ಕೊಲೆ ಆರೋಪಿಗೆ ಪಾಸ್‌ಪೋರ್ಟ್ ಕೊಡಿಸಿದ ಝಮೀರ್ ಅಹ್ಮದ್ ಖಾನ್: ಆರೋಪ
ಬೆಂಗಳೂರು, ಎ.30: ಕೊಲೆ ಆರೋಪ ಪ್ರಕರಣದ ಪ್ರಮುಖ ಆರೋಪಿಗೆ ಶಾಸಕ ಝಮೀರ್ ಅಹ್ಮದ್ ಖಾನ್ ತಮ್ಮ ಪ್ರಭಾವ ಬಳಸಿ 45 ದಿನದ ಪಾಸ್‌ಪೋರ್ಟ್ ಕೊಡಿಸಿ ಹಜ್‌ಯಾತ್ರೆಗೆ ಕಳುಹಿಸಿದ್ದರು ಎಂದು ಚಾಮರಾಜಪೇಟೆಯ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಖಾನ್ ಆರೋಪಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಸೈಯದ್ ಖಾಸಿಂ ಅಲಿಯಾಸ್ ಕಿಡ್ನಿ ಖಾಸಿಂ ಕೊಲೆ ನಡೆದಿದ್ದು, ಈ ಪ್ರಕರಣದ ಆರೋಪಿ ರೌಡಿ ಶೀಟರ್ ಮಹಮದ್ ಅಲಿ ಅಲಿಯಾಸ್ ದಿವಾನ ಅಲಿಗೆ ಝಮೀರ್ ಅಹಮದ್ ತಮ್ಮ ಪ್ರಭಾವ ಬಳಸಿ 45 ದಿನದ ಪಾಸ್‌ಪೋರ್ಟ್ ಕೊಡಿಸಿ ಹಜ್‌ಯಾತ್ರೆಗೆ ಕಳುಹಿಸಿದ್ದರು. ಈ ಬಗ್ಗೆ ಕೇಂದ್ರದ ಹಜ್ ಸಮಿತಿ ಕರ್ನಾಟಕಕ್ಕೆ ಭೇಟಿ ನೀಡಿ, ಕೊಲೆ ಸಂಬಂಧ ಪಾರ್ಸ್‌ಪೋರ್ಟ್‌ನ್ನು ರದ್ದು ಪಡಿಸಿತು. ಝಮೀರ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಮುಸ್ಲಿಮ್ ನಾಯಕನೆಂದು ಹೇಳುತ್ತಾ ಮುಸ್ಲಿಮರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಲೇಔಟ್ ಪೋಲಿಸ್ ಠಾಣೆಯಲ್ಲಿ ಕೊಲೆ ಸಂಬಂಧ 2008ರಲ್ಲಿಯೇ 9 ಆರೋಪಿಗಳ ವಿರುದ್ಧ ಸೆಕ್ಷನ್ 120-ಬಿ, 143, 144, 148, 302ರಲ್ಲಿ ಕೇಸ್ ದಾಖಲಾಗಿತ್ತು. ಅಲ್ಲದೇ, ಇನ್ನೂ 2 ಪ್ರಕರಣಗಳಲ್ಲಿ ಮಹಮದ್ ಅಲಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಝಮೀರ್ ಅಹಮದ್ ಆರೋಪಿಗಳ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಗೆಲುವು ಖಚಿತ: ಮಸೀದಿಗಳಲ್ಲಿ ಪ್ರಚಾರ ಮಾಡುವುದನ್ನು ನಿಷೇಧಿಸಿದ್ದರೂ, ಚಾಮರಾಜಪೇಟೆಯಲ್ಲಿರುವ ಮಸೀದಿಗಳಿಗೆ ತೆರಳಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆಂದು ದೂರಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಝಮೀರ್ ಅಹಮದ್ ವಿರುದ್ಧ ಭಾರೀ ಅಂತರದಿಂದ ಗೆಲ್ಲುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.