×
Ad

ಕಳಂಕಿತ ರೆಡ್ಡಿ ಸಹೋದರನೊಂದಿಗೆ ವೇದಿಕೆ ಹಂಚಿಕೊಂಡ ಮೋದಿ!

Update: 2018-05-03 22:41 IST

ಬಳ್ಳಾರಿ, ಮೇ 3: ಪ್ರಧಾನಿ ನರೇಂದ್ರ ಮೋದಿ ಇಂದು ಗಣಿ ಹಗರಣದಲ್ಲಿ ಪಾಲುದಾರರಾದ ಜನಾರ್ದನ ರೆಡ್ಡಿ ಸಹೋದರಲ್ಲೊಬ್ಬರಾದ ಗಾಲಿ ಸೋಮಶೇಖರ ರೆಡ್ಡಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದು ವರದಿಯಾಗಿದೆ.

ಬಳ್ಳಾರಿ ಜಿಲ್ಲಾ ಸ್ಟೇಡಿಯಂನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿದ್ದ ವೇದಿಕೆಯ ಮೇಲೆ, ಗಣಿ ಹಗರಣದಲ್ಲಿ ಭಾಗಿಯಾಗಿ ಬಳ್ಳಾರಿಯಿಂದ ಹೊರಗುಳಿಯುವಂತೆ ಕೋರ್ಟ್ ಆದೇಶ ಪಾಲಿಸುತ್ತಿರುವ ವಿವಾದಿತ ಗಾಲಿ ಜನಾರ್ದನ ರೆಡ್ಡಿಯ ಸಹೋದರರಲ್ಲೊಬ್ಬರಾದ ಗಾಲಿ ಸೋಮಶೇಖರ ರೆಡ್ಡಿ ಉಪಸ್ಥಿತರಿದ್ದದ್ದು ಹಲವರ ಹುಬ್ಬೇರಿಸಿದೆ.

ಸೋಮಶೇಖರ ರೆಡ್ಡಿಗೆ ಬಿಜೆಪಿ ಟಿಕೆಟ್ ಘೋಷಿಸಿದಾಗಲೇ ಕಾಂಗ್ರೆಸ್ ಪಕ್ಷದಿಂದ ಟೀಕೆಗೆ ಗುರಿಯಾಗಿತ್ತು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಬಗ್ಗೆ ಭಾಷಣ ಬಿಗಿಯುವ ಪ್ರಧಾನಿ ಮೋದಿ, ಗಣಿ ಆರೋಪಿಗೆ ಟಿಕೆಟ್ ಕೊಟ್ಟಿದ್ದೂ ಅಲ್ಲದೆ, ವೇದಿಕೆ ಹಂಚಿಕೊಂಡಿದ್ದು, ಬಿಜೆಪಿಯ ದ್ವಂದ್ವ ನಿಲುವನ್ನು ಪ್ರದರ್ಶಿಸಿತ್ತು. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಜನ ಮಾತನಾಡಿಕೊಳ್ಳಲಿಕ್ಕೆ ಆಸ್ಪದ ನೀಡಿದಂತಿತ್ತು.

ನೂರಾರು ಜನ ಸೇರಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ಮಾತನಾಡಿದರೆ ಹೊರತು, ಅಭ್ಯರ್ಥಿ ಸೋಮಶೇಖರ ರೆಡ್ಡಿ ಬಗ್ಗೆ ಒಂದೇ ಒಂದು ಪದವನ್ನೂ ಮಾತನಾಡದಿದ್ದುದು, ನೆರೆದಿದ್ದ ಜನರ ಕುತೂಹಲಕ್ಕೆ ಕಾರಣವಾಗಿತ್ತು.

ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು

ಬಳ್ಳಾರಿಯಲ್ಲಿ ಗಣಿ ಲೂಟಿಕೋರರಾದ ಗಾಲಿ ರೆಡ್ಡಿ ಸಹೋದರರೊಂದಿಗೆ ವೇದಿಕೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು.

-ಸಿದ್ದರಾಮಯ್ಯ, ಟ್ವಿಟರ್‌ನಲ್ಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News