ಕಾಂಗ್ರೆಸ್ ಭ್ರಷ್ಟಾಚಾರ ನಾನೇ ಬಯಲು ಮಾಡುವೆ: ಶ್ರೀರಾಮುಲು
ಬಾದಾಮಿ, ಎ. 30: ಸ್ವಾತಂತ್ರದ ಬಳಿಕ ಕಾಂಗ್ರೆಸ್ ನಡೆಸಿರುವ ಹಗರಣ ಕುರಿತು ಬಹಿರಂಗ ಚರ್ಚೆಗೆ ಪ್ರಧಾನಿ ಮೋದಿ ಬರುವುದು ಬೇಡ. ನಾನೇ ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರ ಬಯಲು ಮಾಡುತ್ತೇನೆ ಎಂದು ಬಾದಾಮಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ಸೋಮವಾರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಧಿಕಾರವಿಲ್ಲದಿದ್ದಾಗ ಅಹಂಕಾರವಿರಲಿಲ್ಲ. ಇದೀಗ ಅಧಿಕಾರಕ್ಕೆ ಬಂದ ಬಳಿಕ ಅಹಂಕಾರ ತಲೆಗೇರಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಾದಾಮಿ ಕ್ಷೇತ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋಗೆ ಕರೆಸುವ ಚಿಂತನೆ ಇದೆ ಎಂದ ಅವರು, ಬಾದಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.
ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಪರ ಪ್ರಚಾರಕ್ಕೆ ಆಪ್ತ ಸ್ನೇಹಿತ ಗಾಲಿ ಜನಾರ್ದನ ರೆಡ್ಡಿ ಬರುವುದಿಲ್ಲ. ಬಾದಾಮಿಯಲ್ಲಿ ಮನೆ ಮಾಡಲು ಉದ್ದೇಶಿಸಿದ್ದು, ನನ್ನ ಆಪ್ತರಿಗೆ ಮನೆ ಹುಡುಕಲು ಹೇಳಿದ್ದೇನೆ. ಆದರೆ, ಸರಿಯಾದ ಮನೆ ಸಿಗುತ್ತಿಲ್ಲ. ಇತ್ತೀಚಿಗೆ ಜನರು ರಾಜಕಾರಣಿಗಳಿಗೆ ಮನೆ ಕೊಡುತ್ತಿಲ್ಲ’
-ಬಿ.ಶ್ರೀರಾಮುಲು ಬಾದಾಮಿ ಬಿಜೆಪಿ ಅಭ್ಯರ್ಥಿ