×
Ad

ಜೆಡಿಎಸ್‌ಗೆ ಮತ ನೀಡುವ ತಪ್ಪು ನಿರ್ಧಾರ ಮಾಡಬೇಡಿ: ಮೋದಿ

Update: 2018-05-03 20:14 IST

ಬೆಂಗಳೂರು, ಮೇ 2: ರಾಜ್ಯದಲ್ಲಿ ಜೆಡಿಎಸ್ ಯಾವುದೆ ಕಾರಣಕ್ಕೂ ಸಂಪೂರ್ಣ ಬಹುಮತದೊಂದಿಗೆ ಸರಕಾರ ರಚನೆ ಮಾಡಲು ಸಾಧ್ಯವಿಲ್ಲ. ಆದುದರಿಂದ, ರಾಜ್ಯದ ಪ್ರಜ್ಞಾವಂತ ಮತದಾರರು ಜೆಡಿಎಸ್‌ಗೆ ಮತ ನೀಡುವ ತಪ್ಪು ನಿರ್ಧಾರ ಕೈಗೊಳ್ಳುತ್ತಾರೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದರು.

ಗುರುವಾರ ನಗರದ ಕೆಂಗೇರಿ ಬಳಿ ಬಿಜೆಪಿ ಅಭ್ಯರ್ಥಿಗಳ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮೂರನೆ ಸ್ಥಾನಕ್ಕೂ ತೆವಳುತ್ತಾ, ತೆವಳುತ್ತಾ ಸಾಗಲಿದೆ ಎಂದು ಎಲ್ಲ ರಾಜಕೀಯ ವಿಶ್ಲೇಷಕರು, ಸಮೀಕ್ಷೆಗಳು ತಿಳಿಸಿವೆ ಎಂದರು.

ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್‌ಗೆ ಸಾಧ್ಯವಿಲ್ಲ. ಆದುದರಿಂದ, ಬೇರೆ ರಾಜ್ಯಗಳಿಂದ ಅತೀ ಸಂಪ್ರದಾಯವಾದಿಗಳು, ಉಗ್ರವಾದಿ ಸಂಘಟನೆಗಳಿಗೆ ಬೆಂಬಲ ನೀಡುವವರೊಂದಿಗೆ ಈ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಗೆಲ್ಲುವ ಉದ್ದೇಶದಿಂದ ರಾಜ್ಯದ ಜನತೆಯ ಭವಿಷ್ಯವನ್ನೆ ಆತಂಕಕ್ಕೆ ತಳ್ಳುವ ಕೆಲಸ ಮಾಡಿದೆ ಎಂದು ನರೇಂದ್ರಮೋದಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜನತೆಯು ಮೇ 15ರಂದು ಕಾಂಗ್ರೆಸ್‌ನ ಅಂತಿಮ ಕೋಟೆಯನ್ನು ನಾಶ ಮಾಡುವ ತೀರ್ಮಾನ ಮಾಡಿದ್ದಾರೆ. 2014ರ ಲೋಕಸಭೆ ಚುನಾವಣೆ, ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳೆ ಇರಲಿ, ಕಾಂಗ್ರೆಸ್ ಪಕ್ಷ ಸೋಲುವುದು ನಿಶ್ಚಿತವಾಗುತ್ತಿದ್ದಂತೆ, ಯಾರಿಗೂ ಬಹುಮತ ಬರುವುದಿಲ್ಲ, ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂಬ ವದಂತಿಗಳನ್ನು ಹಬ್ಬಿಸಲಾಗುತ್ತದೆ ಎಂದು ಅವರು ಹೇಳಿದರು.

ಆಗ ಜನತೆ ಅರ್ಥ ಮಾಡಿಕೊಳ್ಳಬೇಕು ಬಿಜೆಪಿ ಸಂಪೂರ್ಣ ಬಹಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು. ಮೇ 15ರಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆಯಾಗುವುದು ನಿಶ್ಚಿತ ಎಂದು ನರೇಂದ್ರ ಮೋದಿ ಹೇಳಿದರು.

