‘ನಿಮ್ಮ ಪಕ್ಷ 60-70 ಸೀಟು ದಾಟುವುದು ಕಷ್ಟವಿದೆ’
ಬೆಂಗಳೂರು, ಮೇ 1: ‘ಮೋದಿಯವರೇ ಎರಡು ಸೀಟುಗಳ ವಿಷಯ ಬಿಡಿ, ನಿಮ್ಮ (ಬಿಜೆಪಿ) ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 60 ರಿಂದ 70 ಸೀಟು ದಾಟುವುದು ಕಷ್ಟವಿದೆ. ಮೊದಲು ನೀವು ಅದರ ಬಗ್ಗೆ ಯೋಚಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಚಾಮರಾಜನಗರ ಜಿಲ್ಲೆ ಸಂತೇಮರಳ್ಳಿಯಲ್ಲಿ ಬಿಜೆಪಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮೋದಿ ಭಾಷಣಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವೂ ಎರಡು ಕ್ಷೇತ್ರಗಳಿಂದ (ವಾರಣಾಸಿ ಮತ್ತು ವಡೋದರ) ಸ್ಪರ್ಧಿಸಿದ್ದಿರಿ. ಅದಕ್ಕೆ ಭಯ ಕಾರಣವೇ ಮೋದಿಯವರೇ?’ ಎಂದು ಪ್ರಶ್ನಿಸಿದ್ದಾರೆ.
‘ನನಗೆ ಗೊತ್ತು, ನೀವು 56 ಇಂಚಿನ ಎದೆ ಇರುವ ಮನುಷ್ಯ. ನಿಮ್ಮ ಹತ್ತಿರ ಅತ್ಯುತ್ತಮ ವಿವರಣೆಯೇ ಇರುತ್ತದೆ' ಎಂದು ಸಿದ್ದರಾಮಯ್ಯ, ಮೋದಿ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ಸಿಎಂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸಿದ್ದು, ಅವರ ಪುತ್ರನಿಗೂ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ 2+1 ಸೂತ್ರ ಜಾರಿಯಲ್ಲಿದೆ ಎಂದು ಮೋದಿ ಲೇವಡಿ ಮಾಡಿದ್ದರು.