ವಿಧಾನಸಭಾ ಚುನಾವಣೆ: ಪ್ರಚಾರಕ್ಕಾಗಿ 225 ವಾಹನಗಳಿಗೆ ಅನುಮತಿ ಪಡೆದ ಬಿಜೆಪಿ

Update: 2018-04-30 16:46 GMT

ಬೆಂಗಳೂರು, ಎ. 30: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಅತೀ ಹೆಚ್ಚು (225) ವಾಹನಗಳಿಗೆ ಅನುಮತಿ ಪಡೆದುಕೊಂಡಿದೆ. ಜೆಡಿಎಸ್-189 ಮತ್ತು ಕಾಂಗ್ರೆಸ್-83 ಹಾಗೂ ಬಿಎಸ್ಪಿ-45 ಹಾಗೂ ಎನ್‌ಸಿಪಿ-29 ವಾಹನಗಳಿಗೆ ಅನುಮತಿ ಪಡೆದುಕೊಂಡಿವೆ.

ಎ.29ರ ಅಂತ್ಯಕ್ಕೆ ಬಿಜೆಪಿ ಎಲ್‌ಇಡಿ/ವಿಡಿಯೋ ವ್ಯಾನ್‌ಗಳಲ್ಲಿ ಪ್ರಚಾರ ಕೈಗೊಳ್ಳಲು 176, ತನ್ನ ತಾರಾ ಪ್ರಚಾರಕರಿಗಾಗಿ 40 ವಾಹನ ಹಾಗೂ ಪ್ರಚಾರ ಸಾಮಾಗ್ರಿಗಳ ಸಾಗಾಣಿಕೆಗೆ 4 ವಾಹನ ಮತ್ತು ಪ್ರಚಾರದಲ್ಲಿ ತೊಡಗಿರುವ ಕಚೇರಿ ಸಿಬ್ಬಂದಿ ಓಡಾಟಕ್ಕೆ 5 ವಾಹನ ಸೇರಿ 225 ವಾಹನಗಳಿಗೆ ಅನುಮತಿ ಪಡೆದಿದೆ.

ಕಾಂಗ್ರೆಸ್ ಪಕ್ಷ 34 ಎಲ್‌ಇಡಿ/ವಿಡಿಯೋ ವ್ಯಾನ್, 40 ತಾರಾ ಪ್ರಚಾರಕರ ವಾಹನ, ಪ್ರಚಾರ ಸಾಮಾಗ್ರಿ ಸಾಗಾಟಕ್ಕೆ 4 ವಾಹನ ಮತ್ತು ಸಿಬ್ಬಂದಿಗಳಿಗಾಗಿ 5 ವಾಹನ ಸೇರಿದಂತೆ 83 ವಾಹನಗಳಿಗೆ ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಂಡಿದೆ ಎಂದು ತಿಳಿಸಲಾಗಿದೆ.

ಜೆಡಿಎಸ್ 147 ಎಲ್‌ಇಡಿ/ವಿಡಿಯೋ ವ್ಯಾನ್, ತಾರಾ ಪ್ರಚಾರಕರ ಓಡಾಟಕ್ಕೆ 40 ವಾಹನ, ಸಿಬ್ಬಂದಿ ಸಂಚಾರಕ್ಕೆ 5 ವಾಹನ ಸೇರಿ 189 ವಾಹನಗಳಿಗೆ ಅನುಮತಿ ಪಡೆದಿದೆ. ಒಟ್ಟಾರೆ ಚುನಾವಣಾ ಆಯೋಗದಿಂದ ಈವರೆಗೆ 3,601 ಎಲ್‌ಇಡಿ/ವಿಡಿಯೋ ವಾಹನಗಳಿಗೆ ವಿವಿಧ ರಾಜಕೀಯ ಪಕ್ಷಗಳು ಅನುಮತಿ ಪಡೆದುಕೊಂಡಿವೆ. ತಾರಾ ಪ್ರಚಾರಕರಿಗಾಗಿ 354 ವಾಹನಗಳಿಗೆ ಅನುಮತಿ ಪಡೆದಿವೆ ಎಂದು ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News