×
Ad

ಝಮೀರ್ ಅಹ್ಮದ್ ಜೊತೆ ಪಾಕ್ ಗೆ ಹೋಗಿದ್ದರೇ ಸಿಎಂ ಸಿದ್ದರಾಮಯ್ಯ!

Update: 2018-05-01 15:11 IST

ಬೆಂಗಳೂರು, ಮೇ 1: ಸದ್ಯವೇ ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ನಕಲಿ ಸುದ್ದಿಗಳಿಗೇನೂ ಕೊರತೆಯಿಲ್ಲ. ಈ ನಕಲಿ ಸುದ್ದಿಗಳ ಪಟ್ಟಿಗೆ ಹೊಸ ಸೇರ್ಪಡೆಯೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ಝಮೀರ್ ಅಹ್ಮದ್ ಎಪ್ರಿಲ್ ನಲ್ಲಿ ಪಾಕಿಸ್ತಾನದ ಕರಾಚಿಗೆ ಒಂದು ದಿನದ ಪ್ರವಾಸ ಹೋಗಿದ್ದರು ಎನ್ನುವುದು.

ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಹಾಗು ಝಮೀರ್ ಅಹ್ಮದ್ ಪಾಕ್ ಗೆ ತೆರಳಿದ್ದರು ಎನ್ನುವುದಕ್ಕೆ ದಾಖಲೆ ಎಂಬ ಪತ್ರವೊಂದು ಹರಿದಾಡುತ್ತಿದೆ. ಈ ಪತ್ರದ ಪ್ರಕಾರ ಎಪ್ರಿಲ್ 12, 2-018ರಂದು  ಮುಂಬೈಯಿಂದ ಸಂಜೆ 5 ಗಂಟೆಗೆ ಹೊರಟ ವಿಮಾನವೊಂದು ಕರಾಚಿಯನ್ನು 6:35ಕ್ಕೆ ತಲುಪಿತ್ತು. ಈ ಒಂದು ಗಂಟೆ 15 ನಿಮಿಷದ ಅವಧಿಯ ಪ್ರಯಾಣದ ವೇಳೆ ವಿಮಾನದಲ್ಲಿ ಯಾರೂ ಪ್ರಯಾಣಿಕರಿರಲಿಲ್ಲ!. ಕರಾಚಿಯಿಂದ ಸಂಜೆ 7 ಗಂಟೆಗೆ ಹೊರಟ ವಿಮಾನ ದಿಲ್ಲಿಯನ್ನು 9:10ಕ್ಕೆ ತಲುಪಿದಾಗ ಅದರಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಅದು ಸಿದ್ದರಾಮಯ್ಯ ಹಾಗೂ ಝಮೀರ್ ಅಹ್ಮದ್.  ಈ ಇಬ್ಬರು  ನಂತರ ದಿಲ್ಲಿಯಿಂದ 11:45ಕ್ಕೆ ನಿರ್ಗಮಿಸಿ ಮುಂಜಾನೆ 2 ಗಂಟೆಗೆ ಬೆಂಗಳೂರು ತಲುಪಿದ್ದರು ಎಂದು ಆ ಪತ್ರ ತಿಳಿಸುತ್ತದೆ.

ಈ ನಕಲಿ ಪತ್ರದ ಲೆಟರ್ ಹೆಡ್ ನಲ್ಲಿ  ವಿ ಎಸ್ ಆರ್ ಏವ್ಯೇಶನ್ ಎಂದು ಬರೆದಿದ್ದು, ಈ ಸಂಸ್ಥೆ  ಹೊಸದಿಲ್ಲಿಯಲ್ಲಿದೆ. ಪತ್ರಕ್ಕೆ ಆಶಿಷ್ ಭಂಡೌರಿಯಾ ಎಂಬವರು ಸಹಿ ಹಾಕಿದ್ದು ಅವರ ಹುದ್ದೆ (ಆಪರೇಶನ್ಸ್) ಎಂದಷ್ಟೇ ಬರೆಯಲಾಗಿದೆ.

ಈ ಬಗ್ಗೆ ಪತ್ರಿಕೆಯೊಂದು ಆಶಿಷ್ ಅವರನ್ನು ಸಂಪರ್ಕಿಸಿದಾಗ ಇದೊಂದು ನಕಲಿ ಪತ್ರವೆಂದಷ್ಟೇ ಹೇಳಿದ ಅವರು ಹೆಚ್ಚಿನೇನೂ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ.

ಸಿದ್ದರಾಮಯ್ಯ ಆ ದಿನ ದಿಲ್ಲಿಯಲ್ಲಿದ್ದರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಪತ್ರವನ್ನು ನಕಲಿ ಎಂದು ಹೇಳಿದ್ದಾರೆ. ಎಪ್ರಿಲ್ 13ರಂದು ಅವರು ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಭಾಗವಹಿಸಿದ್ದರು. ಆ ನಕಲಿ ಪತ್ರದಲ್ಲಿ ತಿಳಿಸಿದಂತೆ ಸಿದ್ದರಾಮಯ್ಯ ಎಪ್ರಿಲ್ 14ರಂದು ಮುಂಜಾನೆ 2 ಗಂಟೆಗೆ ಬೆಂಗಳೂರು ತಲುಪಿದ್ದಾರೆ. ಆದರೆ ಎಪ್ರಿಲ್ 14ರಂದು ಅವರು ದಿಲ್ಲಿಯ ಕರ್ನಾಟಕ ಭವನದಲ್ಲಿ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ನಕಲಿ ಪತ್ರ ವೃತ್ತಾಂತದ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ವಕ್ತಾರ ಬೃಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News