10 ಭ್ರಷ್ಟರಿಗೆ ಬಿಜೆಪಿ ಟಿಕೆಟ್ ನೀಡಿದ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಲಿ: ರಣದೀಪ್ ಸಿಂಗ್ ಸುರ್ಜೆವಾಲಾ

Update: 2018-05-01 12:21 GMT

ಬೆಂಗಳೂರು, ಮೇ 1: ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆಸಿದ್ದ 10 ಮಂದಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದು, ಗಣಿ ಹಗರಣದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ ಜನಾರ್ದನ ರೆಡ್ಡಿ ಬಿಜೆಪಿ ಸ್ಟಾರ್ ಕ್ಯಾಂಪೇನರ್. ಈ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕೆಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಜೆಪಿಯೆಂದರೆ ಭ್ರಷ್ಟ ಜನಾರ್ದನ ಪಾರ್ಟಿ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಮೇಲೆ 38 ಕ್ರಿಮಿನಲ್ ಕೇಸುಗಳಿವೆ. ಜೊತೆಗೆ ಅವರ ಪಕ್ಷದಲ್ಲಿರುವ 10 ನಾಯಕರ ಮೇಲೂ ಕ್ರಿಮಿನಲ್ ಕೇಸುಗಳಿದ್ದು, ಜನತೆ ಇಂತಹವರಿಗೆ ಅಧಿಕಾರ ನೀಡಬೇಕೆ? ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಮುಂಚೂಣಿಯಲ್ಲಿರುವ 10 ಮಂದಿ ನಾಯಕರ ಮೇಲೂ ಕ್ರಿಮಿನಲ್ ಕೇಸರುಗಳಿವೆ. ಬಾದಾಮಿ, ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಮೇಲೆ 3, ಜನಾರ್ದನರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಮೇಲೆ 5 ಕ್ರಿಮಿನಲ್ ಪ್ರಕರಣಗಳಿವೆ. ಶ್ರೀರಾಮಲು ಸಂಬಂಧಿ ಸುರೇಶ್ ಬಾಬು ಮೇಲೆ 6 ಕ್ರಿಮಿನಲ್ ಕೇಸುಗಳಿವೆ. ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೇಲೆ 4, ಸಿ.ಟಿ. ರವಿ ಮೇಲೆ 3, ಮುರುಗೇಶ್ ನಿರಾಣಿ ಮೇಲೆ 2, ಕೃಷ್ಣಯ್ಯಶೆಟ್ಟಿ ಮೇಲೆ 4, ಶಿವನಗೌಡ ನಾಯಕ್ ಮೇಲೆ 4 ಸೇರಿದಂತೆ ಅಶೋಕ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಮೇಲೆಯೂ ಪ್ರಕರಣಗಳಿವೆ ಎಂದು ಅವರು ಟೀಕಿಸಿದರು.

‘35ಸಾವಿರ ಕೋಟಿ ರೂ.ಗಳ ಗಣಿ ಹಗರಣದಲ್ಲಿ ಆರೋಪಿ ಜನಾರ್ದನ ರೆಡ್ಡಿಗೆ ಕ್ಲೀನ್‌ಚಿಟ್ ನೀಡಲು ಸಿಬಿಐ ಶ್ರಮಿಸಿದೆ. ಕೊನೆಗೆ ಸಿಬಿಐ ಗೋವಾ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವು ಕಡೆ ದಾಖಲಾಗಿದ್ದ 6 ಪ್ರಮುಖ ಪ್ರಕರಣಗಳನ್ನು ಕೈಬಿಟ್ಟಿದೆ’
-ರಣದೀಪ್ ಸಿಂಗ್ ಸುರ್ಜೆವಾಲ್ ಎಐಸಿಸಿ ಮಾಧ್ಯಮ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News