×
Ad

ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಸಾಬೀತು: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-05-01 19:43 IST

ಗದಗ, ಮೇ 1: ‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನಿ ಮೋದಿ ಹಾಡಿ-ಹೊಗಳಿದ್ದಾರೆ. ಇದರಿಂದ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಒಳ ಒಪ್ಪಂದ ಮಾಡಿಕೊಂಡಿರುವುದು ಸಾಬೀತಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಂಗಳವಾರ ಜಿಲ್ಲೆಯ ನವಲಗುಂದದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ, ದೇವೇಗೌಡ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಬೇಕು ಎಂದು ಛೇಡಿಸಿದ್ದರು. ಇದೀಗ ಅವರೇ ದೇವೇಗೌಡರನ್ನು ಹೊಗಳಿದ್ದಾರೆ. ದೇವೇಗೌಡರ ಬಗ್ಗೆ ನನಗೂ ಅಪಾರ ಗೌರವವಿದೆ. ಅವರು ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿ ನೋಡೋಣ ಎಂದು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.

‘ನಾನು ಕನ್ನಡಿಗ ಎನ್ನುವ ಪ್ರಧಾನಿ ಮೋದಿಯವರೇ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮಹಾದಾಯಿ, ರೈತರ ಸಾಲಮನ್ನಾ ವಿಚಾರದಲ್ಲಿ ಪ್ರಧಾನಿ ಮೋದಿಯವರಿಂದ ರಾಜ್ಯಕ್ಕೆ ಮಹಾ ಮೋಸವಾಗಿದೆ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಕುರ್ಚಿ ಹೋಗುತ್ತದೆ ಎಂಬ ಭಯದಿಂದ ಚಾಮರಾಜನಗರಕ್ಕೆ ಹೋಗಿಲ್ಲ. ಇಂಥ ಮೂಢನಂಬಿಕೆಗಳನ್ನು ನಾನು ಎಂದೂ ನಂಬುವುದಿಲ್ಲ. ನಾನು ಚಾಮರಾಜನಗರಕ್ಕೆ ಎಂಟು ಬಾರಿ ಭೇಟಿ ನೀಡಿದ್ದು, ಐದು ವರ್ಷ ಆಡಳಿತ ಪೂರೈಸಿದ್ದೇನೆ. ನನ್ನದು ಅಭಿವೃದ್ಧಿಯ ನಂಬಿಕೆ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News