ಇಂತಹ ಕನ್ನಡಿಗರಿಂದ ಕನ್ನಡವನ್ನು ರಕ್ಷಿಸಿ
ಬೆಂಗಳೂರು, ಮೇ 1: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದು, ಮೊದಲ ದಿನವೇ ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದೆ. ರಾಜ್ಯಕ್ಕೆ ಆಗಮಿಸುವ ಮುನ್ನ ನಾನೂ ಕನ್ನಡಿಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದು, ಕನ್ನಡಿಗರ ಹಿತಾಸಕ್ತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಸಿದ್ದರಾಮಯ್ಯ ಪ್ರಧಾನಿಗೆ ತಿರುಗೇಟು ನೀಡಿದ್ದರು.
ಇಂದು ಚಾಮರಾಜನಗರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ರಾಜ್ಯ ಸರಕಾರದ ವಿರುದ್ದ ಟೀಕಾಪ್ರಹಾರ ನಡೆಸಿದರು. ಈ ಸಭೆಯಲ್ಲಿ ಮೋದಿ ಹೇಳಿರುವ ಕನ್ನಡ ಪದಗಳ ಬಗ್ಗೆ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ “ಇಂತಹ ಕನ್ನಡಿಗರಿಂದ ಕನ್ನಡವನ್ನು ರಕ್ಷಿಸಿ” ಎಂದಿದ್ದಾರೆ.
ಈ ಬಗೆಗಿನ ಫೋಟೊವೊಂದನ್ನು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಅದರಲ್ಲಿ, “ಭಗವಾನ್ ಮಂತೆಸ್ವಾಮಿ, ದೇವಿ ಮರವಬ್ಯಾ, ಮಲ ಮೇವದೇಸ್ವರ್, ಬಿಲ್ಲಿಗಿರಿ ರಂ, ಚಾಮರಾಜೇಶ್ವರ್, ಹಿಮ್ಮದ್ ಗೋಪಾಲಸ್ವಾಮಿ, ಎಲ್ಲಾ ದೇವರುಗಲಿಗ್ ನನ್ ಭಕ್ತಿಪೂರ್ವಕ್ ಪ್ರನಾಮ್ ಗಳು… ಇದು ಯಾವ ದೇಶದ ಭಾಷೆ ಗುರೂ?” ಎಂದು ಬರೆಯಲಾಗಿದೆ.
ಚಾಮರಾಜನಗರದಲ್ಲಿ ಮೋದಿ ಹೀಗೆ ಮಾತನಾಡಿದ್ದರು ಎನ್ನಲಾಗಿದೆ. ಈ ಫೋಟೊವನ್ನು ಟ್ವೀಟ್ ಮಾಡಿರುವ ಸಿದ್ದರಾಮಯ್ಯ “ಕನ್ನಡಿಗನಾಗುವುದರೆಂದರೆ… ಖಂಡಿತಾ ಇದಲ್ಲ, ಇಂತಹ ಕನ್ನಡಿಗರಿಂದ ಕನ್ನಡವನ್ನು ರಕ್ಷಿಸಿ” ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡಿಗನಾಗುವುದೆಂದರೆ...
— Siddaramaiah (@siddaramaiah) May 1, 2018
ಖಂಡಿತ ಇದಲ್ಲ. ಇಂತಹ ಕನ್ನಡಿಗರಿಂದ ಕನ್ನಡವನ್ನು ರಕ್ಷಿಸಿ. #AnswerMaadiModi pic.twitter.com/GMX1CRbltO