×
Ad

ಶಿಕ್ಷಣ ಇಲಾಖೆ ಹೊರಡಿಸಿದ್ದ ಮೇ 2ರ ಸುತ್ತೋಲೆ ವಾಪಸಿಗೆ ಶಾಸಕರ ಮನವಿ

Update: 2018-05-03 23:34 IST

ಬೆಂಗಳೂರು, ಮೇ 3: ಶಿಕ್ಷಣ ಇಲಾಖೆ ಮೇ 2ರಿಂದ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸುವಂತೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಉಪಸಭಾಪತಿ ಮರಿತಿಬ್ಬೇಗೌಡ ನೇತೃತ್ವದಲ್ಲಿ ವಿಧಾನಪರಿಷತ್ ಸದಸ್ಯರು ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾಗೆ ಮನವಿ ಸಲ್ಲಿಸಿದರು.

ಗುರುವಾರ ವಿಧಾನಸೌಧದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರನ್ನು ಭೇಟಿ ಮಾಡಿದ ಪರಿಷತ್ ಸದಸ್ಯರು, ಎ.11ರಂದು ಶಿಕ್ಷಣ ಇಲಾಖೆ ಮೇ 2ರಿಂದ ಕಾಲೇಜು ಪ್ರಾರಂಭಿಸುವಂತೆ ಸುತ್ತೋಲೆ ಹೊರಡಿಸುವ ಮೂಲಕ ಶಿಕ್ಷಕರ ರಜೆಯನ್ನು ಒಂದು ತಿಂಗಳು ಕಡಿತಗೊಳಿಸಿ, ಉಪನ್ಯಾಸಕರ ಹಕ್ಕನ್ನು ಕಸಿಯುವಂತೆ ಮಾಡಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಪನ್ಯಾಸಕರು ಹಿಂದಿನಿಂದಲೂ ಇಲಾಖೆಯ ನಿರ್ದೇಶನದಂತೆ ಹೆಚ್ಚುವರಿ ಹಾಗೂ ರವಿವಾರ ವಿಶೇಷ ತರಗತಿಗಳನ್ನು ತೆಗೆದುಕೊಂಡು, ತಮ್ಮ ಖಾಸಗಿ ಬದುಕನ್ನು ತ್ಯಾಗ ಮಾಡಿದ್ದಾರೆ. ಇದರ ಜೊತೆಗೆ ಶಿಕ್ಷಕರನ್ನು ಮೇ 15ರವರೆಗೆ ಚುನಾವಣಾ ಕಾರ್ಯದಲ್ಲಿ ನಿಯೋಜಿಸಲಾಗುತ್ತದೆ. ಇದ್ಯಾವುದನ್ನು ಪರಿಗಣಿಸದ ಶಿಕ್ಷಣ ಇಲಾಖೆ ಮೇ 2ರಿಂದಲೆ ಪಿಯು ಕಾಲೇಜು ಪ್ರಾರಂಭಿಸುವಂತೆ ಸುತ್ತೋಲೆ ಹೊರಡಿಸಿರುವುದು ಅವೈಜ್ಞಾನಿಕವಾದ ನೀತಿಯಾಗಿದೆ ಎಂದು ಶಾಸಕರು ಆರೋಪಿಸಿದರು.

ಮೇ 2ರಿಂದ ಪದವಿಪೂರ್ವ ಕಾಲೇಜು ಪ್ರಾರಂಭವಾದರೆ ವಿದ್ಯಾರ್ಥಿಗಳಿಗೂ ಅನೇಕ ಸಮಸ್ಯೆಗಳು ಎದುರಾಗಲಿವೆ. ಇನ್ನು ಕಾಲೇಜು ಹಾಸ್ಟೆಲ್‌ಗಳು ಪ್ರಾರಂಭವಾಗಿಲ್ಲ. ಮೇ ತಿಂಗಳಲ್ಲಿ ಉಚಿತ ಬಸ್‌ಪಾಸ್ ವಿತರಿಸಲು ಸಾಧ್ಯವಾಗುವುದಿಲ್ಲವೆಂದು ಕೆಎಸ್ಸಾರ್ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. ಇದರಿಂದಾಗಿ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಬರುವುದಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಹೊರಡಿಸಿರುವ ಮೇ 2ರ ಸುತ್ತೋಲೆಯನ್ನು ರಾಜ್ಯ ಸರಕಾರ ಕೂಡಲೆ ಹಿಂಪಡೆದು, ಮೇ 28ರಿಂದ ಕಾಲೇಜು ಪ್ರಾರಂಭಿಸುವಂತೆ ಮತ್ತೊಂದು ಸುತ್ತೋಲೆ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಶರಣಪ್ಪ ಮಟ್ಟೂರು, ರಮೇಶ್ ಬಾಬು, ಪುಟ್ಟಣ್ಣ ಮತ್ತಿತರರಿದ್ದರು.

ಮೇ 2ರಿಂದ ಪದವಿಪುರ್ವ ಕಾಲೇಜುಗಳನ್ನು ಪ್ರಾರಂಭಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅವರು, ಸುತ್ತೋಲೆಯನ್ನು ಕೂಡಲೆ ವಾಪಸ್ ಪಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.
-ಮರಿತಿಬ್ಬೇಗೌಡ, ಉಪಸಭಾಪತಿ, ವಿಧಾನಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News