ವೆನಿಝುವೆಲಾದಲ್ಲಿ ಒಂದು ಕಪ್ ಕಾಫಿಯ ಬೆಲೆ ಎಷ್ಟು ಗೊತ್ತೇ?

Update: 2018-05-02 14:32 GMT

ವೆನಿಝುವೆಲಾದಲ್ಲಿ ಆರ್ಥಿಕ ಬಿಕ್ಕಟ್ಟು ಎಷ್ಟು ತೀವ್ರಗೊಂಡಿದೆ ಎಂದರೆ ಮಾಸಿಕ ಕನಿಷ್ಠ ವೇತನದಿಂದ ಒಂದು ಕಪ್ ಕಾಫಿ ಅಥವಾ ಒಮ್ಮೆ ಬಾಯಿಗೆ ಹಾಕಿಕೊಳ್ಳಲು ಸಾಲುವಷ್ಟು ಕಡಲೆ ಬೀಜಗಳನ್ನು ಖರೀದಿಸಬಹುದು,ಅಷ್ಟೇ. ಕೆಲವು ಪ್ರಕರಣಗಳಲ್ಲಿ ಅಲ್ಲಿಯ ಜನರು ಒಂದು ಬ್ರೆಡ್ ಖರೀದಿಸಲು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ,ಕೆಲವರು ಬ್ಯಾಂಕುಗಳಿಂದ ಸಾಲದ ಮಿತಿಯನ್ನು ಹೆಚ್ಚಿಸಿಕೊಳ್ಳಲು ಒದ್ದಾಡುತ್ತಿದ್ದಾರೆ.

ಗಗನಕ್ಕೇರಿರುವ ಹಣದುಬ್ಬರ ದರದಿಂದಾಗಿ ಜನರ ವೇತನ ಯಾವುದಕ್ಕೂ ಸಾಲುತ್ತಿಲ್ಲ. ವಸ್ತುಶಃ ತಮ್ಮ ಇಡೀ ಸಂಬಳವನ್ನು ಧಾರೆಯೆರೆದರೂ ತಮಗೆ ಬೇಕಾದ್ದನ್ನು ಖರೀದಿಸಲು ಜನರಿಗೆ ಸಾಧ್ಯವಾಗುತ್ತಿಲ್ಲ. ವೆನಿಝುವೆಲಾದಲ್ಲಿ ಹಣದುಬ್ಬರವು ಈ ವರ್ಷ ಶೇ.13000ಕ್ಕೆ ಹೆಚ್ಚಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯು ಅಂದಾಜಿಸಿದೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಕಾರಾಕಾಸ್ ನಿವಾಸಿ ಬೆಗ್ಲಿಸ್ ವಿಲಾನುಯೆವಾ ಮೂರು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದು,ಇವುಗಳ ಒಟ್ಟು ಸಾಲಮಿತಿ ಎರಡು ಡಾಲರ್‌ಗಳನ್ನು ದಾಟುವುದಿಲ್ಲ. ‘ನಾನು ಬ್ರೆಡ್ ಖರೀದಿಸಲು ಈ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೇನೆ. ಅವುಗಳಿಂದ ಅದೊಂದನ್ನೇ ಖರೀದಿಸಲು ಸಾಧ್ಯ’ ಎನ್ನುತ್ತಾರೆ ಅವರು! ಮೇ ದಿನಾಚರಣೆಯಂದು ವೆನಿಝುವೆಲಾದ ಅಧ್ಯಕ್ಷ ನಿಕೋಲಸ್ ಮಾದುರೊ ಅವರು ನೌಕರರ ಕನಿಷ್ಠ ಮಾಸಿಕ ವೇತನವನ್ನು ಒಂದು ಮಿಲಿಯನ್ ಬೊಲಿವರ್‌ಗಳಿಗೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ. ಆದರೆ ಇದು ಒಂದು ಕೆ.ಜಿ.ಮಾಂಸವನ್ನು ಖರೀದಿಸಲೂ ಸಾಲುವುದಿಲ್ಲ ಎಂದು ಅವರ ಪ್ರತಿಸ್ಪರ್ಧಿ ಹಾಗೂ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಹೆನ್ರಿ ಫಾಲ್ಕನ್ ಬೆಟ್ಟು ಮಾಡಿದ್ದಾರೆ. ಇದು ಈ ವರ್ಷದಲ್ಲಿ ಮೂರನೇ ವೇತನ ಏರಿಕೆಯಾಗಿದೆ,ಆದರೆ ಕಾಳಸಂತೆಯ ವಿನಿಮಯ ದರದಲ್ಲಿ ಎರಡು ಡಾಲರ್‌ಗಿಂತಲೂ ಕಡಿಮೆಯಾಗಿದೆ.

ವೆನಿಝುವೆಲಾದ ಬಿಕ್ಕಟ್ಟು ಝಿಂಬಾಬ್ವೆಯ ಆರ್ಥಿಕ ಬಿಕ್ಕಟ್ಟನ್ನು ನೆನಪಿಸುತ್ತಿದೆ. 2008ರ ಮಧ್ಯಭಾಗದಲ್ಲಿ ಝಿಂಬಾಬ್ವೆಯಲ್ಲಿ ಹಣದುಬ್ಬರ ಶೇ.79.6 ಶತಕೋಟಿಗೆ ಏರಿತ್ತು ಮತ್ತು ಸರಕಾರವು ಬ್ರಿಟನ್‌ನ ಪೌಂಡ್ ಮತ್ತು ದಕ್ಷಿಣ ಆಫ್ರಿಕಾದ ರ್ಯಾಂಡ್ ಜೊತೆಗೆ ಅಮೆರಿಕದ ಡಾಲರ್ ವ್ಯವಸ್ಥೆಗೆ ಮೊರೆ ಹೋಗುವುದಾಗಿ ಪ್ರಕಟಿಸಿತ್ತು.

ಇತರ ಹಲವಾರು ದೇಶಗಳಲ್ಲಿಯೂ ಹಣದುಬ್ಬರ ಗಗನಚುಂಬಿಯಾಗಿದೆ, ಆದರೆ ಅವು ವೆನುಝುವೆಲಾದಷ್ಟು ತೀವ್ರವಾಗಿ ಏರಿಕೆಯಾಗಿಲ್ಲ. ಅರ್ಜೆಂಟಿನಾದಲ್ಲಿ ಜನರು ಆಹಾರದಂತಹ ದಿನನಿತ್ಯದ ಅಗತ್ಯಗಳನ್ನೂ ಖರೀದಿಸಲು ಪರದಾಡುತ್ತಿದ್ದಾರೆ. ದಕ್ಷಿಣ ಸುಡಾನ್,ಸುರಿನಾಮ್,ಅಂಗೋಲಾ ಮತ್ತು ಮಲಾವಿ ಹಣದುಬ್ಬರ ತೀವ್ರವಾಗಿ ಹೆಚ್ಚಿರುವ ದೇಶಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News