‘ಕಾರ್ಪೋರೆಟ್ ಸ್ನೇಹಿ’ ಬಿಜೆಪಿಯನ್ನು ಸೋಲಿಸಿ: ಎಚ್.ವಿ.ಅನಂತಸುಬ್ಬರಾವ್
ಬೆಂಗಳೂರು, ಮೇ 1: ಮೋದಿ ಸರಕಾರದ ಪ್ರತಿಯೊಂದು ತೀರ್ಮಾನ ‘ಕಾರ್ಪೋರೇಟ್ ಸ್ನೇಹಿ’ ಹಾಗೂ ರೈತ-ಕಾರ್ಮಿಕ ವಿರೋಧಿ. ಆದುದರಿಂದ ಕಾರ್ಮಿಕ ವರ್ಗ ಬಿಜೆಪಿಯನ್ನು ತಿರಸ್ಕರಿಸಿ ಸೋಲಿಸಬೇಕು ಎಂದು ಕಾರ್ಮಿಕ ಮುಖಂಡ ಎಚ್.ವಿ.ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ.
ಮಂಗಳವಾರ ಮೇ ದಿನಾಚರಣೆ ಅಂಗವಾಗಿ ನಗರದ ರೇಣುಕಾಚಾರ್ಯ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಎಲ್ಲ ತೀರ್ಮಾನಗಳು ಕಾರ್ಪೋರೇಟ್ ವಲಯದ ಪರವಾಗಿವೆ ಎಂದು ದೂರಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕರ ಪರವಾದ ಕಾನೂನುಗಳಿಗೆ ತಿದ್ದುಪಡಿ ಮೂಲಕ ತನ್ನ ಪ್ರತಿಗಾಮಿ ನೀತಿಯನ್ನು ಪ್ರದರ್ಶಿಸಿದೆ. ಇದರ ವಿರುದ್ಧ ಕಾರ್ಮಿಕರೆಲ್ಲರೂ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಅವರು ಇದೇ ವೇಳೆ ಸಲಹೆ ಮಾಡಿದರು.
ನ್ಯಾಷನಲ್ ಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯು ಮಾತನಾಡಿ, ಕೇಂದ್ರ ಸರಕಾರ ಕಾಲಮಿತಿ ಉದ್ಯೋಗ ನೀತಿಯನ್ನು ಜಾರಿಗೆ ತಂದು ದೇಶದ ಸಂಘಟಿತ ವಲಯವನ್ನು ಅಸಂಘಟಿತರನ್ನಾಗಿ ಮಾಡಲು ಮುಂದಾಗಿದೆ. ಇದರ ವಿರುದ್ಧ ಐಕ್ಯ ಹೋರಾಟ ಅಗತ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಡಾ.ಸಿದ್ದನಗೌಡ ಪಾಟೀಲ್, ಭಾರತೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿ, ಹರಿಗೋವಿಂದ ಉಪಸ್ಥಿತರಿದ್ದರು. ಇದೇ ವೇಳೆ ನಗರದ ರೈಲ್ವೆ ನಿಲ್ದಾಣದಿಂದ ಆನಂದ ರಾವ್ ವೃತ್ತದಲ್ಲಿನ ರೇಣುಕಾಚಾರ್ಯ ಸಭಾಂಗಣದ ವರೆಗೆ ಕಾರ್ಮಿಕರ ಬೃಹತ್ ರ್ಯಾಲಿ ನಡೆಸಲಾಯಿತು.