​ರೈಲುಗಳಲ್ಲಿ ಚಹಾ ಸವಿಯುವ ಮುನ್ನ ಇದನ್ನು ಓದಿ

Update: 2018-05-03 03:26 GMT

ಹೈದರಾಬಾದ್, ಮೇ 3: ರೈಲಿನಲ್ಲಿ ಚಹಾ ಮತ್ತು ಕಾಫಿ ಸಿದ್ಧಪಡಿಸಲು ಶೌಚಾಲಯದ ನೀರು ಬಳಸಿದ್ದನ್ನು ಸೆರೆ ಹಿಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ದಕ್ಷಿಣ ಕೇಂದ್ರ ರೈಲ್ವೆ ಕೇಟರಿಂಗ್ ಗುತ್ತಿಗೆದಾರನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊ ಪ್ರಕಾರ, ಕಾಫಿ ಹಾಗೂ ಚಹಾ ಕ್ಯಾನ್‌ಗಳೊಂದಿಗೆ ಮಾರಾಟಗಾರ ಹೊರಬರುತ್ತಿರುವ ದೃಶ್ಯಾವಳಿ ಇದೆ. ಇದು ಶೌಚಾಲಯದ ಒಳಗಿನ ನೀರನ್ನು ಚಹಾ ಹಾಗೂ ಕಾಫಿಯಲ್ಲಿ ಮಿಶ್ರ ಮಾಡಿರುವುದನ್ನು ಸೂಚಿಸುತ್ತದೆ.

ಚೆನ್ನೈ ಸೆಂಟ್ರಲ್- ಹೈದರಾಬಾದ್ ಚಾರ್ಮಿನಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಈ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.

"ಪ್ರಕರಣದ ಬಗ್ಗೆ ತನಿಖೆ ನಡೆಸಿ, ಇದರ ಆಧಾರದಲ್ಲಿ ಸಿಕಂದರಾಬಾದ್ ಮತ್ತು ಕಾಝಿಪೇಟೆ ಮಾರಾಟ ಗುತ್ತಿಗೆದಾರ ಪಿ.ಶಿವಪ್ರಸಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಈತನ ಬಳಿ ಉದ್ಯೋಗಕ್ಕೆ ಇದ್ದಾನೆ ಎಂದು ದಕ್ಷಿಣ ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಉಮಾಶಂಕರ್ ಕುಮಾರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಐಆರ್‌ಸಿಟಿಸಿ ಮೂಲಕ ಗುತ್ತಿಗೆದಾರನ ಮೇಲೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News