ರಾಜ್ಯದ ಮುಖ್ಯಮಂತ್ರಿ, ಸಚಿವರು ಒಬ್ಬರಿಗಿಂತ ಒಬ್ಬರು ಮಿಗಿಲಾಗಿದ್ದಾರೆ. ಇವರ ಆಟವನ್ನು ಜನತೆ ಅರ್ಥ ಮಾಡಿಕೊಂಡಿದ್ದಾರೆ. ಈ ಸರಕಾರ, ಮುಖ್ಯಮಂತ್ರಿ ಹಾಗೂ ಪಕ್ಷದ ಮೇಲೆ ಜನತೆಗೆ ನಂಬಿಕೆಯೇ ಇಲ್ಲ. ಹಾಗಿದ್ದರೆ ಇವರ ಅಗತ್ಯವೇನು? ಎಂದು ಅವರು ಪ್ರಶ್ನಿಸಿದರು.

ಸಿಲಿಕಾನ್ ವ್ಯಾಲಿಯನ್ನು ಪಾಪದ ಕಣಿವೆ, ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿ, ಕಂಪ್ಯೂಟರ್ ರಾಜಧಾನಿಯನ್ನು ಅಪರಾಧದ ರಾಜಧಾನಿ, ಕಾಸ್ಮೋಪಾಲಿಟಿನ್ ಸಿಟಿಯನ್ನು ಗೊಂದಲ ಗೂಡು, ಸ್ಟಾರ್ಟ್ ಅಪ್ ಹಬ್ ಅನ್ನು ಪಾಟ್ ಹೋಲ್ ಕ್ಲಬ್ ಅನ್ನಾಗಿ ಮಾಡಿದ್ದೇ ಕಾಂಗ್ರೆಸ್ ಸರಕಾರ ಬೆಂಗಳೂರಿಗೆ ನೀಡಿರುವ ಕೊಡುಗೆ ಎಂದು ಅವರು ಟೀಕಿಸಿದರು.

ಈ ಸರಕಾರದಲ್ಲಿ ಇಲಾಖೆ, ಸಚಿವರ ನಡುವೆ ಭ್ರಷ್ಟಾಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣವಾಗಿದ್ದರೆ ಅದರ ಕೆಳಗೆ ಹಣದ ಗಂಗೆ ಹರಿದು ಸಚಿವರ ಮನೆಗೆ ಸೇರುತ್ತಿತ್ತು. ಬೆಂಗಳೂರಿನ ಜನತೆ ಹಾಗೂ ಬಿಜೆಪಿಯು ಆಂದೋಲನ ಮಾಡಿದ್ದರಿಂದ ಈ ಯೋಜನೆಯನ್ನು ಸರಕಾರ ಕೈ ಬಿಡಬೇಕಾಯಿತು ಎಂದು ನರೇಂದ್ರಮೋದಿ ಹೇಳಿದರು.

ಕೇಂದ್ರ ಸರಕಾರ ವಿಶ್ವಮಟ್ಟದಲ್ಲಿ ಈಸ್ ಆಫ್ ಡೂಯಿಂಗ್ ಬಿಸಿನೆಸ್‌ಗೆ ಗುರುತಿಸಿಕೊಂಡರೆ, ಇಲ್ಲಿನ ಸರಕಾರ ಈಸ್ ಆಫ್ ಡೂಯಿಂಗ್ ಮರ್ಡರ್‌ಗೆ ಕುಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಮಹಿಳೆಯರ ರಕ್ಷಣೆ ಸವಾಲಾಗಿ ಪರಿಣಮಿಸಿದೆ. ಹೊಸ ವರ್ಷದ ಸಡಗರದ ಸಂದರ್ಭದಲ್ಲಿ ಇಲ್ಲಿ ಆಗಿರುವ ಘಟನೆಗಳು ಕಳವಳಕಾರಿ ಎಂದು ಅವರು ತಿಳಿಸಿದರು.

