ಬಿಜೆಪಿಯನ್ನು ಸೋಲಿಸುವುದೇ ಬಹುಮುಖ್ಯ ಅಜೆಂಡ: ಸಿಪಿಐಎಂ ಮುಖಂಡ ಯು.ಬಸವರಾಜು
ಬೆಂಗಳೂರು, ಎ.30: ದುಡಿಯುವ ಜನರು, ನಾಗರಿಕರು ಯಾತನಾಮಯ ಜೀವನ ನಡೆಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರಕಾರಗಳು ಅಭಿವೃದ್ಧಿ ಮಂತ್ರವೆಂದು ಜಾರಿಗೊಳಿಸಿರುವ ಜಾಗತೀಕರಣದ ನೀತಿಗಳಿಂದ ರಾಜ್ಯ ಬಿಕ್ಕಟ್ಟಿಗೆ ಸಿಲುಕಿದೆ. ಹಾಗಾಗಿ ಬಿಜೆಪಿಯನ್ನು ಸೋಲಿಸುವುದೇ ಪಕ್ಷದ ಬಹುಮುಖ್ಯ ಅಜೆಂಡವಾಗಿದೆ ಎಂದು ಸಿಪಿಐಎಂನ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಯು.ಬಸವರಾಜು ಹೇಳಿದರು.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ಹಿರಿಯ ಕಾರ್ಮಿಕ ಮುಖಂಡ ವಿಜೆಕೆ ನಾಯರ್ ಅವರು ಪಕ್ಷದ ನೂತನ ಪ್ರಣಾಳಿಕೆ ಬಿಡುಗಡೆಗೊಳಿಸಿ, ಆಹಾರ ಭದ್ರತೆ, ಶಿಕ್ಷಣ, ಆರೋಗ್ಯ, ರೈತರು, ಕಾರ್ಮಿಕರು, ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಪ್ರಣಾಳಿಕೆ ಹೊಂದಿದೆ ಎಂದು ತಿಳಿಸಿದರು.
ಯು.ಬಸವರಾಜು ಮಾತನಾಡಿ, ಪ್ರಣಾಳಿಕೆಯಲ್ಲಿ ರಾಜ್ಯದ ಭವಿಷ್ಯದ ದಿಕ್ಸೂಚಿಯನ್ನು ಸ್ಪಷ್ಟಪಡಿಸಲಾಗಿದೆ. ಅಖಂಡ ಕರ್ನಾಟಕದ ಸೌಹಾರ್ದತೆ ಉಳಿಸಲು, ಪ್ರಜಾಸತ್ಮಾತ್ಮಕ ಹಕ್ಕುಗಳನ್ನು ರಕ್ಷಿಸಲು ಮತದಾರರು ಸಿಪಿಐಎಂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಪಕ್ಷವು 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜನ ಚಳವಳಿಯನ್ನು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪ್ರಣಾಳಿಕೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿ, ಬಗರ್‌ಹುಕುಂ ಸಾಗುವಳಿ ಪ್ರಕರಣಗಳ ಸಕ್ರಮ, ಅಸಂಘಟಿತ ವಲಯದ ಕಾರ್ಮಿಕರಿಗೆ ತಿಂಗಳಿಗೆ 18 ಸಾವಿರ ಕನಿಷ್ಟ ಕೂಲಿ, ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಕಾರ್ಮಿಕರ ಖಾಯಂ ಮಾಡುವಿಕೆ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗೆ ಇನ್ನಷ್ಟು ಬಲ ತುಂಬಲು 2014ರ ಮಸೂದೆ ಕಾಯಿದೆ ಮಾಡುವುದು, ಖಾಸಗಿ ರಂಗದಲ್ಲೂ ಮೀಸಲಾತಿ, ಎಸ್ಸಿ ಎಸ್ಸಿ ನೌಕರರ ಭಡ್ತಿ ಮೀಸಲಾತಿ ಅನುಷ್ಠಾನಕ್ಕಾಗಿ ಸಂವಿಧಾನ ತಿದ್ದುಪಡಿ, ದೇವದಾಸಿ ಮಹಿಳೆಯರಿಗಾಗಿ ಪುನರ್ವಸತಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ, ಕೃಷಿ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗ ಶಿಫಾರಸ್ಸಿನಂತೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸುವುದು, ಕೇರಳ ಮಾದರಿಯ ಎಲ್‌ಡಿಎಫ್ ಋಣಭಾರ ವಿಮೋಚನಾ ಕಾಯ್ದೆ ಜಾರಿ, ಬರಪೀಡಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ, ಮಹದಾಯಿ ವಿವಾದ ಪರಿಹಾರ, ರೈತರಿಗೆ ಶೇ.1ರ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ನೀಡುವ ಬಗ್ಗೆ ಭರವಸೆ ನೀಡಲಾಗಿದೆ.
ಸಾಚಾರ್ ಸಮಿತಿ ಹಾಗೂ ರಂಗನಾಥ್ ಮಿಶ್ರಾ ಸಮಿತಿ ಶಿಫಾರಸ್ಸುಗಳ ಜಾರಿಗೆ ಒತ್ತಾಯ, ನಿರ್ಭಯಕಾನೂನಿನ ಸಮಗ್ರ ಜಾರಿ, ಪೋಕ್ಸೋ ಕಾಯ್ದೆ ಕಟ್ಟು ನಿಟ್ಟಿನ ಜಾರಿ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ, ಶಿಕ್ಷಣಕ್ಕೆ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ, ಎಲ್ಲಾ ಹಂತದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸುವುದು, ಮಾತೃಭಾಷೆಯಲ್ಲಿ ಶಿಕ್ಷಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕ ಸೌಹಾರ್ದ ಪರಂಪರೆ ಉಳಿಸಿ ಬೆಳೆಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಗೋಪಾಲಕೃಷ್ಣ ಇನ್ನಿತರರು ಇದ್ದರು.