×
Ad

ವಿವಿಗಳು ಮಾನವೀಯ ಮೌಲ್ಯ ಕಲಿಸಬೇಕು: ನಿಜಗುಣಾನಂದ ಸ್ವಾಮಿ

Update: 2018-04-30 22:26 IST

ಬೆಂಗಳೂರು,ಎ.30: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುವುದರ ಜೊತೆಗೆ ಮಾನವೀಯ ಮೌಲ್ಯ, ಸಹಬಾಳ್ವೆಯನ್ನು ಸಹ ಕಲಿಸಬೇಕಿದೆ ಎಂದು ಮುಂಡರಗಿಯ ನಿಷ್ಕಳ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ನುಡಿದರು.

ಸೋಮವಾರ ನಗರದ ಜಿಕೆವಿಕೆ ಆವರಣದ ಕುವೆಂಪು ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್‌ರವರ 127ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳನ್ನು ದುಡಿಯುವ ಯಂತ್ರಗಳಂತೆ ರೂಪಿಸುವ ಬದಲು ಅವರಲ್ಲಿ ಮಾನವೀಯ ವೌಲ್ಯಗಳನ್ನು ಬಿತ್ತಬೇಕಿದೆ. ಜ್ಞಾನದ ಸದ್ಬಳಕೆಯ ಶಿಕ್ಷಣ ನೀಡಿ, ಸಹಬಾಳ್ವೆ ಸಮಾಜ ನಿರ್ಮಿಸುವ ಜವಾಬ್ದಾರಿಯನ್ನು ಯುವಕರಿಗೆ ಹೇಳಿಕೊಡುವ ಕೆಲಸವನ್ನು ವಿವಿಗಳು ಮಾಡಬೇಕಿದೆ ಎಂದರು.

ಬಸವಣ್ಣ, ಬುದ್ಧ ಮತ್ತು ಅಂಬೇಡ್ಕರ್‌ರವರ ಧ್ಯೇಯಗಳನ್ನು ಪ್ರಾಣಿಪಕ್ಷಿ ಸಂಕುಲದಲ್ಲಿ ಕಾಣಬಹುದು. ಇವುಗಳ ಜೀವನ ಶೈಲಿಯಲ್ಲಿರುವ ಸಹಬಾಳ್ವೆ, ಸಮಾನತೆ ನೋಡಿ ಇಂದಿನ ಪೀಳಿಗೆ ಕಲಿಯಬೇಕಿದೆ. ದೇಶದೊಳಗಿನ ಧರ್ಮಶಾಸ್ತ್ರಕ್ಕಿಂತ ನಮ್ಮಿಳಗಿನ ಎದೆಯ ಧ್ವನಿಯನ್ನರಿತು ಬದುಕಬೇಕು ಎಂದ ಅವರು, ಅಂಬೇಡ್ಕರ್ ಹೇಳಿರುವಂತೆ ದೇಶ ಬದಲಾವಣೆ ಆಗಬೇಕಾದರೆ ಗುಡಿಗಳ ಮುಂದೆ ಸಾಲು ನಿಲ್ಲುವ ಹೆಣ್ಣುಮಕ್ಕಳು ಗ್ರಂಥಾಲಯದ ಮುಂದೆ ನಿಲ್ಲಬೇಕು ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್. ನಟರಾಜು ಮಾತನಾಡಿ, ಸಮಾಜ ಸುಧಾರಕರ ಸಂದೇಶದಂತೆ ಮೂಢನಂಬಿಕೆಗಳನ್ನು ತೊರೆದು ವೈಜ್ಞಾನಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಏಳಿಗೆಗೆ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.

ನಿಜಗುಣಾನಂದ ಶ್ರೀಗಳು ಹೇಳಿರುವಂತೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಣೆ ಮಾಡಲು ಚಿಂತಿಸಲಾಗುವುದು. ಮುಂದಿನ ವರ್ಷದಿಂದಲೆ ಈ ಕಾರ್ಯಕ್ರಮ ಜಾರಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News