ಮಹಿಳೆಯರ ಮೇಲೆ ಅತ್ಯಾಚಾರ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ನಮ್ಮ ಸರಕಾರ ಜಾರಿಗೆ ತಂದಿದೆ. ಇಲ್ಲಿ ಬಿಜೆಪಿ ಸರಕಾರ ಬಂದರೆ ಆ ಕಾನೂನು ಇಲ್ಲೂ ಅನುಷ್ಠಾನವಾಗಲಿದೆ. ಶಾಸಕರ ಮಗನೊಬ್ಬ ಅಧಿಕಾರದ ಮದದಿಂದ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆಲ್ಲ ಭಯ ಬೀಳಿಸಿ ಹಲ್ಲೆ ನಡೆಸುತ್ತಾನೆ. ಇಲ್ಲಿನ ಸರಕಾರ ಆತನ ರಕ್ಷಣೆಗೆ ನಿಲ್ಲುತ್ತದೆ. ಕಾಂಗ್ರೆಸ್ ಮುಖಂಡನೊಬ್ಬ ಸರಕಾರಿ ಕಚೇರಿಯಲ್ಲಿ ನುಗ್ಗಿ ದಾಂಧಲೆ ಮಾಡುತ್ತಾನೆ ಎಂದು ನರೇಂದ್ರ ಮೋದಿ ಹೇಳಿದರು.

ಬೆಳ್ಳಂದೂರು ಕೆರೆಯಲ್ಲಿನ ಬೆಂಕಿಯ ಚಿತ್ರಗಳು ಈ ಸರಕಾರದ ಸಾಧನೆ ಬಿಂಬಿಸುತ್ತವೆ. ನೀರು ಹರಿಯುವ ಜಾಗದಲ್ಲಿ ರಾಸಾಯನಿಕ ವಸ್ತುಗಳು ಹರಿಯುತ್ತಿವೆ. ಕೆಂಪೇಗೌಡ ಕೆರೆಗಳ ನಾಡನ್ನು ಕಟ್ಟಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಅದೇ ಮಹಾನಗರವನ್ನು ಜನತೆಗೆ ಮರಳಿ ಕೊಡುತ್ತೇವೆ ಎಂದು ಅವರು ತಿಳಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ 7 ನಗರಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಕೇಂದ್ರ ಸರಕಾರವು 836 ಕೋಟಿ ರೂ.ಗಳ ನೆರವು ನೀಡಿದೆ. ಆದರೆ, ರಾಜ್ಯ ಸರಕಾರ ಈವರೆಗೆ ಖರ್ಚು ಮಾಡಿರುವುದು ಕೇವಲ 12 ಕೋಟಿ ರೂ.ಗಳು ಮಾತ್ರ. ಇನ್ನು 824 ಕೋಟಿ ರೂ.ಹಾಗೆ ಉಳಿದಿದೆ ಎಂದು ನರೇಂದ್ರ ಮೋದಿ ಹೇಳಿದರು.

