ಪ್ರಧಾನಿ ಜೊತೆ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಡಿ ಎಂದು ಯಡಿಯೂರಪ್ಪಗೆ ಹೇಳಿದರೆ ಅಮಿತ್ ಷಾ

Update: 2018-04-30 17:33 GMT

ಬೆಂಗಳೂರು, ಎ. 30: ಬಿಜೆಪಿಯ ಸ್ಟಾರ್ ಪ್ರಚಾರಕ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಲು ಕ್ಷಣಗಣನೆ ಶುರುವಾಗಿದೆ. ಮೇ 1ರಿಂದ 8ರವರೆಗೆ ರಾಜ್ಯದ ವಿವಿಧೆಡೆ ಪ್ರತಿದಿನಕ್ಕೆ ಮೂರರಂತೆ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದ್ದು, ಈ ಬಾರಿಯ ಚುನಾವಣೆಯ ಫಲಿತಾಂಶವು ಮುಂದಿನ ಲೋಕಸಭಾ ಚುನಾವಣೆಗೆ ಕೈಗನ್ನಡಿಯಾಗಲಿದೆ ಎನ್ನಲಾಗಿದೆ. ಆದ್ದರಿಂದ ರಾಜ್ಯದ ಚುಕ್ಕಾಣಿ ಹಿಡಿಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

ಈ ನಡುವೆ ನಾಳೆಯಿಂದ ಮೋದಿಯವರು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದು, ವೇದಿಕೆಯಲ್ಲಿ ಅವರೊಂದಿಗೆ ಕಾಣಿಸಿಕೊಳ್ಳಬಾರದು ಎಂದು ಯಡಿಯೂರಪ್ಪನವರಿಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಸ್ವತಂತ್ರವಾಗಿ ಚುನಾವಣಾ ಪ್ರಚಾರ ನಡೆಸುವಂತೆಯೂ, ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳದಂತೆಯೂ ಬಿಎಸ್ ವೈಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ರೀತಿಯ ಸೂಚನೆಗೆ ಬಿಎಸ್ ವೈ ಜನಾರ್ದನ ರೆಡ್ಡಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದೇ ಕಾರಣ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಜೊತೆ ಬಿಎಸ್ ವೈ ವೇದಿಕೆ ಹಂಚಿಕೊಂಡಿದ್ದರಿಂದ  ಬಿಜೆಪಿಗೆ ಮುಜುಗರವಾಗಿತ್ತು. ಅಲ್ಲದೆ ಚುನಾವಣೆ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ ಎನ್ನುವ ಕಾರಣದಿಂದ ಬಿಎಸ್ ವೈಗೆ ಅಮಿತ್ ಶಾ ಈ ಸೂಚನೆ ನೀಡಿದ್ದಾರೆಂದು indiatoday.in ವರದಿ ಮಾಡಿದೆ.

ಇಷ್ಟೇ ಅಲ್ಲದೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರರಿಗೆ ಟಿಕೆಟ್ ನಿರಾಕರಿಸಿರುವ ವಿಚಾರದಲ್ಲೂ ಯಡಿಯೂರಪ್ಪ ಬೆಂಬಲಿಗರು ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಇದೇ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಕಣಕ್ಕಿಳಿಯಲಿದ್ದಾರೆ. ಆದರೆ ಇದೇ ವಿಚಾರದಲ್ಲಿ ಬಿಜೆಪಿಯಲ್ಲಿ ಅಸಮಾಧಾನವಿದೆ ಎನ್ನುವ ಸುದ್ದಿಗಳನ್ನು ಬಿಜೆಪಿ ವಕ್ತಾರ ವಾಮನಾಚಾರ್ಯ ನಿರಾಕರಿಸುತ್ತಾರೆ. “ವರುಣಾದಿಂದ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ಸ್ವತಃ ಯಡಿಯೂರಪ್ಪ ಘೋಷಿಸಿದ್ದಾರೆ. ಅವರ ಪುತ್ರನಿಗೆ ಟಿಕೆಟ್ ಸಿಗುವುದಕ್ಕಿಂತಲೂ ಪ್ರಮುಖವಾಗಿರುವುದು ಬಿಜೆಪಿಯ ಜಯ” ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News