ರಸ್ತೆ ಅಪಘಾತ: ತಹಶೀಲ್ದಾರ್ ಮೃತ್ಯು
ಬೆಂಗಳೂರು, ಮೇ 3: ನಿಂತಿದ್ದ ಟ್ರಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ತಹಶೀಲ್ದಾರ್ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನಗರದ ಮತ್ತಿಕೆರೆಯಲ್ಲಿ ವಾಸವಾಗಿದ್ದ ಎಂ.ಎಸ್.ಸತ್ಯಪ್ರಕಾಶ್(43) ಮೃತಪಟ್ಟಿರುವ ತಹಶೀಲ್ದಾರ್ ಎಂದು ತಿಳಿದುಬಂದಿದೆ.
ಕಾರ್ಯ ನಿಮಿತ್ತ ತಮ್ಮ ಕಾರಿನಲ್ಲಿ ಹೊರಗೆ ಹೋಗಿದ್ದ ಸತ್ಯಪ್ರಕಾಶ್ ಅವರು ಗುರುವಾರ ಮುಂಜಾನೆ 3:30ರ ಸುಮಾರಿಗೆ ಮನೆಗೆ ಬರುತ್ತಿದ್ದರು. ರಿಂಗ್ ರಸ್ತೆಯ ದೇವಿನಗರ ಕ್ರಾಸ್‌ನಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್ ಕಾಣದೆ, ಕಾರು ಚಾಲನೆ ಮಾಡಿಕೊಂಡು ಬಂದು ಢಿಕ್ಕಿ ಹೊಡೆದ ಪರಿಣಾಮ ಸತ್ಯಪ್ರಕಾಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಹೆಬ್ಬಾಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಿಂದ ಮೃತದೇಹವನ್ನು ಹೊರತೆಗೆದು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಸತ್ಯಪ್ರಕಾಶ್ ಎರಡು ವರ್ಷಗಳಿಂದ ಬಂಗಾರಪೇಟೆಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಅವರ ಕಚೇರಿ ಮತ್ತು ಮನೆ ಮೇಲೆ ಎಸಿಬಿ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಅಮಾನತ್ತಾಗಿದ್ದಾರೆ. ಕರ್ತವ್ಯದಿಂದ ಅಮಾನತ್ತಾಗಿದ್ದರಿಂದ ಬೆಂಗಳೂರಿನಲ್ಲೇ ಕುಟುಂಬದವರೊಂದಿಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.