ರಾಜ್ಯದ 277 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಕೇವಲ 110 ನಗರ ಸ್ಥಳೀಯ ಸಂಸ್ಥೆಗಳು ಮಾತ್ರ ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಘೋಷಿಸಲ್ಪಟ್ಟಿವೆ. ಇದಕ್ಕಿಂತ ಬೇಸರ ಸಂಗತಿ ಬೇರೆ ಏನಿದೆ? ಮಹಿಳೆಯರ ಗೌರವದ ಕುರಿತು ಈ ಸರಕಾರಕ್ಕೆ ಇರುವ ಕಾಳಜಿ ಇಷ್ಟೇ ಎಂದು ಅವರು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ ಅವರು ಮಾಡಿರುವ ಸಾಧನೆ ಏನು ಕೇಳಿದರೆ, ನಾನು ಏನು ಮಾಡಿದ್ದೇನೆ ಎಂದು ಪ್ರಶ್ನಿಸುತ್ತಿದ್ದಾರೆ. ಇದು ರಾಜ್ಯದ ಚುನಾವಣೆ, ಇಲ್ಲಿನ ಜನತೆಗೆ ನೀವು ಏನು ಮಾಡಿದ್ದೀರಿ ಅನ್ನೋದು ಮುಖ್ಯ. ರಾಜ್ಯದ ಜನರನ್ನು ಮರಳು ಮಾಡುವ ಪ್ರಣಾಳಿಕೆ ಕಾಂಗ್ರೆಸ್ ಸಿದ್ಧಪಡಿಸಿದೆ. ಸಾಸಿವೆ ಕಾಳನ್ನೂ ಪರ್ವತದಂತೆ ಬಿಂಬಿಸುವ ಕಲೆ ಸಿದ್ಧಿಸಿರುವುದು ಇಡೀ ವಿಶ್ವದಲ್ಲಿ ಕೇವಲ ಕಾಂಗ್ರೆಸ್‌ಗೆ ಮಾತ್ರ ಎಂದು ಅವರು ಹೇಳಿದರು.

ಐಟಿ ವಲಯದಲ್ಲಿ 300 ಬಿಲಿಯನ್ ಡಾಲರ್, ಬಯೋಟೆಕ್ ವಲಯದಲ್ಲಿ 50 ಬಿಲಿಯನ್ ಡಾಲರ್ ಪ್ರಗತಿ ಸಾಧಿಸುವ ಭರವಸೆಯನ್ನು ನೀಡಿದ್ದಾರೆ. ಇದು ಅಸಾಧ್ಯವಾದದ್ದು. ಸುಳ್ಳು ಹೇಳಿದರೆ ಜನಸಾಮಾನ್ಯರು ಸ್ವಲ್ಪವಾದರೂ ಒಪ್ಪಿಕೊಳ್ಳುವಂತಿರಬೇಕು ಎಂದು ಅವರು ಟೀಕಿಸಿದರು.

ರಾಮನಗರ ರೇಷ್ಮೆ ಬೆಳೆಗೆ ಖ್ಯಾತಿಯನ್ನು ಹೊಂದಿದೆ. 2022ರ ವೇಳೆಗೆ ರೇಷ್ಮೆ ಉತ್ಪಾದನೆಯಲ್ಲಿ ಎರಡು ಪಟ್ಟು ಹೆಚ್ಚಳವಾಗಬೇಕು. ರೇಷ್ಮೆ ಕೇಂದ್ರ ಅಭಿವೃದ್ಧಿಪಡಿಸಬೇಕಿದೆ. ಇದಕ್ಕಾಗಿ 2 ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಿದ್ದೇವೆ ಎಂದು ನರೇಂದ್ರಮೋದಿ ಹೇಳಿದರು.

ಸಮಾವೇಶದಲ್ಲಿ ಕೇಂದ್ರ ಸಚಿವರಾದ ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಸಂಸದ ಪಿ.ಸಿ.ಮೋಹನ್, ಬಿಜೆಪಿಯ ಅಭ್ಯರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ನಾಡಪ್ರಭು ಕೆಂಪೇಗೌಡ, ಕಲಾ ವಿರಾಟ್ ಡಾ.ರಾಜ್‌ಕುಮಾರ್, ವಿಜ್ಞಾನಿ ಸಿ.ವಿ.ರಾಮನ್, ಇಂಜಿನಿಯರ್ ವಿಶ್ವೇಶ್ವರಯ್ಯ, ನನ್ನ ದೇಶಕ್ಕೆ ಕೀರ್ತಿ ತಂದ ಬೆಂಗಳೂರಿನ ಕ್ರೀಡಾಪಟುಗಳಿಗೆ ನಮನಗಳನ್ನು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News