಾಲ್ಕು ಪ್ರಕರಣಗಳಲ್ಲಿ ತನಿಖೆ ಮುಂದುವರಿಸಿದ್ದು, ದಾಖಲೆ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.